ಟಾಪ್ 4 ನ್ಯೂಸ್ ಮಲ್ನಾಡ್
ಕಳಸ: ಅರಣ್ಯದಲ್ಲಿ ಕಾಡ್ಗಿಚ್ಚು, ಕಿಡಿಗೇಡಿಗಳ ಕೃತ್ಯಕ್ಕೆ 1 ಎಕರೆ ನಾಶ..!!
– ಹೊಸನಗರ : ಈಜಲು ಹೋದ ಬಾಲಕ ಸಾವು..!
– ತರೀಕೆರೆ: ತೋಟದ ಬೆಳೆಗಳಿಗೆ ಈಗ ಕಾಡು ಹಂದಿಗಳ ಕಾಟ..!!
– ಶೃಂಗೇರಿ: ತುಂಗಾ ನದಿಯಲ್ಲಿ ಅಪರಿಚಿತ ಶವ ಪತ್ತೆ..!
NAMMUR EXPRESS NEWS
ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಪಂ ವ್ಯಾಪ್ತಿಯಲ್ಲಿರುವ ಕೊಟ್ಟಿಗೆಹಾರ-ಕಳಸ ಸಂಪರ್ಕ ರಸ್ತೆಗೆ ಹೊಂದಿಕೊಂಡಿರುವ ಮಿಲ್ಲುಗುಡ್ಡದ ಸುಮಾರು 1 ಎಕರೆ ಅರಣ್ಯ ಪ್ರದೇಶ ಸೋಮವಾರ ಬೆಂಕಿಗೆ ಆಹುತಿಯಾಗಿದೆ. ಕಳಸ ತಾಲೂಕು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವುದಲ್ಲದೆ ಧಾರ್ಮಿಕ ಯಾತ್ರಾ ಸ್ಥಳವೂ ಆಗಿದೆ. ಹೀಗೆ ಬರುವ ಪ್ರವಾಸಿಗರು ರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡು ಸಿಗರೇಟು ಸೇದುವುದು, ಮದ್ಯಪಾನ ಮಾಡುವುದು ಸಾಮಾನ್ಯವಾಗಿದೆ. ಸಿಗರೇಟು ಸೇದುವ ಕಿಡಿಗೇಡಿಗಳ ಕೃತ್ಯದಿಂದಾಗಿ ಮರಸಣಿಗೆ ಗ್ರಾಮ ಹಾಗೂ ಹಿರೇಬೈಲು ಗ್ರಾಮಗಳ ನಡುವೆ ಇರುವ ಮಿಲ್ಲುಗುಡ್ಡ ಎಂಬಲ್ಲಿನ ಅರಣ್ಯಕ್ಕೆ ಬೆಂಕಿ ಹರಡಿದೆ ಎಂದು ಸ್ಥಳೀಯರು ಹೇಳುತ್ತಿದ್ದು ಬೆಂಕಿಯ ಕೆನ್ನಾಲಿಗೆ ಸುಮಾರು ಎಕರೆ ಅರಣ್ಯ ಪ್ರದೇಶ ಆಹುತಿಯಾಗಿದೆ ಎನ್ನಲಾಗಿದೆ. ಅರಣ್ಯಕ್ಕೆ ಬೆಂಕಿ ವ್ಯಾಪಿಸಿದ ಸುದ್ದಿ ತಿಳಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
– ಹೊಸನಗರ : ಈಜಲು ಹೋದ ಬಾಲಕ ಸಾವು..!
ಹೊಸನಗರ: ನೀರಿನಲ್ಲಿ ಈಜಲು ಹೋದ ಬಾಲಕನೊರ್ವ ಮುಳುಗಿ ಸಾವು ಕಂಡ ಘಟನೆ ತಾಲ್ಲೂಕಿನ ಬ್ರಹ್ಮಶ್ವರದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ. ಮಾರುತಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಮಂತ (15) ಮೃತ ಬಾಲಕ ಆಗಿದ್ದಾನೆ. ಬ್ರಹ್ಮಶ್ವರದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಮುರುಗೇಶ್ ಮತ್ತು ಲಕ್ಷ್ಮಿ ದಂಪತಿಗಳ ಏಕೈಕ ಪುತ್ರ ಆಗಿದ್ದಾನೆ.
ಭಾನುವಾರ ಸಂಜೆ ಕೆಲಸಕ್ಕೆ ಹೋಗಿದ್ದ ತಂದೆ ತಾಯಿ ಮನೆಗೆ ಮರಳಿದಾಗ ಮಗ ಇಲ್ಲದನ್ನು ಕಂಡು ಅಕ್ಕ-ಪಕ್ಕದವರನ್ನು ವಿಚಾರಿಸಿದ್ದಾರೆ. ಬಳಿಕ ಹುಡುಕಾಡಿದಾಗ ಕಲ್ಲುಕ್ವಾರೆಯಲ್ಲಿ ಸಂಗ್ರಹವಾಗ ನೀರಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ರಜಾದಿನವಾದ ಭಾನುವಾರ ಈಜಲು ಹೋದಾಗ ಈ ದುರ್ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ತರೀಕೆರೆ: ತೋಟದ ಬೆಳೆಗಳಿಗೆ ಈಗ ಕಾಡು ಹಂದಿಗಳ ಕಾಟ..!!
