ಸಂಜೆ ಮಳೆಗೆ ಕರುನಾಡು ಕಂಗಾಲು!
– ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ
– ಚಿಕ್ಕಮಗಳೂರಲ್ಲಿ ರಸ್ತೆ, ಅಪಾರ ಅಸ್ತಿ ಹಾನಿ
– ಅಡಿಕೆ ಕಾಯಿ ಉದುರಿ ರೈತರಿಗೆ ನಷ್ಟ
NAMMUR EXPRESS NEWS
ಮಲೆನಾಡು: ರಾಜ್ಯದ ಮಲೆನಾಡು ಹಾಗೂ ಕರಾವಳಿಯ ಹಲವು ಭಾಗದಲ್ಲಿ ಬುಧವಾರ ಸಂಜೆಯಿಂದ ಭಾರಿ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದಲ್ಲಿ ಸಂಜೆ ಮೇಲೆ ಭಾರೀ ಮಳೆಯಾಗಿದೆ. ತೀರ್ಥಹಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಭಾಗದಲ್ಲಿ ಮಳೆ ಅಬ್ಬರಿಸಿದೆ. ಇದರಿಂದ ನದಿ, ಹಳ್ಳಗಳಲ್ಲಿ ನೀರಿನ ಪ್ರಮಾಣ ಏರಿಕೆ ಆಗಿದೆ. ಕಳೆದ ನಾಲ್ಕು ದಿನದಿಂದ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದ್ದು, ಇದೀಗ ಬುಧವಾರ ಸಂಜೆಯಿಂದ ಹಲವೆಡೆ ಮಳೆ ಕಂಡುಬಂದಿದೆ. ಗುರುವಾರ ಕೂಡ ಮಳೆ ಸೂಚನೆ ಕಾಣುತ್ತಿದೆ.
ಕಡೂರಲ್ಲಿ ಹೈವೇ ಮುಳುಗಿತ್ತು!
ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆ ಜಲಾವೃತವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ. ರಸ್ತೆ ಜಲಾವೃತ ದ ಹಿನ್ನೆಲೆ ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡಿದ ಘಟನೆ ನಡೆಯಿತು.
ರೈತರ ಪರದಾಟ…!
ನವೆಂಬರ್ ಆಗಿರುವುದರಿಂದ ಮಲೆನಾಡಿನ ಎಲ್ಲಾ ಭಾಗಗಳಲ್ಲೂ ಅಡಿಕೆ ಕೊಯ್ಲು ಪ್ರಾರಂಭವಾಗಿದ್ದು, ಇದೀಗ ಬುಧವಾರ ಸಂಜೆಯಿಂದ ಸುರಿದ ಮಳೆಗೆ ರೈತರು ಕಂಗೆಟ್ಟಿದ್ದಾರೆ. ಅಡಿಕೆ ಒಣಗಿಸಲು ಪರದಾಟ ನಡೆಸುವಂತಾಗಿದೆ. ಇನ್ನು ಭತ್ತದ ಗದ್ದೆಗಳು ಮಳೆಗೆ ವಾಲಿಕೊಂಡಿವೆ.
ವಿದ್ಯುತ್, ಮೊಬೈಲ್ ನೆಟ್ವರ್ಕ್ ಇಲ್ಲ!
ಮಲೆನಾಡಿನಲ್ಲಿ ಭಾರೀ ಸಿಡಿಲು ಮಳೆ ಕಾರಣ ವಿದ್ಯುತ್, ಮೊಬೈಲ್ ನೆಟ್ವರ್ಕ್ ಸಂಪೂರ್ಣ ಹಲವೆಡೆ ಇರಲಿಲ್ಲ. ಇದರಿಂದ ಭಾರೀ ತೊಂದರೆ ಆಗಿತ್ತು.