Categories
ಕೊಪ್ಪ ಮಲ್ನಾಡ್ ಶಿವಮೊಗ್ಗ ಹೊಸನಗರ

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಕೊಪ್ಪ: ಚೀಲಗಳಲ್ಲಿ ಗೋವಿನ ಕಳೆಬರ ಪತ್ತೆ: ಪ್ರತಿಭಟನೆ
– ಶಿವಮೊಗ್ಗ: ಕೊಲೆಯಾದ ಬಾಲಕನ ಕುಟುಂಬಕ್ಕೆ ವಿಜಯೇಂದ್ರ ಸಾಂತ್ವನ
– ಹೊಸನಗರ: ಕಳೆ ನಾಶಕ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ರಸ್ತೆಯ ಪಕ್ಕದಲ್ಲಿ ನಾಲ್ಕು ಚೀಲಗಳಲ್ಲಿ ಗೋವಿನ ಕಳೆಬರ ಪತ್ತೆಯಾಗಿರುವ ಘಟನೆ ತೀರ್ಥಹಳ್ಳಿ ಮತ್ತು ಕೊಪ್ಪ ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ಶಿವಪುರದಲ್ಲಿ ನಡೆದಿದೆ. ಎರಡು ತಿಂಗಳ ಹಿಂದೆ ಕೂಡ ಇದೇ ರೀತಿ ಗೋವಿನ ಕಳೆಬರವನ್ನು ಹಾಕಲಾಗಿತ್ತು ಎನ್ನುವ ಸಂಗತಿ ಕೂಡ ಈ ಹಿನ್ನೆಲೆಯಲ್ಲಿ ಬೆಳಕಿಗೆ ಬಂದಿದೆ.

ಇಂತಹ ಘಟನೆಯಿಂದಾಗಿ ತೀವ್ರ ಆಕ್ರೋಶಗೊಂಡಿರುವ ಭಜರಂಗದಳದವರು ಸೋಮವಾರ ರಾಷ್ಟ್ರೀಯ ಹೆದ್ದಾರಿಯ ನಡುವೆ ಕುಳಿತು ಅರ್ಧ ಗಂಟೆಗಳಿಗೂ ಹೆಚ್ಚಿನ ಕಾಲ ಪ್ರತಿಭಟನೆಯನ್ನು ನಡೆಸಿದರು. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೊಪ್ಪ ಪೊಲೀಸರು, ರಸ್ತೆಯನ್ನು ತಡೆಗಟ್ಟಿ ಪ್ರತಿಭಟನೆಯನ್ನು ನಡೆಸುವುದರಿಂದ ಮುಂದಾಗುವ ಪರಿಣಾಮದ ಕುರಿತು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿಸುವ ಮೂಲಕ, ಸಮಾಧಾನಪಡಿಸಿದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು “ಪದೇ ಪದೇ ಇದೇ ರೀತಿಯ ಘಟನೆ ನಡೆಯುತ್ತಿರುವುದರಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಪೊಲೀಸರಿಗೆ ಆಗ್ರಹಪಡಿಸಿದರು ಎನ್ನುವ ಸಂಗತಿ ತಿಳಿದುಬಂದಿದೆ.

ಕಳೆ ನಾಶಕ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಹೊಸನಗರ: ರಿಪ್ಪನ್‌ಪೇಟೆ ಸಮೀಪದ ಕಗ್ಗಲಿ ಗ್ರಾಮದ ಯುವಕ ರಾಕೇಶ್ ಕಳೆನಾಶಕ ಸೇವಿಸಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ದುರ್ಘಟನೆ ವರದಿಯಾಗಿದೆ. ಫೆಬ್ರವರಿ 24ರಂದು ಮನೆ ಸಮೀಪದ ಅಡಿಕೆ ತೋಟದಲ್ಲಿ ರಾಕೇಶ್ ವಿಷ ಸೇವಿಸಿ ಕುಸಿದುಬಿದ್ದಿದ್ದನ್ನು ಗಮನಿಸಿದ ಕುಟುಂಬಸ್ಥರು ಮತ್ತು ಸ್ಥಳೀಯರು ತಕ್ಷಣವೇ ಅವರನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 2ರ ರಾತ್ರಿ 1.20ರ ಸುಮಾರಿಗೆ ರಾಕೇಶ್ ಮೃತಪಟ್ಟಿದ್ದಾರೆ. ದೂರಿನ ಪ್ರಕಾರ, ರಾಕೇಶ್ ಸುಮಾರು ಒಂದೂವರೆ ತಿಂಗಳ ಹಿಂದೆ ಬೈಕ್‌ನಿಂದ ಬಿದ್ದು ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದರು.

