ಟಾಪ್ ನ್ಯೂಸ್ ಮಲ್ನಾಡ್
ಮೃತ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಪತ್ನಿ ಆರೋಗ್ಯದಲ್ಲಿ ಏರುಪೇರು
– ಸಾಗರ: ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯರ ಹೊಡೆದಾಟ
ಬಸ್ಸನ್ನೆ ಠಾಣೆಗೆ ತಂದು ನಿಲ್ಲಿಸಿದ ಚಾಲಕ!
– ಸಾಗರ : ಕಳ್ಳ ಖದೀಮರಿಗೆ ಸಿಂಹ ಸ್ವಪ್ನವಾಗಿದ್ದ ಲೇಡಿ ಸಿಂಗಂ ವಯೋನಿವೃತ್ತಿ
– ಮೂಡಿಗೆರೆ : ಮರಗಸಿ ವೇಳೆ ಕರೆಂಟ್ ಶಾಕ್ ಕಾರ್ಮಿಕ ಸ್ಥಳದಲ್ಲೇ ಸಾವು
– ಚಿಕ್ಕಮಗಳೂರು : ಬಾಯ್ಲರ್ ರಿಪೇರಿ ವೇಳೆ ಏಕಾಏಕಿ ಹೊರಬಂದ ಶಾಖದಿಂದ ಕಾರ್ಮಿಕ ದಾರುಣ ಸಾವು
NAMMUR EXPRESS NEWS
ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ರವರ ಪತ್ನಿಯ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿ ಅಸ್ವಸ್ಥಗೊಂಡಿದ್ದು ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಅಧಿಕಾರಿ ಆತ್ಮಹತ್ಯೆಯ ಬೆನ್ನಲ್ಲೆ ಹಲವಾರು ಮುಖಂಡರು ಮೃತರ ಮನೆಗೆ ಭೇಟಿಕೊಡುತ್ತಿದ್ದಾರೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರ ಇದುವರೆಗೂ ಯಾವುದೇ ಪರಿಹಾರ ಘೋಷಿಸಿಲ್ಲ. ಇನ್ನೊಂದೆಡೆ ಮುಖಂಡರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿರುವುದಷ್ಟೆ ಅಲ್ಲದೆ ಸಹಾಯ ಹಸ್ತ ನೀಡುವ ಮಾತನಾಡುತ್ತಿದ್ದಾರೆ.ಈ ಪೈಕಿ ಕೆಎಸ್ ಈಶ್ವರಪ್ಪ ತಮ್ಮ ಕೈಲಾದಷ್ಟು ನೆರವು ಎಂದು ಮೂರು ಲಕ್ಷ ರೂಪಾಯಿ ಮೃತರ ಕುಟುಂಬಕ್ಕೆ ನೀಡಿದ್ದಾರೆ. ಹಾಗೆ ಸರ್ಕಾರದ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದಿದ್ದಾರೆ. ಈ ನಡುವೆ ಇವತ್ತು ಚಂದ್ರಶೇಖರನ್ರವರ ಪತ್ನಿ ಕವಿತಾರವರ ಆರೋಗ್ಯದಲ್ಲಿ ಏರುಪೇರಾಗಿದೆ. ವಾಂತಿಯಾದ ಹಿನ್ನೆಲೆಯಲ್ಲಿ ಅವರು ಅಸ್ವಸ್ಥಗೊಂಡಿದ್ದು, ಅವರನ್ನ ಅವರ ಪುತ್ರ ಅಲ್ಲಿಯೇ ಇದ್ದ ಆಟೋವೊಂದರಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆ ನಂತರ ಅವರು ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಹೀಗಾಗಿ ಅಸ್ವಸ್ಥರಾಗಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಸಾಗರ: ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯರ ಹೊಡೆದಾಟ
– ಬಸ್ಸನ್ನೆ ಠಾಣೆಗೆ ತಂದು ನಿಲ್ಲಿಸಿದ ಚಾಲಕ!
