ಮಲೆನಾಡ ಪ್ರವಾಸೋದ್ಯಮ ಹೈ ಸ್ಪೀಡ್..!
– ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಯಿಂದ ಪ್ರವಾಸಿಗರ ಆಗಮನ
– ಶಿವಮೊಗ್ಗ, ಚಿಕಮಗಳೂರು ಈಗ ಫೇಮಸ್
– ದೇವಸಸ್ಥಾನ, ನೈಸರ್ಗಿಕ ತಾಣಗಳು ಈಗ ಫುಲ್
NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಸದ್ಯ ಚಳಿ ಜೋರಾಗಿದೆ. ಈ ಚಳಿಯ ವಾತಾವರಣಕ್ಕೆ ಇಬ್ಬನಿ ಮತ್ತಷ್ಟು ತಂಪು ನೀಡುತ್ತಿದೆ. ಗಿಡ ಮರಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಹೂವುಗಳ ಸೌಂದರ್ಯಕ್ಕೆ ಮತ್ತಷ್ಟು ಅಂದ ಬಂದಿದೆ. ಮಲೆನಾಡಿನ ಜನ ಈ ವಾತಾವರಣವನ್ನ ಸಖತ್ ಎಂಜಾಯ್ ಮಾಡ್ತಿದ್ದಾರೆ. ಇಬ್ಬನಿ ನಡುವೆ ಮಲೆನಾಡಿನ ಅಂದ ಅನುಭವಿಸಲು ಇತ್ತ ಹೆಜ್ಜೆ ಹಾಕ್ತಿರೋ ಪ್ರವಾಸಿಗರು ಕ್ಯಾಮರಾ ಕಣ್ಣಲ್ಲಿ ಅದನ್ನ ಸೆರೆ ಹಿಡಿಯುತ್ತಿದ್ದಾರೆ. ಸೆಲ್ಫಿ ತೆಗೆದುಕೊಂಡು ಮಸ್ತಿ ಮಾಡ್ತಿದ್ದಾರೆ. ಒಟ್ಟಿನಲ್ಲಿ, ಮಲೆನಾಡಿನ ಪ್ರಕೃತಿ ಸೌಂದರ್ಯವನ್ನ ನೋಡೋದೇ ರೋಮಾಂಚನ. ಇದರ ಜೊತೆಗೆ ಕಳೆದ ಹಲವು ದಿನಗಳಿಂದ ನಗರದಲ್ಲಿ ಇಬ್ಬನಿ ಸೃಷ್ಟಿಸಿರೋ ಹೊಸ ಲೋಕಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಇಂತಹ ಅದ್ಭುತ ಮಲೆನಾಡಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬೇರೆ ಬೇರೆ ಊರುಗಳಿಂದ ಜನರು ಮಲೆನಾಡಿಗೆ ಬರುತ್ತಿದ್ದಾರೆ. ಮಲೆನಾಡು ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿ ಪರಿಣಮಿಸಿದ್ದು, ಅದನ್ನು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಂಕಿ–ಅಂಶಗಳೇ ದೃಢಪಡಿಸುತ್ತವೆ.
ಜೋಗದ ವೈಭವ, ಆಗುಂಬೆ ಪ್ರಕೃತಿ ಸಿರಿ!
ಜೋಗದ ವೈಭವ, ಆಗುಂಬೆಯ ಸಿರಿ, ಸಿಗಂದೂರು ಚೌಡೇಶ್ವರಿ ಕ್ಷೇತ್ರ, ಗುಡವಿ-ಮಂಡಗದ್ದೆಯ ಪಕ್ಷಿಗಳ ಕಲರವ, ಸಕ್ರೆಬೈಲು, ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ, ಚಂದ್ರಗುತ್ತಿ, ಕೆಳದಿ, ಕೊಡಚಾದ್ರಿ, ಕವಲೇ ದುರ್ಗಾ, ಕುಪ್ಪಳ್ಳಿ, ಬಾಬಾ ಬುಡನ್ ಗಿರಿ, ಮುಳ್ಳಯ್ಯನಗಿರಿ, ಶೃಂಗೇರಿ, ಸಿರಿಮನೆ ಫಾಲ್ಸ್ ಸೇರಿದಂತೆ ಮಲೆನಾಡಿನ ಪ್ರವಾಸಿ ಸ್ಥಳಗಳನ್ನು ನೋಡಲು ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಈಗ ಸಕ್ಕತ್ ಫೇಮಸ್ ಆಗಿದೆ.
ಚಾರಣಕ್ಕೆ ಅನುಮತಿ ಇಲ್ಲ
ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪರ್ವತಗಳಿಗೆ ಸರ್ಕಾರ ಅನುಮತಿ ಪಡೆದರೆ ಮಾತ್ರ ಅವಕಾಶ ನೀಡುತ್ತಿದೆ. ಈ ಬಗ್ಗೆ ಪ್ರವಾಸಿಗರು ಮಾಹಿತಿ ಪಡೆದುಕೊಂಡು ಪಯಣಿಸಬೇಕಿದೆ.