ಮಲೆನಾಡಿನಲ್ಲಿ ಮದುವೆ ಸೀಸನ್ ಶುರು..!
– ಪಟ್ಟಣದಲ್ಲಿ ಹೆಚ್ಚಿದ ಜನಸಂಖ್ಯೆ: ಎಲ್ಲೆಡೆ ಟ್ರಾಫಿಕ್ ಜಾಮ್
– ಅಂಗಡಿಗಳಲ್ಲಿ ಖರೀದಿ ಭರಾಟೆ ಜೋರು
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಮುಗಿಯುತ್ತಿದ್ದಂತೆ ಮದುವೆ ಸೀಸನ್ ಶುರುವಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಎಲ್ಲೆಡೆ ಖರೀದಿ ಭರಟೆ ಜೋರಾಗಿ ನಡೆಯುತ್ತಿದೆ. ಒಂದು ಕಡೆ ಮದುವೆ ಶುಭ ಸಮಾರಂಭ ಕಾರ್ಯಕ್ರಮಗಳು ಶುರುವಾಗುತ್ತಿದ್ದರೆ ಇನ್ನೊಂದೆಡೆ ಖರೀದಿ ಕೂಡ ಜೋರಾಗಿ ನಡೆಯುತ್ತಿದೆ. ಅಡಿಕೆ ಕೊಯ್ಲು ಕೂಡ ಮುಗಿದಿರುವುದರಿಂದ ರೈತರು ಅಡಿಕೆ ಮಾರಿ ವಾಹನ, ಎಲೆಕ್ಟ್ರಾನಿಕ್ಸ್ ಐಟಂಸ್, ಆಭರಣ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಖರೀದಿಸಲು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಕಲ್ಯಾಣ ಮಂಟಪಗಳು ಸೋಲ್ಡ್ ಔಟ್ :
ಹಬ್ಬ-ಹರಿದಿನಗಳು ಮುಗಿಯುತ್ತಿದ್ದಂತೆ ಇದೀಗ ಮದುವೆ ಸೀಸನ್ ಜೋರಾಗಿದೆ. ಇದರಿಂದ ಪಟ್ಟಣದಲ್ಲಿ ಭರ್ಜರಿ ವ್ಯಾಪಾರ ವಹಿವಾಟು ಶುರುವಾಗಿದೆ. ಇತ್ತ ಕಲ್ಯಾಣ ಮಂಟಪಗಳು ಸೋಲ್ಡ್ ಔಟ್ ಆಗಿದ್ದರೆ, ಮದುವೆ ಡೆಕೋರೆಟರ್‌ಗಳು, ಅಡುಗೆ ಕಂಟ್ರಾಕ್ಟರ್ ಫುಲ್ ಬ್ಯುಸಿ ಆಗಿದ್ದಾರೆ. ಇನ್ನು ಬಟ್ಟೆ ಅಂಗಡಿ, ಆಭರಣದ ಅಂಗಡಿ, ಫ್ಯಾನ್ಸಿ ಸ್ಟೋರ್ ಸೇರಿದಂತೆ ಪಟ್ಟಣದ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ. ಒಟ್ಟಾರೆ, ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವವರಿಂದ ನಗರದ ಮಾರುಕಟ್ಟೆ ವಹಿವಾಟು ಜೋರಾಗಿ ನಡೆಯುತ್ತಿದೆ. ಇದರಿಂದ ವ್ಯಾಪಾರಸ್ಥರು ಲಾಭದ ನಿರೀಕ್ಷೆಯಲ್ಲಿ ಬಹಳ ಖುಷಿಯಾಗಿದ್ದಾರೆ.
