ಟಾಪ್ ನ್ಯೂಸ್ ಮಲ್ನಾಡ್
ವಿದ್ಯುತ್ ಸರಿಪಡಿಸಲು ಹೋಗಿ ಕಂಬದಲ್ಲೇ ಸುಟ್ಟು ಕರಕಲಾದ ರೈತ !
– ನೆಹರು ರೋಡ್ನಲ್ಲಿ ಸಿಟಿ ಬಸ್ ಟಯರ್ ಸ್ಫೋಟ!
– ಮಂಡ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಶಿವಮೊಗ್ಗದಲ್ಲಿ ಆತ್ಮಹತ್ಯೆ!
– ನೀರು ತುಂಬಿದ್ದ ಬಕೆಟ್ ಗೆ ಆಕಸ್ಮಿಕವಾಗಿ ಮಗು ಬಿದ್ದು ಸಾವು.!
– ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ
– ಮತಾಂತರಕ್ಕೆ ಯತ್ನ: ಕ್ರೈಸ್ತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು
NAMMUR EXPRESS NEWS
ತರೀಕೆರೆ : ವಿದ್ಯುತ್ ದುರಸ್ತಿಗೆ ಮುಂದಾದ ವೇಳೆ ಕರೆಂಟ್ ಶಾಕ್ ಹೊಡೆದು ರೈತನೋರ್ವ ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ಮಲ್ಲಿಗೆನಹಳ್ಳಿ ಸಂಭವಿಸಿದೆ. ಮಲ್ಲಿಗೆನಹಳ್ಳಿ ರೈತ ಮಂಜುನಾಥ್ (35) ಮೃತ ದುರ್ದೈವಿ. ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡದೆ ರೈತ ಮಂಜುನಾಥ್ ವಿದ್ಯುತ್ ಸಮಸ್ಯೆ ಸರಿಪಡಿಸಲು ಹೋದಾಗ ಕ್ಷಣಾರ್ಧದಲ್ಲೇ ಕರೆಂಟ್ ಪ್ರವಹಿಸಿದೆ, ಈ ವೇಳೆ ಮಂಜುನಾಥ್ ದೇಹ ಸುಟ್ಟು ಕರಕಲಾಗಿದೆ. ವಿದ್ಯುತ್ ಕಂಬದಲ್ಲೇ ಮೃತದೇಹವು ಸಿಲುಕಿದ್ದು, ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರ ರೋಧನೆ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
– ನೆಹರು ರೋಡ್ನಲ್ಲಿ ಸಿಟಿ ಬಸ್ ಟಯರ್ ಸ್ಫೋಟ!
ಶಿವಮೊಗ್ಗ : ಶಿವಮೊಗ್ಗದ ನಗರದ ನೆಹರು ರೋಡ್ನಲ್ಲಿ ಸಿಟಿ ಬಸ್ನ ಟೈರ್ ಬ್ಲಾಸ್ಟ್ ಆಗಿ ಅಪಘಾತಕ್ಕೀಡಾದ ಘಟನೆ ಸಂಭವಿಸಿದೆ. ನೆಹರು ರಸ್ತೆಯಲ್ಲಿ ನಡೆದ ಘಟನೆಯಲ್ಲಿ ಬಾಲಕಿಯೊಬ್ಬಳಿಗೆ ಗಾಯವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೀರಭದ್ರ ಸಿಟಿ ಬಸ್ ಬೊಮ್ಮನಕಟ್ಟೆಯಿಂದ ಗೋಪಾಳದ ಕಡೆಗೆ ತೆರಳುತ್ತಿತ್ತು. ನೆಹರು ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಚಾಲಕನ ಭಾಗದಲ್ಲಿರುವ ಟೈರ್ ಸ್ಫೋಟಗೊಂಡಿದೆ. ಇದರಿಂದ ಚಾಲಕನ ಹಿಂಭಾಗದಲ್ಲಿ ರಂದ್ರವಾಗಿದ್ದು ಅಲ್ಲಿಯೇ ಇದ್ದ ಬಾಲಕಿ ರಂದ್ರದಿಂದ ಕೆಳಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಬಸ್ ಅಪ್ಸೆಟ್ ಆಗಿ ಡಿವೈಡರ್ಗೆ ಡಿಕ್ಕಿಯಾಗಿದೆ. ಅದೃಷ್ಟಕ್ಕೆ ಯಾವುದೇ ಜೀವ ಹಾನಿ ಉಂಟಾಗಿಲ್ಲ. ಇನ್ನೂ ತಕ್ಷಣವೇ ಸ್ಥಳೀಯರು ಗಾಯಗೊಂಡ ಬಾಲಕಿಯನ್ನು ಅಲ್ಲಿಯೇ ಆಟೋವೊಂದರಲ್ಲಿ ಕೂರಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲದೆ ವಿಚಾರ ತಿಳಿದು ಸ್ಥಳಕ್ಕೆ ಪಶ್ಚಿಮ ಸಂಚಾರ ಠಾಣೆ ಪೊಲೀಸರು ಆಗಮಿಸಿದ್ದಾರೆ. ಇನ್ನೂ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.
– ಮಂಡ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಶಿವಮೊಗ್ಗದಲ್ಲಿ ಆತ್ಮಹತ್ಯೆ!