ಸಾಗರ: ಸೀಟಿಗಾಗಿ ಮಹಿಳೆಯರಿಬ್ಬರು ಗಲಾಟೆ ಮಾಡಿಕೊಂಡಿರುವ ಘಟನೆ ಸಾಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ರಾಜ್ಯ ಸರಕಾರದ ಶಕ್ತಿ ಯೋಜನೆ ಆರಂಭವಾದಾಗಿನಿಂದ ಸರಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದ್ದು ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರಕಾರಿ ಬಸ್ಸನ್ನು ಅವಲಂಭಿಸುತ್ತಿದ್ದಾರೆ. ಈ ನಡುವೆ ಸೀಟಿಗಾಗಿ ಬಸ್ಸಿನಲ್ಲಿ ಮಹಿಳೆಯರ ಹೊಡೆದಾಟ ಪ್ರಕರಣಗಳು ಹೆಚ್ಚಾಗುತ್ತಿದೆ. ಅದೇ ರೀತಿ ಸಾಗರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ಸಿನಲ್ಲಿ ಇಬ್ಬರು ಮಹಿಳೆಯರು ಸೀಟಿಗಾಗಿ ಜಗಳ ಮಾಡಿಕೊಂಡಿದ್ದಾರೆ, ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿದೆ ಈ ನಡುವೆ ಬಸ್ಸಿನ ಚಾಲಕ, ನಿರ್ವಾಹಕ ಸೇರಿದಂತೆ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಜಗಳ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಕೊನೆಗೆ ಬಸ್ ಚಾಲಕ ಮಹಿಳೆಯರ ಗಲಾಟೆ ನಿಯಂತ್ರಿಸಲಾಗದೆ ಬಸ್ಸನ್ನು ಸಾಗರ ಪಟ್ಟಣ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ. ಗಲಾಟೆ ನಡೆಸಿದ ಮಹಿಳೆಯರನ್ನು ಬಸ್ಸಿನಿಂದ ಇಳಿಸಿ ಬಸ್ಸು ಶಿವಮೊಗ್ಗ ಕಡೆಗೆ ಪ್ರಯಾಣ ಬೆಳೆಸಿದೆ, ಇನ್ನು ಇಬ್ಬರು ಮಹಿಳೆಯರಿಗೆ ಪೊಲೀಸರು ಬುದ್ದಿವಾದ ಹೇಳಿ ಬಳಿಕ ಕಳುಹಿಸಿಕೊಟ್ಟಿದ್ದಾರೆ.
– ಸಾಗರ : ಕಳ್ಳ ಖದೀಮರಿಗೆ ಸಿಂಹ ಸ್ವಪ್ನವಾಗಿದ್ದ ಲೇಡಿ ಸಿಂಗಂ ವಯೋನಿವೃತ್ತಿ
ಸಾಗರ : ಕಳ್ಳ ಖದೀಮರಿಗೆ ಸಿಂಹ ಸ್ವಪ್ನವಾಗಿದ್ದ ಸಾಗರದ ಲೇಡಿ ಸಿಂಗಂ ಸುಜಾತಾ ರವರು ಇಂದು ವಯೋನಿವೃತ್ತಿ ಪಡೆದಿದ್ದಾರೆ. 1993 ರಲ್ಲಿ ಪೊಲೀಸ್ ಇಲಾಖೆಗೆ ಪೊಲೀಸ್ ಕಾನ್ಸೆಬಲ್ ಆಗಿ ಸೇರ್ಪಡೆಗೊಂಡಿದ್ದ ಸುಜಾತ ರವರು ಸುದೀರ್ಘ 30 ವರ್ಷಕ್ಕೂ ಅಧಿಕ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾಗರ, ಸೊರಬ, ಆನವಟ್ಟಿ ಹಾಗೂ ಶಿವಮೊಗ್ಗದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಪೊಲೀಸ್ ಸಬ್ ಇನ್ಸೆಕ್ಟರ್ ಆಗಿ ಅಪರಾಧ ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ,ಸಮಾಜಘಾತಕರ ಎದೆಯಲ್ಲಿ ಭಯ ಹುಟ್ಟಿಸಿದ ಖ್ಯಾತಿ ಇವರದ್ದು, ಇಂದು ವಯೋನಿವೃತ್ತಿ ಹೊಂದಿದ ಇವರನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸನ್ಮಾನಿಸಿ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಲಾಯಿತು. ಒಟ್ಟಾರೆ ಇದ್ದಷ್ಟು ವರ್ಷ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕರಾಗಿ ಕಳ್ಳ ಖದೀಮರ ಎದೆ ನಡುಗಿಸಿ, ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿ ಉತ್ತಮ ಸೇವೆ ಸಲ್ಲಿಸಿದ್ದಾರೆ.
