ಊರಿಗೆ ನುಗ್ಗುತ್ತಿವೆ ಕಾಡು ಆನೆಗಳು!
– ಹೆಬ್ರಿಯಲ್ಲಿ ಕಾಡು ಆನೆಗಳ ಹಾವಳಿ!
– ಕೊಪ್ಪದ ಜಯಪುರದಲ್ಲಿ ಕಾಡು ಆನೆ ಪ್ರತ್ಯಕ್ಷ
– ಕರಾವಳಿ, ಮಲೆನಾಡಲ್ಲಿ ಕಾಡು ಆನೆ ಕಂಟಕ
NAMMUR EXPRESS NEWS
ಕರಾವಳಿ / ಮಲೆನಾಡು: ಆನೆಗಳ ಹಾವಳಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಧಿಕಗೊಂಡಿದೆ. ಕಾಡಿನ ನಾಶದಿಂದ ತಿನ್ನಲು ಸರಿಯಾಗಿ ಆಹಾರ ದೊರಕದ ಕಾರಣ, ಆನೆಗಳು ಅಲ್ಲಿಂದ ಹೊರಬಂದು ಊರುಗಳನ್ನು ಪ್ರವೇಶಿಸಿ ಆಹಾರದ ಶೋಧನೆಯಲ್ಲಿದ್ದರೆ ಮತ್ತೆ ಕೆಲವು ಆನೆಗಳು ಕಾಡು ಮತ್ತು ನಾಡು ಒಂದೇ ಆಗಿರುವ ಕಾರಣ ದಾರಿ ತಪ್ಪಿ ಊರುಗಳನ್ನು, ಗ್ರಾಮಗಳನ್ನು ಪ್ರವೇಶಿಸುತ್ತಿವೆ. ರಸ್ತೆಯ ತುಂಬಾ ಓಡಾಟ ಆರಂಭಿಸಿದೆ. ಇದು ಸುತ್ತಮುತ್ತಲ ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಈಗಾಗಲೇ ಹೊಸನಗರ, ತೀರ್ಥಹಳ್ಳಿ, ಸಿದ್ದಾಪುರ ಭಾಗದಲ್ಲಿ ಆತಂಕ ಸೃಷ್ಟಿ ಮಾಡಿದ್ದ ಆನೆಯನ್ನು ಹಿಡಿದ ಬೆನ್ನಲ್ಲೇ ಕರಾವಳಿ ಮಲೆನಾಡು ಸಂಗಮ ಹೆಬ್ರಿಯಲ್ಲಿ ಕಾಡು ಆನೆ ಪ್ರತ್ಯಕ್ಷವಾಗಿದೆ.
ಹೆಬ್ರಿ ಸಮೀಪದ ಸೀತಾನದಿ ಬೆಳಾರ್ ಎಂಬ ಪ್ರದೇಶದಲ್ಲಿ ಒಂಟಿ ಸಲಗವೊಂದು ಓಡಾಡುತ್ತಿದ್ದು, ಅಲ್ಲಿ ವಾಸವಾಗಿರುವ ಜನರಲ್ಲಿ ಆತಂಕ ಮನೆಮಾಡಿದೆ. ಆನೆಯಿಂದ ರಕ್ಷಣೆ ಕೋರಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ.ಇನ್ನು ಹೆಚ್ಚಿನ ಭಯ ಹುಟ್ಟಿಸುವ ಸಂಗತಿ ಎಂದರೆ ಹೆಬ್ರಿಯಿಂದ ನೆಲ್ಲಿಕಟ್ಟೆಯ ವರೆಗೆ ಮಾತ್ರ ಬಸ್ ಸೌಕರ್ಯವಿದ್ದು ಬೆಳಾರ್ ಪ್ರದೇಶಕ್ಕೆ ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ ಇದ್ದು, ಮಕ್ಕಳು ಶಾಲೆಗೆ ಹೋಗಲು ಮತ್ತು ತುರ್ತು ಕೆಲಸಕ್ಕಾಗಿ ನೆಲ್ಲಿಕಟ್ಟೆ ಅಥವಾ ಹೆಬ್ರಿಗೆ ಜನರು ಬರಲು ಅಪಾಯ ಎದುರಾಗಿದೆ. ಅರಣ್ಯ ಇಲಾಖೆ ಈಗಾಗಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದು, ಕೆಲವು ಎಚ್ಚರಿಕೆಗಳನ್ನು ನೀಡಿ, ರಾತ್ರಿ ಸಮಯ ಒಬ್ಬಂಟಿಗಳಾಗಿ ಇಲ್ಲವೆ ದ್ವಿಚಕ್ರ ವಾಹನಗಳಲ್ಲಿ ಓಡಾಡಬೇಡಿ ಎಂದು ನಿಯಮವನ್ನು ಜಾರಿಗೊಳಿಸಿ, ಅದನ್ನು ಅನುಸರಿಸುವಂತೆ ಗ್ರಾಮಸ್ಥರಲ್ಲಿ ತಿಳಿಹೇಳಿ ಧೈರ್ಯ ತುಂಬುವ ಪ್ರಯತ್ನ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರದಲ್ಲಿ ಕಾಡು ಆನೆ ಪತ್ತೆ ಆಗಿದೆ. ಇತ್ತೀಚಿಗೆ ಅದರ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಒಟ್ಟಿನಲ್ಲಿ ಆನೆಗಳು ಊರಿಗೆ ಎಂಟ್ರಿ ಆಗುತ್ತಿರುವುದು ಭಯ ಹುಟ್ಟಿಸಿದೆ.