ತರೀಕೆರೆ: ಕಾಡಾನೆಗಳ ದಾಳಿಯಿಂದ ಅಡಿಕೆ, ತೆಂಗು, ಬಾಳೆ,
ಇನ್ನಿತರ ತೋಟದ ಬೆಳೆಗಳನ್ನು ಕಳೆದುಕೊಳ್ಳುತ್ತಿರುವ ಲಿಂಗದಹಳ್ಳಿ ಹೋಬಳಿಯ ರೈತರಿಗೆ ಈಗ ಕಾಡುಹಂದಿಗಳ ಕಾಟವೂ ಶುರುವಾಗಿದೆ. ನಂದಿಬಟ್ಟಲು ಮತ್ತು ತಿಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಬೆಳೆಗಳನ್ನು ರಾತ್ರಿಯ ವೇಳೆ ಕಾಡು ಹಂದಿಗಳು ಮುರಿದು ತಿಂದು ಹಾಕುತ್ತಿವೆ. ಇದರಿಂದ ಮೂರು ವರ್ಷ ಒಳಗಿನ ಅಡಿಕೆ ಮತ್ತು ತೆಂಗಿನಮರಗಳು ನೆಲಕ್ಕುರುಳುತ್ತಿದ್ದು, ಕಷ್ಟಪಟ್ಟು ಬೆಳೆದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ ಎಂದು ತಿಗಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅಮುದ ತಿಳಿಸಿದರು. ಕಲ್ಲತ್ತಿಪುರದ ರೈತ ಸೆಲ್ವರಾಜ್ ಅವರು ಇದೇ ಗ್ರಾಮದ ಸರ್ವೆ ನಂಬರ್ 46 ರಲ್ಲಿರುವ 3 ಎಕರೆ ಜಮೀನಿನಲ್ಲಿ ಕಳೆದ 5 ವರ್ಷಗಳ ಹಿಂದೆ ಅಡಿಕೆ ಸಸಿಗಳನ್ನು ನೆಟ್ಟಿದ್ದರು. ಸಮೃದ್ಧವಾಗಿ ಬೆಳೆದಿದ್ದ ಅಡಿಕೆ ತೋಟಕ್ಕೆ ರಾತ್ರಿ ಸಮಯದಲ್ಲಿ ಕಾಡು ಹಂದಿಗಳ ಗುಂಪು ದಾಳಿ ಮಾಡಿ ಸುಮಾರು 70 ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಮುರಿದು ಹಾಕಿದೆ. ಇದುವರೆಗೂ ರಾಗಿ, ಭತ್ತ, ಜೋಳ, ಶೇಂಗಾ ಮುಂತಾದ ಮಳೆಯಾಶ್ರಿತ ಬೆಳೆಗಳನಷ್ಟೆ ತಿಂದು ಹಾಕುತ್ತಿದ್ದ ಕಾಡು ಹಂದಿಗಳು ಇತ್ತೀಚಿನ ಕೆಲ ದಿನಗಳಿಂದ ಅಡಿಕೆ, ತೆಂಗು, ಬಾಳೆ ಮುಂತಾದ ತೋಟದ ಬೆಳೆಗಳನ್ನು ಹಾಳುಮಾಡಿತ್ತವೆ. ಬ್ಯಾಂಕ್ ಇನ್ನಿತರೆ ಕಡೆಗಳಿಂದ ಸಾಲ ಮಾಡಿ ಬೆಳೆ ಮಾಡಿರುವ ನಮ್ಮಂತಹ ರೈತರಿಗೆ ವ್ಯವಸಾಯವೇ ತ್ರಾಸದಾಯಕ ಎಂಬಂತಾಗಿದೆ ಎಂದು ನೊಂದ ರೈತ ಸೆಲ್ವರಾಜ್ ಹೇಳಿದರು.
– ಶೃಂಗೇರಿ: ತುಂಗಾ ನದಿಯಲ್ಲಿ ಅಪರಿಚಿತ ಶವ ಪತ್ತೆ
ಶೃಂಗೇರಿ: ತುಂಗಾ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಗಾಂಧಿ ಮೈದಾನದಲ್ಲಿ ಇಂದು ಬೆಳಿಗ್ಗೆ ದಡದಲ್ಲಿ ಶವ ತೆಲುತ್ತಿರುವ ದೃಶ್ಯ ಕಂಡುಬಂದಿದ್ದು, ತಕ್ಷಣವೇ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ನೆರವಿನಿಂದ ಶವವನ್ನು ಮೇಲೆತ್ತಿದ್ದು ಗುರುತು ಪತ್ತೆಯಾಗಿಲ್ಲ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.