ಆತಂಕ ತಂದ ನಾಲ್ಕು ಮಂಗಗಳ ಸಾವು!
– ಕಡೂರು ಸಮೀಪ ಭೀಕರ ಅಪಘಾತ
– ಬಸ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ KSRTC ಬಸ್ ಚಾಲಕ!
NAMMUR EXPRESS NEWS
ಸೊರಬ : ಬರಗಾಲದ ಛಾಯೆಯ ಹಾನಿ ಪ್ರಾಣಿಗಳ ಮೇಲೆ ಬೀಳುತ್ತಿದ್ದು, ಚಂದ್ರಗುತ್ತಿ ಸೊರಬ ರಸ್ತೆಯ ಬಸದಿ ಬಳಿ ನಾಲ್ಕು ಮಂಗಗಳು ಅಸುನೀಗಿವೆ. ಒಂದೆಡೆ ಪಕ್ಕದ ತಾಲ್ಲೂಕು ಶಿರಸಿಯಲ್ಲಿ ಮಂಗನ ಕಾಯಿಲೆಗೆ ತುತ್ತಾಗಿ ವ್ಯಕ್ತಿಯೋರ್ವ ಮರಣ ಹೊಂದಿರುವುದು ವರದಿಯಾಗಿದ್ದು, ಬೆನ್ನಲ್ಲೇ ಇಲ್ಲಿ ಮಂಗಗಳು ಸತ್ತಿರುವುದು ಕೂಡ ಜನತೆಯ ಆತಂಕವನ್ನು ಹೆಚ್ಚಿಸಿದೆ. ಚಂದ್ರಗುತ್ತಿ ಭಾಗದಲ್ಲಿ ಈಚೆಗೆ ಅವ್ಯಾಹತ ಅರಣ್ಯ ನಾಶದ ಜೊತೆಗೆ ಬೆಂಕಿ ಹಚ್ಚಿ ಪಶುಪಕ್ಷಿಗಳಿಗೆ ಏನೂ ಆಹಾರ ಸಿಗದಂತಾಗಿದೆ. ಅವು ನೀರು ಆಹಾರ ಅರಿಸಿ ನಾಡಿಗೆ, ಹೊಲಗದ್ದೆಗಳ ಸಮೀಪಕ್ಕೆ ಬಂದು ಜನರ ಕ್ರೂರತ್ವಕ್ಕೆ ಬಲಿಯಾಗುತ್ತಿವೆ. ನದಿ, ಕೆರೆಗಳಿಗೆ ಪಂಪ್ ಹಚ್ಚುವ ಮೂಲಕ ನೀರು ಸಂಪೂರ್ಣ ಬರಿದಾಗಿದ್ದು ಮನುಷ್ಯನ ಉಪಯೋಗಕ್ಕೂ ನೀರು ಲಭಿಸದಂತಾಗಿದೆ. ಈಚೆಗೆ ಗಿಳಿ, ಮಂಗ ಇತ್ಯಾದಿ ಕಾಟದಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ವಾಸನೆ ರಹಿತ ಔಷಧಿಗಳನ್ನು ಇರಿಸುತ್ತಿದ್ದು ಅಂತಹ ಔಷಧಿ ತಿಂದು ಸಹಾ ಮಂಗಗಳು ಸತ್ತಿರಬಹುದು ಎಂದು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ಹಸಿವಿನಿಂದ ಸತ್ತಿವೆಯೋ ?, ನೀರು ಸಿಗದೆ ಸತ್ತಿವೆಯೋ ?, ಅಥವಾ ಕಾಯಿಲೆಯಿಂದ ಸತ್ತಿವೆಯೋ ?, ಮುಂತಾದ ಚರ್ಚೆಯ ನಡುವೆ ಸಕಾಲಕ್ಕೆ ಗ್ರಾಮ ಪಂಚಾಯತಿ ಗಮನಕ್ಕೆ ಬಂದಿದ್ದು ಕೂಡಲೆ ಕ್ರಮಕ್ಕೆ ಮುಂದಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯವರು ಆಗಮಿಸಿ ಮಹಜರು ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
– ಕಡೂರು ಸಮೀಪ ಭೀಕರ ಅಪಘಾತ
ಕಡೂರು : ಲಾರಿ-ಬೈಕ್ ನಡುವಿನ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃಪಟ್ಟಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ತಂಗಲಿ ಬಳಿ ನಡೆದಿದೆ. ಮೃತ ಮಹಿಳೆಯನ್ನು ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಣ್ಣ ಅವರ ಪತ್ನಿ ಸುಮಾ (25) ಎಂದು ಗುರುತಿಸಲಾಗಿದೆ. ಪೇದೆ ಜಯಣ್ಣ ಅವರ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡೂರು ತಾಲೂಕಿನ ತಂಗಲಿ ಮೂಲದ ಜಯಣ್ಣ ಪತ್ನಿ ಜೊತೆ ಬೈಕಿನಲ್ಲಿ ರೈಲ್ವೆ ಸ್ಟೇಷನ್ ಗೆ ಹೋಗುತ್ತಿರುವಾಗ, ಒನ್ ವೇ ನಲ್ಲಿ ಬಂದ ಲಾರಿ ಬೈಕ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಜಯಣ್ಣ ದಾವಣಗೆರೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರ (ಎಎಸ್ಪಿ) ಗನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಡ್ಯೂಟಿ ನಿಮಿತ್ತ ದಾವಣಗೆರೆಗೆ ಹೊರಟಿದ್ದ ವೇಳೆ ಈ ದುರಂತ ಸಂಭವಿಸಿದೆ.
– ಬಸ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ KSRTC ಬಸ್ ಚಾಲಕ!
ಶಿವಮೊಗ್ಗ : ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕರ್ತವ್ಯ ನಿರತ ಚಾಲಕ-ಕಂ-ನಿರ್ವಾಹಕ ಬಸ್ಸಿನಲ್ಲಿಯೇ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ಜರುಗಿದೆ. ಬಸವರಾಜು ಟಿ.ವಿ ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಎನ್ನಲಾಗಿದೆ. ಬಸವರಾಜು ಟಿ.ವಿ ಶಿವಮೊಗ್ಗ ವಿಭಾಗದ ಹೊನ್ನಾಳಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಘಟಕದಲ್ಲಿ ಕೆ.ರೇಣುಕಾ ಎಂಬುವರು ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಈ ವಿಚಾರ ಮೇಲಿನ ಅಧಿಕಾರಿಗಳಿಗೂ ತಿಳಿದಿದೆ. ಮೇಲಿನ ಅಧಿಕಾರಿಗಳ ಬೆಂಬಲದೊಂದಿಗೆ ಕೆ. ರೇಣುಕಾ ಅವರು ಬಸವರಾಜು ಟಿ.ವಿ ಮತ್ತು ಮತ್ತೋರ್ವ ಚಾಲಕ ಸಿ. ಮಹೇಶ್ವರ ವಿರುದ್ಧ ಹೊನ್ನಾಳಿ ಪೋಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಬಸವರಾಜು ಟಿ.ವಿ ಶಿವಮೊಗ್ಗ ವಿಭಾಗೀಯ ಅಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದರೆ ಶಿವಮೊಗ್ಗ ವಿಭಾಗದ ಅಧಿಕಾರಿಗಳು ಚಾಲಕ ಬಸವರಾಜು ಅವರಿಗೆ ಸ್ಪಂದಿಸಿಲ್ಲ. ಇದರಿಂದ ನೊಂದ ಬಸವರಾಜು ಟಿ.ವಿ ಶಿವಮೊಗ್ಗ ವಿಭಾಗದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸಿನಲ್ಲಿಯೇ ವಿಷ ಸೇವಿಸಿ ಅತ್ಮಹತ್ಯೆ ಯತ್ನಿಸಿದ್ದಾರೆ. ವಿಚಾರ ತಿಳಿದು ಅಕ್ಕ- ಪಕ್ಕದಲ್ಲಿದ್ದ ಸಿಬ್ಬಂದಿ ಅವರನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.