ಸಿಡಿಲು ಎಚ್ಚರ: ಸಿಡಿಲಿಂದ ಬಚಾವ್ ಆಗೋದು ಹೇಗೆ?
– ಜನ ಏನು ಮಾಡಬೇಕು? ಏನು ಮಾಡಬಾರದು?
– ಕೃಷಿ ಹೊಂಡಕ್ಕೆ ಬಿದ್ದು ನಾಲ್ವರು ಮಕ್ಕಳ ದುರ್ಮರಣ
– ಶಿವಮೊಗ್ಗದಲ್ಲಿ ಸಿಡಿಲಿನ ಹೊಡೆತಕ್ಕೆ ವ್ಯಾಪಾರಿ ಬಲಿ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಳೆ ಶುರುವಾಗಿದೆ. ಮಳೆ ಕಾರಣ ಎಲ್ಲೆಡೆ ಅವಘಡ ಸಂಭವಿಸುತ್ತಿದೆ. ಈ ಬಾರಿ ಈಗಾಗಲೇ ಕಳೆದ 15 ದಿನಗಳಿಂದ ರಾಜ್ಯದಲ್ಲಿ ಭಾರೀ ಗುಡುಗು ಸಿಡಿಲು ಮಿಂಚು ಸಮೇತ ಮಳೆ ಆಗುತ್ತಿದೆ. ರಾಜ್ಯದಲ್ಲಿ 15ಕ್ಕೂ ಹೆಚ್ಚು ಮಂದಿ ಈಗಾಗಲೇ ಸಿಡಿಲಿಗೆ ಬಲಿ ಆಗಿದ್ರೆ, ಅನೇಕ ಕಡೆ ವಿದ್ಯುತ್ ಅವಘಡಗಳು ನಡೆದಿವೆ. ಸಿಡಿಲಿಗೆ ಮನುಷ್ಯರು ಮತ್ತು ಪ್ರಾಣಿಗಳು ಸಿಡಿಲಿಗೆ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಗುಡುಗು ಮತ್ತು ಸಿಡಿಲು ಬರುವ ಸಮಯದಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಜನ ಏನು ಮಾಡಬೇಕು? ಏನು ಮಾಡಬಾರದು?
– ಮೊದಲಿಗೆ ಹೊರಗೆ ಹೋಗಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ಹವಾಮಾನದ ಮುನ್ಸೂಚನೆಯನ್ನು ಗಮನಿಸಿಕೊಳ್ಳಬೇಕು, ಆದಷ್ಟು ಕೃಷಿ ಮಾಡುವುದು, ಮೀನುಗಾರಿಕೆ, ಜಾನುವಾರುಗಳನ್ನು ಮೇಯಿಸುವುದು ಅಥವಾ ಇತರ ಪ್ರಯಾಣವನ್ನು ಕೈಗೊಳ್ಳುವುದನ್ನು ಇಂತಹ ಸಂದರ್ಭದಲ್ಲಿ ನಿಲ್ಲಿಸಬೇಕು.
– ಒಂದು ವೇಳೆ ಬೆಟ್ಟ ಅಥವಾ ಗುಡ್ಡದಂತಹ ಎತ್ತರದ ಪ್ರದೇಶಗಳಲ್ಲಿ ಇದ್ದರೆ ತಕ್ಷಣ ಅಲ್ಲಿಂದ ಕೆಳಗಡೆ ಬರುವುದು ಉತ್ತಮ. ತಗಡು ಮತ್ತು ಇತರ ಲೋಹಗಳಿಂದ ತಯಾರಿಸಿರುವ ಮನೆಗಳ ಬದಲಾಗಿ, ಯಾವುದೇ ಸುರಕ್ಷಿತ ಕಟ್ಟಡಗಳಲ್ಲಿ ಮಳೆಯ ಸಂದರ್ಭದಲ್ಲಿ ಆಶ್ರಯ ಪಡೆದುಕೊಳ್ಳುವುದು.
– ನೀರಿನ ಸಮೀಪ ಅಂದರೆ ಕೆರೆ,ತೋಡು, ನದಿ, ವಿದ್ಯುತ್ ಗೋಪುರಗಳು, ರೈಲು ಹಳಿಗಳಿಂದ ದೂರವಿರುವುದು.
– ಒಂದು ವೇಳೆ ಖಾಸಗಿ ವಾಹನಗಳಲ್ಲಿ ಪ್ರಯಾಣ ಕೈಗೊಂಡಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಡುಗು, ಮಿಂಚು, ಸಿಡಿಲು, ಮಳೆ ಎದುರಾದರೆ ವಾಹನವನ್ನು ನಿಲ್ಲಿಸಿ ಯಾವುದಾದರೂ ಕಟ್ಟಡದ ಒಳಗೆ ಆಶ್ರಯ ಪಡೆದುಕೊಳ್ಳುವುದು ಮತ್ತು ಹೆಚ್ಚು ಜನದಟ್ಟಣೆ ಇರುವ ಸ್ಥಳವಾಗಿದ್ದರೆ ಅಂತರವನ್ನು ಕಾಯ್ದುಕೊಳ್ಳುವುದು.
