ಮಲೆನಾಡು ಜನತೆ ಮತ್ತೆ ಹೋರಾಟಕ್ಕೆ ಸಜ್ಜು..!
– ಕಸ್ತೂರಿ ರಂಗನ್ ವರದಿ ಅನುಷ್ಠಾನದ ಗುಮ್ಮ
– ಕುಕ್ಕೆ ಸುಬ್ರಮಣ್ಯದಿಂದ ಹೋರಾಟ ಪ್ರಾರಂಭ
NAMMUR EXPRESS NEWS
ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಯಾವುದೇ ಕ್ಷಣದಲ್ಲಿ ಅನುಮೋದನೆ ಸಿಗಬಹುದು ಎನ್ನುವ ಆತಂಕದಲ್ಲಿರುವ ರಾಜ್ಯದ ಪಶ್ಚಿಮ ಘಟ್ಟದ ಗ್ರಾಮಗಳ ಜನರು ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ವರದಿ ಅನುಷ್ಠಾನದ ಕುರಿತು ನೀಡಿರುವ ಹೇಳಿಕೆಗಳನ್ನು ವಿರೋಧಿಸಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸುಬ್ರಹ್ಮಣ್ಯದಿಂದ ಹೋರಾಟ ಪ್ರಾರಂಭಿಸಿದೆ. ಕಸ್ತೂರಿ ವರದಿಯನ್ನು ಅನುಷ್ಠಾನ ಮಾಡಬಾರದು, ಪ್ರಾಸ್ತವಿತ ಸ್ಥಳದ ರೈತರನ್ನು ಒಕ್ಕಲಿಬ್ಬಿಸದೆ ಹಕ್ಕುಪತ್ರ ನೀಡಬೇಕು, ಜಂಟಿ ಸರ್ವೆ ನಡೆಸಬೇಕು, ಜನವಸತಿ ಇಲ್ಲದ ಪ್ರದೇಶಗಳಿಗೆ ಆನೆಗಳ ಸ್ಥಳಾಂತರ ಅಡಿಕೆ ಹಳದಿ ರೋಗ ಹಾಗೂ ಎರೆಚುಕ್ಕಿ ರೋಗದಿಂದ ಸಂತ್ರಸ್ತರಾದ ಬೆಳೆಗಾರರು ಅಸೌಖ್ಯಕೀಡಾದಾಗ ಅವರು ಬಯಸಿದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ವಿವಿಧ ಸಹಕಾರಿ ಸಂಘ, ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಕೋವಿ ಪರವಾನಿಗೆ ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.
ರಾಜ್ಯದ 7 ಜಿಲ್ಲೆಗಳ ಜನರಿಗೆ ಸಂಕಷ್ಟ
ಕಾರವಾರದಿಂದ ಚಾಮರಾಜನಗರ ತನಕ ರಾಜ್ಯದ ಏಳು ಜಿಲ್ಲೆಗಳ ಪಶ್ಚಿಮ ಘಟ್ಟ ಭಾಗದ ಸಾವಿರಾರು ಗ್ರಾಮಗಳ ಲಕ್ಷಾಂತರ ಕುಟುಂಬದವರಿಗೆ ಈ ವರದಿ ಕಂಟಕ ಪ್ರಾಯವಾಗಿದೆ. ಇದನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ 17 ವರ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಹಸುರುಪೀಠವು ಹಿಂದಿನ ಆದೇಶವನ್ನೆ ಜಾರಿಗೊಳಿಸುವಂತೆ ಆದೇಶಿಸಿದ್ದು ಸಂಬಂಧಪಟ್ಟ ಗ್ರಾಮಸ್ಥರು ಮತ್ತೆ ಬಯಕ್ಕೀಡಾಗುವಂತಾಗಿದೆ.
ವರದಿ ಅನುಷ್ಠಾನಗೊಂಡರೆ?
ವರದಿ ಅನುಷ್ಠಾನಗೊಂಡರೆ ಜನರ ಸಂಪೂರ್ಣ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತದೆ. ಅಂತಹ ಭೂಮಿಗೆ ಯಾವುದೇ ಪರಿಹಾರ ಅಥವಾ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿಯ ಉಲ್ಲೇಖವಾಗಲಿ ವರದಿಯಲ್ಲಿ ಇಲ್ಲ. ವಸತಿ ಇದರ ಕಟ್ಟಡಗಳಿಗೂ ಪರಿಹಾರ ಘೋಷಿಸಿಲ್ಲ. ಈಗಾಗಲೇ ಅರಣ್ಯ ಹಾಗೂ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿ ವಾಸಿಸುತ್ತಿರುವವರನ್ನು ಒಕ್ಕಲಿಬ್ಬಿಸಲಾಗುತ್ತದೆ. ಈಗಾಗಲೇ ಪಡೆದ ಭೂಮಿಯ ಹಕ್ಕು ಪತ್ರಗಳು, ರೈತರ ಕೋವಿ ಪರವಾನಿಗೆ ರದ್ದುಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ 48, ರಾಜ್ಯ ಹೆದ್ದಾರಿಗಳಾದ ಬಿಸಿಲೆ ಹಾಗೂ ಚಾರ್ಮಡಿ ಘಾಟಿ ರಸ್ತೆಗಳು ಹಾಗೂ ಮಂಗಳೂರು – ಬೆಂಗಳೂರು ರೈಲು ಮಾರ್ಗಗಳು ಯೋಜನೆಯ ನೀಲ ನಕಾಶೆಯಲ್ಲಿ ಒಳಪಡುವುದರಿಂದ ಭವಿಷ್ಯದಲ್ಲಿ ಇವೆಲ್ಲ ಮಾರ್ಗಗಳು ಮೆಚ್ಚಲಿವೆ. ಲಕ್ಷಾಂತರ ಮಂದಿ ನಿರ್ಗತಿಕರಾಗಲಿದ್ದಾರೆ ಎನ್ನಲಾಗುತ್ತಿದೆ.