ಅಯ್ಯೋ ಮಲೆನಾಡಲ್ಲಿ ಬಿಸಿಲ ಕೆಂಡ!
– ಇತಿಹಾಸದಲ್ಲೇ ದಾಖಲೆ ತಾಪಮಾನ
– ಕೃಷಿಗೂ ನೀರಿಲ್ಲ… ಕುಡಿಯಲು ನೀರಿಲ್ಲ
NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಬಿಸಿಲಿನ ಪ್ರಮಾಣ ದಿನೇದಿನ ಏರುತ್ತಿದ್ದು, ಹಗಲಿನಲ್ಲಿ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ. ಮನೆಯೊಳಗೂ ಕೂಡ ಉರಿ ಬಿಸಿಲಿನ ಶಾಖ ತಟ್ಟುತ್ತಿದೆ. ಫ್ಯಾನ್ ಬಳಸದೆ ಮನೆಯೊಳಗೆ ಕುಳಿತುಕೊಳ್ಳುವುದು ಅಸಾಧ್ಯ ಎಂಬಂತಾಗಿದೆ. ಇತಿಹಾಸದಲ್ಲೇ ಮೊದಲ ಬಾರಿ 40 ಡಿಗ್ರಿಸೆಲ್ಸಿಯಸ್ ತಾಪಮಾನ ಮಲೆನಾಡಲ್ಲಿ ದಾಖಲಾಗುತ್ತಿದೆ.
ಮಧ್ಯರಾತ್ರಿಯವರೆಗೂ ಮನೆಯೊಳಗೆ ಶಾಖದ ವಾತಾವರಣ ಉಂಟಾಗುತ್ತಿದೆ. ಕೃಷಿ, ಬ್ಯುಸಿನೆಸ್ ಸೇರಿ ಎಲ್ಲಾ ಕ್ಷೇತ್ರದ ಮೇಲೂ ಬಿಸಿಲು ಅಡ್ಡ ಪರಿಣಾಮ ಬೀರಿದೆ.
ತಂಪು ಪಾನೀಯಗಳಿಗೆ ಡಿಮ್ಯಾಂಡ್!
ಬಿಸಿಲು ಹೆಚ್ಚಾಗಿರುವುದರಿಂದ ತಂಪು ಪಾನೀಯ, ಎಳನೀರು, ಕಬ್ಬಿನ ರಸ, ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಗಲ್ಲಿಗಳಲ್ಲಿಯೂ ಹಣ್ಣಿನ ಅಂಗಡಿಗಳು, ಜ್ಯೂಸ್ ಸೆಂಟರ್‌ಗಳು ತಲೆಎತ್ತಿವೆ. ಬಿಸಿಲು ಏರಿದಂತೆ ಹಣ್ಣಿನ ಬೆಲೆಯೂ ಏರತೊಡಗಿದೆ. ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಬಿಸಿಲು ಹೆಚ್ಚಾಗಿರುವುದರಿಂದ ಕೆಲಸಗಳಿಗೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲಿನ ಝಳಕ್ಕೆ ನದಿ, ಹಳ್ಳಗಳಲ್ಲಿ ನೀರು ಗಣನೀಯವಾಗಿ ಬತ್ತತೊಡಗಿದ್ದು, ಜಲಮೂಲಗಳು ಒಣಗತೊಡಗಿವೆ. ಬಹಳ ವರ್ಷಗಳ ಬಳಿಕ ಮಲೆನಾಡಿನಲ್ಲಿ ತೀವ್ರ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಬಿಸಿಲಿನ ತಾಪಕ್ಕೆ ಸಿಲುಕಿ ನೀರಾಯಿಸಿದ ಕಾಫಿ, ಅಡಿಕೆ ಗಿಡಗಳು ಸಹ ಒಣಗತೊಡಗಿವೆ.