– ಮನೆ ಅಥವಾ ಕಟ್ಟಡದ ಒಳಗಡೆ ಇಲ್ಲದೆ, ಹೊರಗಿದ್ದಲ್ಲಿ ಮಂಡಿಯೂರಿ ಕೂತು ಕಿವಿ ಮುಚ್ಚಿಕೊಳ್ಳುವುದು. ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಕಾರಣ ಮರಗಳ ನಡುವೆ ಆಶ್ರಯ ಪಡೆದುಕೊಳ್ಳುವುದು ಅಥವಾ ವಿದ್ಯುತ್ ಕಂಬಗಳ ಸಮೀಪದಲ್ಲಿ ನಿಲ್ಲುವುದನ್ನು ತಡೆಗಟ್ಟಬೇಕು.
– ಲೋಹದ ವಸ್ತುಗಳು, ಬೈಕ್, ತಂತಿಬೇಲಿಗಳಿಂದ ದೂರವಿರುವುದು. ಇಂತಹ ಸಂದರ್ಭದಲ್ಲಿ ಮೊಬೈಲ್ ಫೋನ್, ಕಬ್ಬಿಣದ ಕೊಡೆಯ ಬಳಕೆಯನ್ನು ಮಾಡದಿರುವುದು.
– ಸ್ನಾನ ಮಾಡುವುದು, ಪಾತ್ರೆ ತೊಳೆಯುವುದು ಮತ್ತು ಬಟ್ಟೆ ಒಗೆಯುವಂತಹ ಕೆಲಸಗಳನ್ನು ಈ ಸಂದರ್ಭಗಳಲ್ಲಿ ಮಾಡಲು ಹೋಗಬಾರದು.
– ಮಕ್ಕಳು, ವಯೋವೃದ್ಧರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ನೋಡಿಕೊಳ್ಳುವುದು, ಕಾಡ್ಗಿಚ್ಚಿಗೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ.
ತುರ್ತು ಸೇವೆಗಳಿಗೆ ಸಂಪರ್ಕಿಸಿ: ಟೋಲ್ ಫ್ರೀ ಸಂಖ್ಯೆ:1077
ಈಜಲು ಹೋಗಿದ್ದ 4 ಮಕ್ಕಳು ಸಾವು
ಯಾದಗಿರಿ: ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಈಜಾಟವಾಡಲು ತೆರಳಿದ್ದ ನಾಲ್ಕು ಜನ ಮಕ್ಕಳು ಜಲಸಮಾಧಿಯಾಗಿರುವ ಘಟನೆ, ಭಾನುವಾರದಂದು ನಗನೂರು ಗ್ರಾಮದಲ್ಲಿ ನಡೆದಿದೆ. ಮೃತ ಮಕ್ಕಳನ್ನು ಶರತ್, ಹನುಮೇಶ್, ಕಿರಣ್ ಮತ್ತು ಬಸಮ್ಮ ಎಂದು ಗುರುತಿಸಲಾಗಿದೆ. ರೈತರ ಅನುಕೂಲಕ್ಕಾಗಿ ಮಾಡಿಕೊಂಡಿರುವ ಕೃಷಿಹೊಂಡಗಳು ಇತ್ತೀಚಿನ ದಿನಗಳಲ್ಲಿ ಸುತ್ತಲು ರಕ್ಷಣಾ ಬೇಲಿ ಇಲ್ಲದೆ ಆಟವಾಡಲು ಹೋಗುವ ಮಕ್ಕಳ ಪಾಲಿಗೆ ಮೃತ್ಯುಕೂಪವಾಗಿ ಪರಿವರ್ತನೆಗೊಂಡಿರುವುದು ದುರಂತ.
ಶಿವಮೊಗ್ಗದಲ್ಲಿ ಸಿಡಿಲಿನ ಹೊಡೆತಕ್ಕೆ ವ್ಯಾಪಾರಿ ಬಲಿ!
ಶಿವಮೊಗ್ಗ: ಶಿವಮೊಗ್ಗದಲ್ಲಿ ಸೋಮವಾರದಂದು ತೀವ್ರತರವಾಗಿ ಸಿಡಿಲು ಬಡಿದಿದ್ದು, ಪರಿಣಾಮವಾಗಿ ವ್ಯಾಪಾರಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾರನಹಳ್ಳಿ ನಿವಾಸಿಯಾಗಿದ್ದು, ರಾಮನಗರದಲ್ಲಿ ಚಿಕನ್ ಅಂಗಡಿಯನ್ನು ನಡೆಸುತ್ತಿದ್ದ ಶೇಖ್ ಮುಜೀಜ್ ಸಿಡಿಲಿನ ಹೊಡೆತಕ್ಕೆ ಬಲಿಯಾದ ದುರ್ದೈವಿ ಅಂಗಡಿಯಲ್ಲಿ ವ್ಯಾಪಾರ ನಿರತರಾಗಿದ್ದ ಸಂದರ್ಭದಲ್ಲಿ, ಅಂಗಡಿಯ ಪಕ್ಕದಲ್ಲಿದ್ದ ಮರಕ್ಕೆ ಸಿಡಿಲು ಹೊಡೆದಿದ್ದು, ಅದರ ಹತ್ತಿರವೇ ಇದ್ದ ಶೇಖ್ ಮುಜೀಜ್ ಅವರಿಗೂ ತಗುಲಿ ಈ ದುರ್ಘಟನೆ ಸಂಭವಿಸಿದೆ. ಇದರಿಂದಾಗಿ ಶೇಖ್ ಮುಜೀಜ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈ ಘಟನೆಯು ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
