ಟಾಪ್ ನ್ಯೂಸ್ ಮಲ್ನಾಡ್
ಹೊಸನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ!
– ಮನೆ ಪಕ್ಕವೇ ಬಂದು ತುಳಿದು ಸಾಯಿಸಿದ ಕಾಡಾನೆ
ತೀರ್ಥಹಳ್ಳಿ: ಅಪಘಾತಕ್ಕೆ ಇಬ್ಬರು ಸಾವು
– ಇಕೋ ಇನ್ನೋವಾ ಡಿಕ್ಕಿ: ಆಸ್ಪತ್ರೆಗೆ ಸಾಗಿಸುವಾಗ ಇನ್ನೊಬ್ಬ ಸಾವು
ಸೊರಬ: ಪೋಸ್ಟ್ ಆಫೀಸ್ ಕಳ್ಳತನಕ್ಕೆ ಯತ್ನ!
– ಸಿಸಿಟಿವಿ ಒಡೆದು ಕಳ್ಳತನಕ್ಕೆ ಪ್ಲಾನ್: ಒಂದೇ ವರ್ಷದಲ್ಲಿ ಮೂರು ಬಾರಿ ಕಳ್ಳತನಕ್ಕೆ ಯತ್ನ!
NAMMUR EXPRESS NEWS
ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ನಡೆದಿದೆ. ಬಸವಾಪುರ ಗ್ರಾಮದ ತಿಮ್ಮಪ್ಪ (58) ಮೃತ ವ್ಯಕ್ತಿಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ ತಮ್ಮ ಮನೆ ಸಮೀಪದ ಕಾಡಿಗೆ ದರಗು ತರಲು ಹೋದ ವೇಳೆ ಈ ಘಟನೆ ನಡೆದಿದೆ. ಪತ್ನಿ ಮತ್ತು ಮಕ್ಕಳು ಈ ಸಂಧರ್ಭದಲ್ಲಿ ಆನೆ ದಾಳಿಯಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇಲ್ಲೇ ಕಳೆದ ಎರಡು ತಿಂಗಳ ಹಿಂದೆ ಆನೆಗಳು ಕಬ್ಬು ಫಸಲು ಹಾಳು ಮಾಡಿದ್ದವು. ಒಂದು ಆನೆ ಇತ್ತು ಎನ್ನಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನೋವಾ-ಇಕೋ ಕಾರು ನಡುವೆ ಅಪಘಾತಕ್ಕೆ ಮತ್ತೊಂದು ಸಾವು!
ಇನ್ನೋವಾ ಮತ್ತು ಇಕೋ ಕಾರುಗಳ ನಡುವೆ ಡಿಕ್ಕಿ ಹೊಡೆದು ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನು ಕಂಡಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆಯಲ್ಲಿ ನಡೆದಿದ್ದು ಇನ್ನೋರ್ವ ಕೂಡ ಆಸ್ಪತ್ರೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮೃತರು ಅಕ್ಕಿ ಆಲೂರು ರಾಣಿಬೆನ್ನೂರು ಮೂಲದ ಸಂಶದ್ ಭಾನು (50) ಮತ್ತು ಅವರ ಪುತ್ರ. ಮೂವರು ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಡುಮಲ್ಲಿಗೆ ಮಿಲ್ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ಕಾರು 3 ಪಲ್ಟಿಯಾಗಿ ಸಾವನ್ನು ಕಂಡಿದ್ದಾರೆ ಎಂದು ಹೇಳಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೊರಬ: ಪೋಸ್ಟ್ ಆಫೀಸ್ ಕಳ್ಳತನಕ್ಕೆ ಯತ್ನ!
ಸೊರಬ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತವರೂರಾದ ಸೊರಬ ಪಟ್ಟಣದ ಬಸ್ ಸ್ಟ್ಯಾಂಡ್ ಬಳಿಯಿರುವ ಪೋಸ್ಟ್ ಆಫೀಸ್ ನಲ್ಲಿ ಬುಧವಾರ ಬೆಳಗ್ಗಿನ ಜಾವದಲ್ಲಿ ಕಳ್ಳತನಕ್ಕೆ ಯತ್ನಿಸಲು ಬಂದಿದ್ದ ಕಳ್ಳರು ಅಲ್ಲಿರುವ ಸಿಸಿ ಕ್ಯಾಮೆರಾ ಧ್ವಂಸ ಗೊಳಿಸಿ ಹಾಗು ಮುಂಭಾಗದ ಗೇಟ್ ಗೆ ಹಾಕಲಾಗಿದ್ದ ಬೀಗ ಮುರಿದು ಕಳ್ಳತನ ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರು ಹೇಳುವ ಪ್ರಕಾರ ಈ ಒಂದೇ ವರ್ಷದಲ್ಲಿ ಇದು ಮೂರು ಬಾರಿ ಈ ರೀತಿಯ ಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ. ಸೊರಬ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದಾರೆ.