ತೀರ್ಥಹಳ್ಳಿ ಪಟ್ಟಣ ಪಂಚಾಯತ್ ರಾಜಕೀಯ ಟ್ವಿಸ್ಟ್!
– ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದ ಅಸಾದಿ
– ಸ್ವಪಕ್ಷದವರೇ ಒತ್ತಡ ಹೇರುವುದರ ಜೊತೆಗೆ ಅವಿಶ್ವಾಸ ನಿರ್ಣಯ
– ಬಿಜೆಪಿ ಆಪರೇಷನ್ ಮಾಡುತ್ತಾ..? ಕಾಂಗ್ರೆಸ್ ಏನು ಮಾಡುತ್ತೆ?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ರಾಜಕೀಯ ಟ್ವಿಸ್ಟ್ ತೆಗೆದುಕೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಆಸಾದಿ ವಾಪಸ್ ಪಡೆದಿದ್ದಾರೆ. ಸ್ವಪಕ್ಷದವರೇ ಒತ್ತಡ ಹೇರುವುದರ ಜೊತೆಗೆ ಅವಿಶ್ವಾಸ ನಿರ್ಣಯ ತಂದಿದ್ದಕ್ಕೆ ಮನ ನೊಂದ ಆಸಾದಿ ಇದೀಗ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ.
ತೀರ್ಥಹಳ್ಳಿ ಪಟ್ಟಣ ಅಭಿವೃದ್ಧಿಯತ್ತ ಕೊಂಡೋಯ್ಯುವ ಮಹದಾಸೆಯನ್ನು ಇಟ್ಟುಕೊಂಡು ಅಧ್ಯಕ್ಷ ಸ್ಥಾನವನ್ನು ಏರುವುದರ ಜೊತೆಗೆ ತೀರ್ಥಹಳ್ಳಿ ಪಟ್ಟಣದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದರು. ಜೊತೆಗೆ ಇನ್ನು ಹತ್ತು ಹಲವಾರು ಕನಸುಗಳನ್ನು ಕಂಡಿದ್ದಂತಹ ಯುವ ಮುಖಂಡರಾದ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿದ್ದ ರಹಮತ್ ಉಲ್ಲಾ ಅಸಾದಿ ಅವರನ್ನು ಸ್ವಪಕ್ಷದವರೇ ಒತ್ತಡ ಹೇರುವುದರ ಜೊತೆಗೆ ಅವಿಶ್ವಾಸ ನಿರ್ಣಯವನ್ನು ಮಾಡಿದ್ದರು. ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸ್ವಪಕ್ಷ ಸದಸ್ಯರ ಹಾಗೂ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ಅಸಾದಿ ಅವರು ಶಿವಮೊಗ್ಗದ ಉಪ ವಿಭಾಗ ಅಧಿಕಾರಿಗಳಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಅಸಾದಿ ರಾಜಿನಾಮೆ ನೀಡಿದ ನಂತರದಲ್ಲೂ ರಾಜೀನಾಮೆ ಅಂಗೀಕಾರ ಆಗುವುದಿಲ್ಲ ಹತ್ತಾರು ಕೆಲಸಗಳನ್ನ ಮಾಡಿ ಕೆಲವೊಂದು ಕಾರ್ಯಕ್ರಮಗಳಿಗೆ ಉದ್ಘಾಟನೆ ಸಹ ಮಾಡಲಾಯಿತು. ಈ ಒಂದು ಉದ್ಘಾಟನೆಗೆ ಸಪಕ್ಷ ಸದಸ್ಯರೇ ಕಾರ್ಯಕ್ರಮಗಳಿಂದ ದೂರ ಉಳಿದರು. ಅಷ್ಟೇ ಅಲ್ಲದೆ ಅಸಾದಿ ಅವರು ಸಭೆಯನ್ನು ಕರೆಯುದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಿಗೆ ಸಭೆ ಕರೆಯುವಂತೆ ಮತ್ತೊಮ್ಮೆ ಎಲ್ಲರೂ ಸಹಿ ಮಾಡುವುದರ ಮೂಲಕ ಪತ್ರ ರವಾನಿಸಿದ ಹಿನ್ನೆಲೆಯಲ್ಲಿ ಬೇಸರಗೊಂಡ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ತಾವು ನೀಡಿದ್ದಂತಹ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಇದೀಗ ಅವರ ನಡೆ ಕುತೂಹಲ ಮೂಡಿಸಿದೆ.
