Categories
ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್

ಸಾಗರ : ಆನಂದಪುರದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವು..!!
– ಸಾಗರ : ಹೋಳಿ ಆಚರಣೆ ವೇಳೆ ಕ್ಷುಲ್ಲಕ ವಿಚಾರಕ್ಕೆ ಓರ್ವ ಸಾವು..!!
– ಶಿಕಾರಿಪುರ : ಬೈಕ್ ಹಾರ್ನ್ ಹೊಡೆದ ವಿಷಯಕ್ಕೆ ಯುವಕನಿಗೆ ಚೂರಿ ಇರಿತ.!
– ಶಿವಮೊಗ್ಗ : ಟೈರ್‌ ಸ್ಟೋಟದಿಂದ ಎರಡು ಕಾರು ಬೈಕ್‌ ನಡುವೆ ಡಿಕ್ಕಿ, ಓರ್ವ ಸಾವು.
– ಶಿರಸಿ : ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ..!

NAMMUR EXPRESS NEWS
ಸಾಗರ: ತಾಲೂಕಿನ ಆನಂದಪುರ ಸಮೀಪದ ಹೊಸಗುಂದ ಗ್ರಾಮದ ತಿರುವಿನ ಬಳಿ ಬೈಕ್, ಕಾರು, ಆಟೋ ನಡುವೆ ಅಪಘಾತ ಸಂಭವಿಸಿದ್ದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರು ಮೂಲದ ಬೈಕ್ ಚಾಲಕ ಶಿರಸಿ ಕಡೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಆಟೋ ಚಾಲಕ ಗಂಭೀರ ಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪ್ರಾಣ ಪಕ್ಷಿ ಹಾರಿ ಹೋಗಿದೆ. ಅಪಘಾತದಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸಾಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕತ್ತಲಾಗಿದ್ದ ಕಾರಣ ಅಪಘಾತದ ಬಗ್ಗೆ ಸರಿಯಾದ ಮಾಹಿತಿ ತಿಳಿಯಬೇಕಾಗಿದ್ದು,ಪೊಲೀಸ್ ಇಲಾಖೆ ಮೂಲಗಳಿಂದ ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ. ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

– ಸಾಗರ : ಹೋಳಿ ಆಚರಣೆ ವೇಳೆ ಕ್ಷುಲ್ಲಕ ವಿಚಾರಕ್ಕೆ ಓರ್ವ ಸಾವು..!!

ಸಾಗರ: ಇಲ್ಲಿನ ಜೆಪಿ ಬಡಾವಣೆಯಲ್ಲಿ ಹೋಳಿ ಆಚರಣೆ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಶುಕ್ರವಾರ ಮೃತಪಟ್ಟಿದ್ದಾರೆ.
ಇಲ್ಲಿನ ಜೆ.ಪಿ. ನಗರದ ಕೂಲಿ ಕಾರ್ಮಿಕ ರಾಜು( 48) ಮೃತಪಟ್ಟವರು.
ಹೋಳಿ ಹಬ್ಬ ಆಚರಣೆ ಸಂಧರ್ಭದಲ್ಲಿ ನಡೆದ ಘಟನೆಯಲ್ಲಿ ಗಾಯಗೊಂಡಿದ್ದ ಕಾರ್ಮಿಕ ರಾಜು(48) ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಕಾಮ ದಹನದ ಸಂದರ್ಭದಲ್ಲಿ ರಾಜು ಅವರ ಮೇಲೆ ಮಧು ಮತ್ತು ಮಾಲತೇಶ ಅವರು ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ಹಲ್ಲೆ ನಡೆಸಿದ್ದರು. ತಕ್ಷಣ ರಾಜು ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಶನಿವಾರ ಗಣೇಶ್‌ ಎಂಬವರು ನೀಡಿದ ದೂರಿನನ್ವಯ ಸಾಗರ ಟೌನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಸದ್ಯ ಆರೋಪಿಯೊಬ್ಬರನ್ನು ವಶಕ್ಕೆ ಪಡೆದಿರುವ ಮಾಹಿತಿಯಿದೆ.

– ಶಿಕಾರಿಪುರ : ಬೈಕ್ ಹಾರ್ನ್ ಹೊಡೆದ ವಿಷಯಕ್ಕೆ ಯುವಕನಿಗೆ ಚೂರಿ ಇರಿತ.!

ಶಿಕಾರಿಪುರ : ಭಿನ್ನಕೋಮಿನ ಯುವಕರ ಮಧ್ಯೆ ಕ್ಷುಲಕ ಕಾರಣಕ್ಕೆ ಆರಂಭವಾದ ಗಲಾಟೆಯಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಮಾ.15 ರಾತ್ರಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಮಾಸೂರು ಸರ್ಕಲ್ ನಲ್ಲಿ ನಡೆದಿದೆ. ಶಿಕಾರಿಪುರ ಪಟ್ಟಣದ ಮಾಸೂರು ಸರ್ಕಲ್ ನಲ್ಲಿ ವಾಹನ ದಟ್ಟಣೆ ಹೆಚ್ಚಾದ ಸಂದರ್ಭದಲ್ಲಿ ಬೈಕ್ ನ ಹಾರ್ನ್ ಹೊಡೆದ ವಿಷಯಕ್ಕೆ ಸಂಬಂಧಿಸಿದಂತೆ ಯುವಕರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಘಟನೆ ನಡೆದ ಸ್ಥಳದ ಪಕ್ಕದಲ್ಲಿಯೇ ಇದ್ದ ಹಣ್ಣಿನ ಅಂಗಡಿಯಲ್ಲಿದ್ದ ಚಾಕು ತೆಗೆದು ಇರಿಯಲಾಗಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ಯುವಕನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಯನ್ನು ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

