Categories
ಮಲ್ನಾಡ್

ಹೊಸನಗರ : ಚಿರತೆ ದಾಳಿಗೆ ಜಾನುವಾರು ಬಲಿ…!!

ಟಾಪ್ 4 ನ್ಯೂಸ್ ಮಲ್ನಾಡ್

ಹೊಸನಗರ : ಚಿರತೆ ದಾಳಿಗೆ ಜಾನುವಾರು ಬಲಿ…!!
– ಕೋಣಂದೂರು: ಹಸು ರಕ್ಷಿಸಲು ಹೋಗಿ ಕೂಲಿ ಕಾರ್ಮಿಕ ಸಾವು..!
– ಹೊಸನಗರ: ಸಾಲಬಾಧೆಯಿಂದ ರೈತ ಆತ್ಮಹತ್ಯೆ.!
– ಸಾಗರ : ಗಿಳಿ ಹಿಡಿಯಲು ಹೋದ ಯುವಕ ಸಾವು, ಇಬ್ಬರು ಪ್ರಾಣಪಾಯದಿಂದ ಪಾರು.

NAMMR EXPRESS NEWS
ಹೊಸನಗರ: ತಾಲೂಕಿನ ಪುಣಜೆ ಗ್ರಾಮದ ಬ್ರಹ್ಮೇಶ್ವರದಲ್ಲಿ ಕೆಲ ದಿನಗಳಿಂದ ಚಿರತೆ ಸಂಚರಿಸುತ್ತಿದ್ದು ಗ್ರಾಮದ ಜಾನುವಾರುಗಳು ಚಿರತೆ ದಾಳಿಗೆ ಬಲಿಯಾಗಿವೆ. ಇಲ್ಲಿನ ಅಂಬೇಡ್ಕರ್ ಕಾಲೋನಿ ಸಮೀಪದ ಅರಣ್ಯ ಪ್ರದೇಶದಲ್ಲಿ 4 ದನಗಳ ಶವದ ಅವಶೇಷಗಳು ದೊರಕಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತುಗಳನ್ನು ಗ್ರಾಮಸ್ಥರು ಪತ್ತೆ ಮಾಡಿರುವುದು, ಈ ಭಾಗದಲ್ಲಿ ಚಿರತೆಯ ಇರುವಿಕೆಯನ್ನು ದೃಢಪಡಿಸಿದೆ. ಕೆಲ ದಿನಗಳಿಂದ ಕಾಡಿಗೆ ಮೇಯಲು ಬಿಟ್ಟ ಜಾನುವಾರುಗಳು ಮನೆ ಮರಳಿ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳ ಕಳೇಬರಗಳು ಪತ್ತೆಯಾಗಿವೆ. ಚಿರತೆಯ ಇರುವಿಕೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ. ಜನನಿಬಿಡ ಪ್ರದೇಶವಾಗಿದ್ದು ಈ ಭಾಗದಲ್ಲಿ ದಟ್ಟ ಕಾಡಿಲ್ಲ. ನಾಗರಿಕ ಪ್ರದೇಶದಲ್ಲಿ ಚಿರತೆ ದಾಳಿ ನಡೆಸಿದ ಹಲವು ಘಟನೆಗಳು ರಾಜ್ಯದಲ್ಲಿ ಆಗಾಗ್ಗೆ ಕೇಳಿ ಬರುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಪತ್ತೆ ಮಾಡಿ ಅಭಯಾರಣ್ಯಕ್ಕೆ ಸಾಗಿಸಬೇಕು’ ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

– ಕೋಣಂದೂರು: ಹಸು ರಕ್ಷಿಸಲು ಹೋಗಿ ಕೂಲಿ ಕಾರ್ಮಿಕ ಸಾವು

ಕೋಣಂದೂರು : ಸಮೀಪದ ಕಾರಕೊಡ್ಲು ಎಂಬಲ್ಲಿ ಬಾವಿಗೆ ಬಿದ್ದಿದ್ದ ಹಸುವನ್ನು ಮೇಲೆತ್ತಲು ಇಳಿದಿದ್ದ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಕೂಲಿ ಕಾರ್ಮಿಕ, ಕೇರಳದ ಸತೀಶ (45) ಮೃತಪಟ್ಟವನು. ಕಾರ್ಕೊಡ್ಲುವಿನಲ್ಲಿ ರಾಘು ಎಂಬುವವರು ಇತ್ತೀಚೆಗೆ ರಿಂಗ್ ಬಾವಿ ನಿರ್ಮಿಸಿದ್ದರು. ಅದಕ್ಕೆ ಹಸುವೊಂದು ಆಕಸ್ಮಿಕವಾಗಿ ಬಿದ್ದಿತ್ತು. ಅದನ್ನು ರಕ್ಷಿಸಲು ಸತೀಶ್ ಬಾವಿಗೆ ಇಳಿದಿದ್ದಾಗ ಈ ದುರ್ಘಟನೆ ನಡೆದಿದೆ. ಸತೀಶ್ ಮತ್ತು ಹಸುವಿನ ಮೃತದೇಹವನ್ನು ಅಗ್ನಿಶಾಮಕ ದಳದವರು ಬಾವಿಯಿಂದ ಸಿಬ್ಬಂದಿ ಮೇಲಕ್ಕೆ ತೆಗೆದರು.
ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸತೀಶ್ ಅವರ ಮೃತದೇಹವನ್ನು ಕೇರಳಕ್ಕೆ ಕಳುಹಿಸಿ ಕೊಡಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಹೊಸನಗರ: ಸಾಲಬಾಧೆಯಿಂದ ರೈತ ಆತ್ಮಹತ್ಯೆ.!

ಹೊಸನಗರ : ಸಾಲ ಬಾಧೆಯಿಂದ ಬೇಸತ್ತ ಕೃಷಿಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರಂಬಳ್ಳಿ ಸಮೀಪದ ಬಾವಿಕೈ ಗ್ರಾಮದಲ್ಲಿ ನಡೆದಿದೆ. ಗಂಗಾಧರ (37) ಮೃತ ರೈತ. ಈತನು ತನ್ನ ವೃದ್ಧ ತಂದೆಯ ಹೆಸರಿನಲ್ಲಿದ್ದ 2 ಎಕರೆ ಜಮೀನಿನಲ್ಲಿ ಅಡಕೆ, ಭತ್ತ ಬೆಳೆದಿದ್ದ. ಕೃಷಿ ಚಟುವಟಿಕೆ ಉದ್ದೇಶಕ್ಕಾಗಿ ಪಟ್ಟಣದ ಪಿಕಾರ್ಡ್ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ಹಲವೆಡೆ 4.50 ಲಕ್ಷ ರೂ. ಸಾಲ ಮಾಡಿದ್ದ. ಅತಿಯಾದ ಮಳೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಂದಿರಲಿಲ್ಲ. ಸಾಲದ ತೀರುವಳಿ ಮಾಡುವ ಕುರಿತು ಇತ್ತೀಚೆಗೆ ಚಿಂತಾಕ್ರಾಂತನಾಗಿದ್ದ. ಸಾಲಬಾಧೆಯಿಂದ ಬೇಸತ್ತು ಜಮೀನಿನ ಸಮೀಪ ಇರುವ ಕಾಡುಜಾತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಕಮಲಾಕ್ಷ ನೀಡಿದ ದೂರಿನ ಮೇರೆಗೆ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಸಾಗರ : ಗಿಳಿ ಹಿಡಿಯಲು ಹೋದ ಯುವಕ ಸಾವು, ಇಬ್ಬರು ಪ್ರಾಣಪಾಯದಿಂದ ಪಾರು.

ಸಾಗರ : ತೆಂಗಿನ ಮರದ ಮೇಲೆ ಗೂಡು ಕಟ್ಟಿದ್ದ ಗಿಳಿಯನ್ನು ಹಿಡಿಯುವ ಸಾಹಸದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತೆಂಗಿನ ಮರ ತಲೆ ಮೇಲೆ ಬಿದ್ದು ಸಚಿನ್ (24) ಕೊನೆಯುಸಿರೆಳೆದಿದ್ದಾನೆ. ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇನ್ನಿಬ್ಬರು ಯುವಕರು ಪಾರಾಗಿದ್ದಾರೆ. ಭೂತಯ್ಯನ ಕಟ್ಟೆ ಸಮೀಪ ಒಣಗಿದ ಮರದ ತುದಿಯಲ್ಲಿ ಗಿಳಿಯೊಂದು ಗೂಡು ಕಟ್ಟಿತ್ತು.
ಮರ ಉರುಳಿಸಿ ಗೂಡು ಮತ್ತು ಗಿಳಿಯನ್ನು ಸೆರೆ ಹಿಡಿಯಲು ಯುವಕರು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಮರ ಕತ್ತರಿಸುವಾಗ ಒಣಗಿದ ಮರ ಯುವಕರತ್ತ ಉರುಳಿದೆ. ಸಚಿನ್ ಎಂಬಾತನ ತಲೆ ಮೇಲೆ ಮರ ಬಿದ್ದಿದ್ದು, ಆತನ ಸಾವನ್ನಪ್ಪಿದೆ.
ಸಚಿನ್ ಜೊತೆಗೆ ತೆರಳಿದ್ದ ಇನ್ನಿಬ್ಬರು ಯುವಕರು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.