ಟಾಪ್ ನ್ಯೂಸ್ ಮಲ್ನಾಡ್
ರಿಪ್ಪನ್ ಪೇಟೆ : ಅಡಿಕೆ ಮರದಿಂದ ಕೆಳಗೆ ಬಿದ್ದು ರೈತ ಸಾವು
– ಶಿವಮೊಗ್ಗ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ
– ಚಿಕ್ಕಮಗಳೂರು : ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯನ್ನೇ ಬಡಿದು ಕೊಂದ ಪತ್ನಿ !
– ಶಿವಮೊಗ್ಗ : ಬಿ ಎಸ್ ಎನ್ ಎಲ್ ಫೈಬರ್ ಕೇಬಲ್ ಕಳುವು
– ಕಡೂರು: ಲಾರಿ ಹಾಗೂ ಟಿಟಿ ವಾಹನದ ಮಧ್ಯ ಸರಣಿ ಅಪಘಾತ
NAMMUR EXPRESS NEWS
ರಿಪ್ಪನ್ಪೇಟೆ : ಇಲ್ಲಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಕಮ್ಮಚ್ಚಿ ಗ್ರಾಮದಲ್ಲಿ ಅಡಿಕೆ ಮರಕ್ಕೆ ಔಷದಿ ಸಿಂಪಡಿಸುವಾಗ ಮರದಿಂದ ಕೆಳಗೆ ಬಿದ್ದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಮ್ಮಚ್ಚಿ ಗ್ರಾಮದ ಪ್ರದೀಪ್ ಟಿ ಕೆ (42) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಮ್ಮಚ್ಚಿ ಗ್ರಾಮದಲ್ಲಿ ಇಂದು ಸಂಜೆ 4 ಗಂಟೆ ಸಮಯದಲ್ಲಿ ಅಡಿಕೆ ತೋಟಕ್ಕೆ ಔಷಧಿ ಸಿಂಪಡಿಸುತಿದ್ದ ರೈತ ಪ್ರದೀಪ್ ಆಯ ತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ. ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶಿವಮೊಗ್ಗ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ
ಶಿವಮೊಗ್ಗ : ಗಾಂಜಾ ಮಾರಾಟ ಮಾಡುತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಯುವಕರನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಗಾಡಿಕೊಪ್ಪದ ಮೋಹನ್ (29) ಹಾಗೂ ಗೋಪಾಳದ ಮಿಥುನ್ (19) ಬಂಧಿತ ಆರೋಪಿಗಳಾಗಿದ್ದಾರೆ. ನಗರದ ಅನುಪಿನಕಟ್ಟೆ ಗ್ರಾಮದಲ್ಲಿ ದಿನಾಂಕ 14-05- 2024 ರಂದು ಮಧ್ಯಾಹ್ನ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಪೋಲಿಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ, ಮತ್ತು ಕಾರಿಯಪ್ಪ ಎ ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ತಿಪ್ಪೇಸ್ವಾಮಿ ಪೊಲೀಸ್ ನಿರೀಕ್ಷಕರು ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆರವರ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ 1) ಮೋಹನ, 29 ವರ್ಷ, ಗಾಡಿಕೊಪ್ಪ ಶಿವಮೊಗ್ಗ ಮತ್ತು 2) ಮಿಥುನ್ 19 ವರ್ಷ ಗೋಪಾಳ ಶಿವಮೊಗ್ಗ ಇವರನ್ನು ವಶಕ್ಕೆ ಪಡೆದು, ಸದರಿಯವರಿಂದ ಅಂದಾಜು ಮೌಲ್ಯ 75,000/- ರೂ ಗಳ ಒಟ್ಟು 715 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತುಪಡಿಸಿಕೊಂಡು, ಆರೋಪಿತರ ವಿರುದ್ಧ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0044/2024 ಕಲಂ 20 (ಬಿ) II (ಎ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
– ಚಿಕ್ಕಮಗಳೂರು : ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯನ್ನೇ ಬಡಿದು ಕೊಂದ ಪತ್ನಿ !
