ಅಂತೂ ಮಲೆನಾಡಿಗೆ ಮಳೆ ಆಗಮನ!
– ಒಂದು ತಿಂಗಳ ಬಳಿಕ ಮಳೆ
– ಕೃಷಿ ಚಟುವಟಿಕೆಗೆ ಬಂತು ಜೀವಕಳೆ
– ನಿಟ್ಟುಸಿರು ಬಿಟ್ಟ ಅನ್ನದಾತ..!
NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ವಾಡಿಕೆ ಮಳೆ ಬಾರದಿದ್ದರಿಂದ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಹೂಟಿ ಮಾಡಿದ ಗದ್ದೆಗಳು ಒಣಗಿ ನಿಂತಿದ್ದವು. ಇದೀಗ ಮಂಗಳವಾರ ಸುಮಾರು 2 ಗಂಟೆ ಆಗಮಿಸಿದ ಮಳೆಯಿಂದಾಗಿ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರದ ಛಾಯೆ ಮೂಡಿರುವಾಗಲೇ ಮಂಗಳವಾರ ಮಳೆ ಸುರಿಯಲಾರಂಭಿಸಿದ್ದು, ಜನರಲ್ಲಿ ಸಂತಸ ತಂದಿದೆ. ವರುಣ ಕೃಪೆ ತೋರದಿದ್ದರೆ ಕೃಷಿಯಷ್ಟೇ ಅಲ್ಲದೇ ಜೀವಜಲ ಮತ್ತು ಜಾನುವಾರುಗಳಿಗೆ ಖಂಡಿತ ಕಂಟಕವಾಗುತ್ತಿತ್ತು ಎಂದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಸಮರ್ಪಕವಾಗಿ ಮಳೆ ಬಾರದ್ದರಿಂದ ರೈತರು ವರುಣನ ಕೃಪೆಯಾಗಿ ದೇವರ ಮೊರೆ ಹೋಗತೊಡಗಿದ್ದರು. ಇದೀಗ ವರುಣನ ಆಗಮನದಿಂದ ಕೊಂಚ ನಿರಾಳವಾಗಿದೆ. ಆದರೆ ಮಳೆ ಇನ್ನಷ್ಟು ಬರದಿದ್ದರೆ ಖಂಡಿತ ಅಪಾಯ ತಪ್ಪಿದ್ದಲ್ಲ.
ಮಂಗಳವಾರ ಆಗಮಿಸಿದ ಮಳೆಯಿಂದ ಮಲೆನಾಡಿನ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಸಿದ್ಧಗೊಳ್ಳುತ್ತಿದ್ದಾರೆ. ಬುಧವಾರವೂ ಮೋಡದ ವಾತಾವರಣ ಕಾಣುತ್ತಿದೆ.