ಶಿವಮೊಗ್ಗ :ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ ಪ್ರಜ್ವಲ್ ಎಂಬುವರು ಚಿಕಿತ್ಸೆ ಫಲಕಾರಿಯಾಗದೇ ಕಳೆದ ಶುಕ್ರವಾರದ ರಾತ್ರಿ ಮೃತಪಟ್ಟಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ಯವರಾದ ಪ್ರಜ್ವಲ್ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನಲ್ಲೇ ಇದ್ದರು. ವಿದ್ಯಾರ್ಥಿ ಆತ್ಮಹತ್ಯೆ ಕಾರಣ ಸ್ಪಷ್ಟವಾಗಿಲ್ಲವಾದರೂ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ.
– ನೀರು ತುಂಬಿದ್ದ ಬಕೆಟ್ ಗೆ ಆಕಸ್ಮಿಕವಾಗಿ ಮಗು ಬಿದ್ದು ಸಾವು.!
ಸಾಗರ : ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದು ವರ್ಷ ಎರಡು ತಿಂಗಳ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ಸಾಗರದಲ್ಲಿ ಭಾನುವಾರ ಸಂಜೆ ನಡೆದಿದೆ. ಜೋಸೆಫ್ ನಗರದಲ್ಲಿ ಮನೆಯಲ್ಲಿ ವಾಸವಿದ್ದ ಆಸಿಫ್ ಎಂಬುವವರ ಪುತ್ರಿ ಆನಂ ಫಾತಿಮಾ ಮೃತ ಮಗು ಎಂದು ತಿಳಿದು ಬಂದಿದೆ. ಭಾನುವಾರ ಸಂಜೆ ಮಗು ಆನಂ ಮನೆಯಲ್ಲಿನ ಶೌಚಾಲಯದಲ್ಲಿದ್ದ ನೀರು ತುಂಬಿದ್ದ ಬಕೆಟ್ ಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದೆ ಎಂದು ಹೇಳಲಾಗಿದೆ.
– ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ
ನರಸಿಂಹರಾಜಪುರ: ಸಾಲ ಭಾದೆಯಿಂದ ಮನನೊಂದು ತಾಲೂಕಿನ ಕೊನೋಡಿ ಗ್ರಾಮದ ಹಳ್ಳಿಬೈಲಿನ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎಚ್.ಎಸ್.ವಿಜಯ ( 64) ಅವರು ಜಮೀನು ಅಭಿವೃದ್ದಿಗಾಗಿ ಬ್ಯಾಂಕ್, ಸೊಸೈಟಿ ಹಾಗೂ ಇತರ ಕಡೆಗಳಲ್ಲಿ ಲಕ್ಷಾಂತರ ರುಪಾಯಿ ಸಾಲ ಮಾಡಿದ್ದು, ತೀರಿಸಲಾಗದೆ ನೊಂದಿದ್ದರು ಎನ್ನಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಮನೆಬಿಟ್ಟ ವಿಜಯ ವ್ಯಾಪಾಸಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಅವರ ತೋಟದ ಪಕ್ಕದಲ್ಲಿ ಹರಿಯುವ ಹಳ್ಳದ ಸಮೀಪಕ್ಕೆ ಪಂಪ್ ಸೆಟ್ ಆನ್ ಮೊಡಲು ಹೋಗಿದ್ದ ಗ್ರಾಮಸ್ಥರೊಬ್ಬರಿಗೆ ಇವರು ಮರವೊಂದಕ್ಕೆ ನೇಣುಬಿಗಿಕೊಂಡಿರುವ ಸ್ಥಿತಿಯಲ್ಲಿ ಕಂಡಿದ್ದಾರೆ. ಬಳಿಕ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಮೃತ ರೈತ ಎಚ್.ಎಸ್.ವಿಜಯ ಅವರ ಪುತ್ರ ಮಿಥುನ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ರೈತ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ.
– ಮತಾಂತರಕ್ಕೆ ಯತ್ನ: ಕ್ರೈಸ್ತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು
ಚಿಕ್ಕಮಗಳೂರು: ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದವರ ವಿರುದ್ದ ಹಿಂದೂ ವ್ಯಕ್ತಿ ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ. ರಾಜನ್ ಎಂಬಾತ ಇನ್ನಿಬ್ಬರೊಂದಿಗೆ ಇಂದಾವರ ಎರೆಹಳ್ಳಿಯ ನಿವಾಸಿ ಪ್ರಸನ್ನ ಕುಮಾರ ಎಂಬುವವರ ಮನೆಗೆ ಬಂದಿದ್ದಾರೆ. ನಿಮ್ಮ ದೇವರು ನಿಮ್ಮ ಕಷ್ಟಕ್ಕೆ ಸಹಾಯ ಮಾಡುತ್ತಿಲ್ಲ, ಮಳೆ ಬರಿಸುತ್ತಿಲ್ಲ. ನಿಮ್ಮ ಮನೆಗೆ ಏಸು ಬರುತ್ತಾನೆ ಎಂದಿದ್ದಾರೆ. ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಕೋಪಗೊಂಡು ಪ್ರಸನ್ನ ಕುಮಾರ್ ವಿರೋಧಿಸಿದ್ದಾರೆ. ಕೆಲ ಗ್ರಾಮಸ್ಥರು ಒಟ್ಟಾಗಿ ಈ ಯತ್ನವನ್ನು ವಿರೋಧಿಸಿದ್ದಾರೆ. ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.