ಈ ಹಿನ್ನೆಲೆ ಅವರಿಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆ ಹಾಗೂ ಮಂಗಳೂರಿನ ಏನಪೋಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಪಘಾತ ಸ್ವತಃ ಸಂಭವಿಸಿದ್ದರಿಂದ ಈ ಕುರಿತು ಯಾವುದೇ ದೂರು ದಾಖಲಾಗಿರಲಿಲ್ಲ. ಚಿಕಿತ್ಸೆಯ ಬಳಿಕ ರಾಕೇಶ್ ಮನೆಗೆ ಮರಳಿದ್ದರೂ, ಮಾನಸಿಕವಾಗಿ ಮಂಕಾಗಿದ್ದು, ಹೆಚ್ಚಿನ ಸಮಯ ಮೌನವಾಗಿಯೇ ಕಳೆಯುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದೇ ಅವಧಿಯಲ್ಲಿ ಮನೆಯ ಬಚ್ಚಲು ಮನೆಯಲ್ಲಿ ಜಾರಿ ಬಿದ್ದು ಮತ್ತೆ ತಲೆಗೆ ಏಟು ಮಾಡಿಕೊಂಡಿದ್ದ ಘಟನೆ ಕೂಡ ನಡೆದಿದೆ ಎನ್ನಲಾಗಿದೆ. ಈ ಎಲ್ಲ ಘಟನೆಗಳನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ರಾಕೇಶ್ ಫೆಬ್ರವರಿ 24ರಂದು ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಅಡಿಕೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಕೊಲೆ: ಕುಟುಂಬಕ್ಕೆ ಸಾಂತ್ವನ ಹೇಳಿದ ವಿಜಯೇಂದ್ರ

ಶಿವಮೊಗ್ಗ: ಶಿವಮೊಗ್ಗದ ಸೂಳೆಬೈಲಿನಲ್ಲಿ ಅಪ್ರಾಪ್ತ ದುಷ್ಕರ್ಮಿಗಳಿಂದ ಹತ್ಯೆಯಾದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸಂಕೇತ್ ಅವರ ಮನೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮತ್ತು ಬಿಜೆಪಿ ನಾಯಕರು ತೆರಳಿ, ಇನ್ನೂ ತೀವ್ರ ಆಘಾತದಲ್ಲಿರುವ ಅವರ ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಹಲ್ಲೆಯ ಸಂದರ್ಭದಲ್ಲಿ ಗಾಯಗೊಂಡಿದ್ದ ಮತ್ತೋರ್ವ ವಿದ್ಯಾರ್ಥಿ ಗಿರೀಶ್ ಅವರ ಮನೆಗೂ ತೆರಳಿ, ಆತನಿಗೂ, ಆತನ ಕುಟುಂಬದವರಿಗೂ ಧೈರ್ಯ ತುಂಬಲಾಯಿತು. ನಾಗರಿಕ ಸಮಾಜ ಬೆಚ್ಚಿ ಬೀಳುವಂತೆ, ಅಪ್ರಾಪ್ತರೇ ಕೊಲೆ ಮಾಡುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದ್ದು, ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಅಗತ್ಯ, ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಪೊಲೀಸ್ ಮತ್ತು ರಾಜ್ಯ ಸರ್ಕಾರಕ್ಕೆ ವಿಜಯೇಂದ್ರ ಅಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.