– ಮೂಡಿಗೆರೆ : ಮರಗಸಿ ವೇಳೆ ಕರೆಂಟ್ ಶಾಕ್ ಕಾರ್ಮಿಕ ಸ್ಥಳದಲ್ಲೇ ಸಾವು
ಮೂಡಿಗೆರೆ: ಮರಗಸಿ ಮಾಡುವಾಗ ವಿದ್ಯುತ್ ಶಾಕ್ ನಿಂದ ಕಾರ್ಮಿಕ ಮರದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಂದ್ರಪ್ಪ (45) ಮೃತ ದುರ್ದೈವಿ. ಇವರು ಸಿಲ್ವರ್ ಮರಕ್ಕೆ ಮರಗಸಿ ಮಾಡಲು ತೆರಳಿದ್ದರು. ಸಿಲ್ವರ್ ಮರದ ಅಡ್ಡ ಕೊಂಬೆಗಳನ್ನು ಕಡಿಯುವ ವೇಳೆ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಯಿಂದ ಅವಘಡ ಸಂಭವಿಸಿದೆ. ಮರದ ಮೇಲಿದ್ದಾಗಲೇ ವಿದ್ಯುತ್ ತಾಗಿದೆ. ಇದರಿಂದ ಚಂದ್ರಪ್ಪ ಮರದ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ.
– ಚಿಕ್ಕಮಗಳೂರು: ಬಾಯ್ಲರ್ ರಿಪೇರಿ ವೇಳೆ ಏಕಾಏಕಿ ಹೊರಬಂದ ಶಾಖದಿಂದ ಕಾರ್ಮಿಕ ದಾರುಣ ಸಾವು
ಚಿಕ್ಕಮಗಳೂರು: ದುರಂತವೊಂದರಲ್ಲಿ ಕಾರ್ಮಿಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಕುರುಬರಹಳ್ಳಿ ಬಳಿ ಇರುವ ವಿದ್ಯಾ ಕಾಫಿ ಕ್ಯುರಿಂಗ್ನಲ್ಲಿ ಘಟನೆ ನಡೆದಿದೆ. ಬಾಯ್ಲರ್ ರಿಪೇರಿ ಮಾಡುವಾಗ ಏಕಾಏಕಿ ಶಾಖವು ಹೊರಹೊಮ್ಮಿದ ಪರಿಣಾಮ ರಿಪೇರಿ ಮಾಡುತ್ತಿದ್ದ ಕಾರ್ಮಿಕನ ದೇಹ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲೇ ಉದಯ್ (27) ಮೃತಪಟ್ಟಿದ್ದಾನೆ. ಉದಯ್ ಮೂಲತಃ ಮಡಿಕೇರಿಯ ಕುಶಾಲನಗರ ಮೂಲದವನು.ಬಾಯ್ಲರ್ ಸರಿಪಡಿಸುವಾಗ ಏಕಾಏಕಿ 340 ಡಿ.ಸೆ ಶಾಖ ಹೊರ ಬಂದಿದೆ. ಶಾಖದ ತೀವ್ರತೆಗೆ ಉದಯ್ ದೇಹ ಸುಟ್ಟು ಕರಕಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಸದ್ಯ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹವನ್ನು ರವಾನೆ ಮಾಡಲಾಗಿದೆ.