– ಶಿವಮೊಗ್ಗ : ಟೈರ್‌ಸ್ಟೋಟದಿಂದ ಎರಡು ಕಾರು ಬೈಕ್‌ ನಡುವೆ ಡಿಕ್ಕಿ, ಓರ್ವ ಸಾವು

ಶಿವಮೊಗ್ಗ : ಜಿಲ್ಲೆ ಹೊಳೆಹೊನ್ನೂರು ಭಾಗದಲ್ಲಿ ಕಾರೊಂದು ಟೈರ್‌ ಸ್ಫೋಟಗೊಂಡು ಬೈಕ್‌ಗೆ ಡಿಕ್ಕಿಯಾಗಿ ಅಪ್‌ಸೆಟ್‌ ಆಗಿದೆ. ಘಟನೆಯಲ್ಲಿ 40 ವರ್ಷದ ಮಲ್ಲಿಕಾರ್ಜುನ್‌ ಎಂಬವರು ಸಾವನ್ನಪ್ಪಿದ್ದಾರೆ. ಇಲ್ಲಿನ ಚನ್ನಗಿರಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ, ಟೈರ್‌ ಸ್ಫೋಟಗೊಂಡ ಪರಿಣಾಮ ಕಾರೊಂದು ಇನ್ನೊಂದು ಕಾರಿಗೆ ಡಿಕ್ಕಿಯಾಗಿದೆ. ಆ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರ ಹರಮಘಟ್ಟದ ನಿವಾಸಿ ಮಲ್ಲಿಕಾರ್ಜುನ ಮೃತಪಟ್ಟಿದ್ದಾರೆ. ಇನ್ನೂ ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಈಗಾಗಲೇ ಚಿಕಿತ್ಸೆ ಒದಗಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಒಂದು ಗಂಟೆಗೂ ಹೆಚ್ಚಿನ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

– ಶಿರಸಿ : ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ..!

ಶಿರಸಿ : ಯಾವುದೇ ದಾಖಲೆಗಳನ್ನು ಹೊಂದಿಲ್ಲದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ ನಗರ ಪೊಲೀಸರು ಬಂಧಿಸಿದ ಘಟನೆ ಭಾನುವಾರ ನಡೆದಿದೆ. ಬಂಧಿತರು ಹಾವೇರಿ ಮೂಲದ ಬೀರಪ್ಪ ಹಾಗೂ ಕೊಟ್ರೇಶ ಹೊಳಲು ಎಂದಾಗಿದ್ದು ಇಬ್ಬರು ಸೇರಿಕೊಂಡು ಕೆಎ 27,ಸಿ-6923 ಮಹಿಂದ್ರಾ ಬುಲೆರೊ ಪಿಕಪ್ ವಾಹನದಲ್ಲಿ ಒಂದು ಎಮ್ಮೆ, ಒಂದು ಕೋಣದ ಕರು, ಮತ್ತು ಒಂದು ಹೋರಿ ಕರು ಒಟ್ಟು ಮೂರು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹಾವೇರಿ ಕಡೆಗೆ ತೆರಳುತ್ತಿರುವಾಗ ಶಿರಸಿಯ ನಿಲೇಕೆಣಿ ಹತ್ತಿರ ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ, ಬಿ ರವರ ನೇತೃತ್ವದ ಎಎಸ್ಐ. ನಾರಾಯಣ ರಾಥೋಡ, ಸಿಬ್ಬಂದಿಗಳಾದ ಹನುಮಂತ ಕಬಾಡಿ, ಅರುಣ ಲಮಾಣಿ, ಸದ್ದಾಂ ಹುಸೇನ್ ರವರನ್ನೊಳಗೊಂಡ ತಂಡದವರು ಕಾರ್ಯಾಚರಣೆ ನಡೆಸಿ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ. ಇವರಿಂದ ಕೃತ್ಯಕ್ಕೆ ಬಳಸಿದ ಅಂದಾಜು 4 ಲಕ್ಷ ರೂ ಮೌಲ್ಯದ ಬುಲೆರೊ ಮಹಿಂದ್ರಾ ವಾಹನ ಜಪ್ತಿ ಪಡಿಸಿಕೊಂಡಿರುತ್ತಾರೆ, ಹಾಗೂ ಒಟ್ಟು ಅಂದಾಜು 31,000/- ರೂ ಮೌಲ್ಯ ಹೊಂದಿದ್ದ ಮೂರು ಜಾನುವಾರುಗಳನ್ನು ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.