ಮಲೆನಾಡಿನಲ್ಲಿ ಮಳೆ ಅಬ್ಬರ: ಜನ ತತ್ತರ..!
– ನಿರಂತರ ಮಳೆ ಹಿನ್ನಲೆ ಹಲವೆಡೆ ಮನೆಗಳು ಕುಸಿತ
– ಅನೇಕ ಕಡೆ ಅವಘಡ: ವಿದ್ಯುತ್, ನೆಟ್ವರ್ಕ್ ಇಲ್ಲ
– ನದಿ, ಹಳ್ಳಗಳಲ್ಲಿ ಹೆಚ್ಚಿದ ನೀರು: ಅಡಿಕೆ ಉದುರುತ್ತಾ?
NAMMUR EXPRESS NEWS
ಚಿಕ್ಕಮಗಳೂರು/ ಶಿವಮೊಗ್ಗ: ಕಳೆದೊಂದು ವಾರದಿಂದ ಮಲೆನಾಡಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಅದರಲ್ಲೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ.
ತುಂಗಾ, ಭದ್ರಾ, ಶರಾವತಿ ಸೇರಿ ಬಹುತೇಕ ನದಿಗಳಲ್ಲಿ ನೀರು ಹೆಚ್ಚಾಗಿದೆ. ಮಳೆಯಿಂದಾಗಿ ಬಹುತೇಕ ಭಾಗದಲ್ಲಿ ಸಣ್ಣ ಪುಟ್ಟ ಅನಾಹುತಗಳು ಸಂಭವಿಸಿವೆ. ಮಲೆನಾಡಿನ ಬಹುತೇಕ ಕಡೆ ವಿದ್ಯುತ್, ಮೊಬೈಲ್ ನೆಟ್ವರ್ಕ್ ಸಮಸ್ಯೆ ಹೆಚ್ಚಾಗಿದೆ. ಶಿವಮೊಗ್ಗದ ವಿವಿಧ ಡ್ಯಾಮ್ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.
ಮೂಡಿಗೆರೆಯಲ್ಲಿ ಮನೆ ಕುಸಿತ!
ಮೂಡಿಗೆರೆ ತಾಲ್ಲೂಕಿನಲ್ಲಿ ಎರಡು ಮನೆಗಳು ಕುಸಿದಿವೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಚಿನ್ನಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣಜೂರು ಗ್ರಾಮದಲ್ಲಿ ದಿನೇಶ್ ಎಂಬುವವರು ಮನೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಕುಸಿದಿದೆ. ಹಾಗೆಯೇ ಬಾಳೂರು ಹೋಬಳಿ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರು ಗ್ರಾಮದಲ್ಲಿ ಮನೆಯೊಂದು ಕುಸಿದಿದೆ. ಮೇಗೂರು ಗ್ರಾಮದ ರಾಮಯ್ಯ ಎಂಬುವವರ ಮನೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಮನೆಯ ಗೋಡೆ ಮತ್ತು ಮೇಲ್ಟಾವಣಿ ಬಹುತೇಕ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಮನೆಯವರು ಒಳಗಡೆಯೇ ಇದ್ದರು ಎಂದು ತಿಳಿದುಬಂದಿದ್ದು. ಮನೆಯವರೆಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರು ಹಲವು ಭಾಗದಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದಿವೆ.ಮಳೆ ಹೆಚ್ಚಾದ ಹಿನ್ನಲೆ ನೀರಿನ ಮೂಲ ಹೆಚ್ಚಾಗಿದೆ. ಕೆಲವು ಕಡೆ ವಿದ್ಯುತ್ ಕಂಬ ಬಿದ್ದು ವಿದ್ಯುತ್ ಸಂಪೂರ್ಣ ಸ್ಥಗಿತವಾಗಿದೆ