ಚಿಕ್ಕಮಗಳೂರು : ಗಂಡ-ಹೆಂಡತಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಮಗಳೂರಿನ ಗೌರಿ ಕಾಲುವೆಯ ವಾಟರ್ ಟ್ಯಾಂಕ್ ಬಡಾವಣೆಯಲ್ಲಿ ನಡೆದಿದೆ. ಸುರೇಶ (55) ಕೊಲೆಯಾದ ವ್ಯಕ್ತಿ. ಮರಗೆಲಸ ವೃತ್ತಿ ಮಾಡುತ್ತಿದ್ದ ಸುರೇಶ ಪ್ರತಿದಿನ ಮದ್ಯಪಾನ ಮಾಡಿ ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಕಳೆದ ರಾತ್ರಿ ಸಹ ಇವರಿಬ್ಬರ ನಡುವೆ ಜಗಳ ನಡೆದಿದ್ದು, ಆತನ ಕಾಟ ತಾಳಲಾರದೆ ಪತ್ನಿ ಭಾರತಿ ಹೊಡೆದಾಟಕ್ಕೆ ಇಳಿದಿದ್ದಾಳೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ದೊಣ್ಣೆ ತೆಗೆದುಕೊಂಡು ಬಲವಾಗಿ ಸುರೇಶನ ತಲೆಗೆ ಬಾರಿಸಿದ್ದಾಳೆ. ಈ ವೇಳೆ ಸುರೇಶ ಹೆಡ್ ಇಂಜ್ಯುರಿ ಉಂಟಾಗಿ ಕುಸಿದು ಬಿದಿದ್ದಾನೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ. ಬಸವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
– ಶಿವಮೊಗ್ಗ : ಬಿ ಎಸ್ ಎನ್ ಎಲ್ ಫೈಬರ್ ಕೇಬಲ್ ಕಳುವು
ಶಿವಮೊಗ್ಗ: ವಿವಿಧೆಡೆ ಅಳವಡಿಸಿದ್ದ ಬಿಎಸ್ಎನ್ಎಲ್ನ ಫೈಬರ್ ಕೇಬಲ್ ಕಳ್ಳತನ ಮಾಡಲಾಗಿದೆ. ಒಟ್ಟು 31,800 ರೂ. ಮೌಲ್ಯದ ಕೇಬಲ್ ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬಿಎಸ್ಎನ್ಎಲ್ನ ಭದ್ರಾವತಿ ಜೆ.ಇ ಸವಿತಾ ದೂರು ನೀಡಿದ್ದಾರೆ. ಹೊಳೆಹೊನ್ನೂರಿನಿಂದ ಕೈಮರ, ಅರೆಬಿಳಚಿಯಿಂದ ಅರೆಬಿಳಚಿ ಕ್ಯಾಂಪ್, ಕೈಮರದಿಂದ ಆನವೇರಿ, ಅರೆಬಿಳಚಿಯಿಂದ ಕೈಮರ, ಹೊಳೆಹೊನ್ನೂರು ಸರ್ಕಲ್ನಿಂದ ಪಟ್ಟಣ ಪಂಚಾಯಿತಿವರೆಗೆ ಅಳವಡಿಸಿದ್ದ 5300 ಮೀಟರ್ ಕೇಬಲ್ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಕಡೂರು: ಲಾರಿ ಹಾಗೂ ಟಿಟಿ ವಾಹನದ ಮಧ್ಯ ಸರಣಿ ಅಪಘಾತ
ಕಡೂರು: ಲಾರಿ ಹಾಗೂ ಟಿಟಿ ವಾಹನದ ಮಧ್ಯ ಸರಣಿ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ್ದು ಐವರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಯಲು ಬಸಪ್ಪನ ದಿಬ್ಬ ಬಳಿ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಯಲು ಬಸಪ್ಪನ ದಿಬ್ಬ ಗ್ರಾಮದಲ್ಲಿ ಸರಣಿ ಅಪಘಾತದಲ್ಲಿ ಓರ್ವ ಸಾವನಪ್ಪಿದ್ದಾರೆ. ಇದೆ ವೇಳೆ ಟಿಟಿ ವಾಹನಕ್ಕೆ ಮತ್ತೊಂದು ಲಾರಿ ಹಿಂದಿನಿಂದ ಬಂದು ಗುದ್ದಿದೆ ಟಿಟಿ ಅಲ್ಲಿದ್ದ ಹಾಸನ ಮೂಲದ ಮಂಜುನಾಥ್ (40) ಮೃತಪಟ್ಟವರು. ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಎರಡು ಲಾರಿ ಒಂದು ಟಿಟಿ ವಾಹನದ ನಡುವೆ ಅಪಘಾತ ಸಂಭವಿಸಿದೆ. ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ವಾಹನ ಗುದ್ದಿದೆ. ಅಲ್ಲದೆ ವಾಹನದಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ತಕ್ಷಣ ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತಂತೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.