ರಾಜೀನಾಮೆ ವಾಪಸ್ ಬಗ್ಗೆ ಅಸಾದಿ ಹೇಳಿದ್ದೇನು..?
ನಾನು ಕಾಂಗ್ರೆಸ್ ಪಕ್ಷಕ್ಕಾಗಿ, ಕಾಂಗ್ರೆಸ್ ಮುಖಂಡರ ಹೇಳಿಕೆಯಿಂದಾಗಿ ರಾಜೀನಾಮೆಯನ್ನು ನೀಡಿದ್ದೆ. ನಾನು ರಾಜೀನಾಮೆ ನೀಡಿದ ನಂತರದಲ್ಲೂ ನನಗೆ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಯಾವುದೇ ಬೆಂಬಲ ಸಿಗಲಿಲ್ಲ. ಇದರಿಂದ ನನಗೆ ಬಹಳ ಬೇಸರವಾಗಿದೆ. ಕೆಲವು ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಡಲಾಗಿದೆ. ಆದರೆ ಆ ಯಾವುದೇ ಕಾರ್ಯಕ್ರಮಗಳಿಗೂ ಸದಸ್ಯರುಗಳು ಬಂದಿಲ್ಲ.ಅವರೆಲ್ಲರಿಗೂ ಅಂತಹ ತಪ್ಪನ್ನು ನಾನೇನು ಮಾಡಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನನ್ನನ್ನು ಹೆದರಿಸಿ ಅಧ್ಯಕ್ಷ ಸ್ಥಾನದಿಂದ ಇಳಿಸಲು ಆಗುವುದಿಲ್ಲ ಹಾಗೇನಾದರೂ ಮಾಡುತ್ತಿದ್ದರೆ ಅವರ ಅವಿಶ್ವಾಸವೇ ಮೇಲುಗೈ ಸಾಧಿಸಲಿ, ನನಗೆ ಕುರ್ಚಿ ಆಸೆ ಇಲ್ಲ ನಾನು ಮಾಡಿರುವಂತಹ ಕೆಲವು ಕೆಲಸಗಳನ್ನು ಮುಗಿಸಿ ಅದನ್ನ ಕಾರ್ಯಗತಕ್ಕೆ ತರಬೇಕಿದೆ. ಅದಕ್ಕಾಗಿ ಸ್ವಲ್ಪ ಸಮಯದ ಅವಕಾಶವನ್ನು ಕೇಳಿದ್ದೇನೆ. ಅದಕ್ಕೂ ಸಮಯವನ್ನು ನೀಡದಿದ್ದರೆ ನಾನೇನು ಮಾಡಬೇಕು, ಲಂಗು ಲಗಾಮು ಹಾಕಿ ಹಿಂದೆ ಎಳೆಯುವ ಅವರ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ ನಾನು ನೀಡಿದ್ದ ರಾಜೀನಾಮೆ ಪತ್ರವನ್ನ ವಾಪಸ್ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸಾಥ್ ನೀಡುತ್ತಾ..?
ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದಿರುವ ಅಸಾದಿ ಅವರ ಮುಂದಿನ ಈಗ ಕುತೂಹಲ ಮೂಡಿಸಿದ್ದು ಸಭೆಯಲ್ಲಿ ಬಿಜೆಪಿ ಬೆಂಬಲ ಸಿಕ್ಕಲ್ಲಿ ಅಸಾದಿ ಅವರೇ ಏನಾದರು ಅಧ್ಯಕ್ಷರಾಗಿ ಮುಂದುವರೆಯಬಹುದು. ಹಾಗಾದರೆ ಅಸಾದಿ ಇನ್ನು 14 ತಿಂಗಳು ತಾವೇ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಬಾರಿ ಮುಜುಗರ ತಂದರೂ ಆಶ್ಚರ್ಯ ಇಲ್ಲ.
