Categories
ಮಂಗಳೂರು

ಮಂಗಳೂರಲ್ಲಿ ಗುಡ್ಡ ಕುಸಿದು ಅವಘಡ!

ಮಂಗಳೂರಲ್ಲಿ ಗುಡ್ಡ ಕುಸಿದು ಅವಘಡ!

NAMMUR EXPRESS NEWS
ಮಂಗಳೂರು: ತಿರುವೈಲು ಸರಕಾರಿ ಶಾಲೆಗಿಂತ ಸ್ವಲ್ಪ ಮುಂದಕ್ಕೆ ಸಿಗುವ ತಿರುವಿನಲ್ಲಿ ಗುಡ್ಡ ಜರಿಯುತ್ತಿದ್ದು, ಕೆಲವು ದಿನಗಳ ಹಿಂದೆ ಒಮ್ಮೆ ಗುಡ್ಡ ಜರಿದು ಬಿದ್ದಿತ್ತು. ಇದೀಗ ಮತ್ತೆ ಜರಿದು ಬಿದ್ದಿದೆ. ಗುಡ್ಡದ ಮೇಲಿದ್ದ ದೊಡ್ಡ ಗಾತ್ರದ ಮುರ ಕಲ್ಲುಗಳು ಉರುಳಿ ಬಂದು ರಸ್ತೆಗೆ ಬಿದ್ದಿವೆ. ಇನ್ನಷ್ಟು ಬೃಹತ್ ಕಲ್ಲುಗಳು, ಮರಗಳು ಬೀಳುವ ಸ್ಥಿತಿಯಲ್ಲಿವೆ. ಗುಡ್ಡಕ್ಕೆ ಕೆಳ ಭಾಗದಲ್ಲಿ ಕೈಗೊಳ್ಳಲಾಗಿದ್ದ ಸಾಯಿಲ್ ನೈಲಿಂಗ್ ಕಾಮಗಾರಿ ನೆಲಸಮವಾಗಿದೆ. ಸದ್ಯ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜೂ. 15ರಂದು ಬೆಳಗ್ಗೆ ರಸ್ತೆಯಲ್ಲಿ ಬಿದ್ದಿರುವ ಮಣ್ಣು ಕಲ್ಲುಗಳನ್ನು ಹಿಟಾಚಿ ಮೂಲಕ ತೆರವುಗೊಳಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಪೊಲೀಸರು ಸ್ಥಳದಲ್ಲಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗದಂತೆ ಕ್ರಮ ವಹಿಸಿದ್ದಾರೆ. ಸ್ಥಳಕ್ಕೆ ಎನ್‌ಎಚ್‌ಎಐ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆತ್ತಿಕಲ್ ಪ್ರದೇಶದಲ್ಲಿ ಎರಡು ದಶಕಗಳ ಹಿಂದೆಯೇ ಗುಡ್ಡ ಕುಸಿದು ಸಾಕಷ್ಟು ಹಾನಿಯಾಗಿತ್ತು. ಅಂತಹ ಸ್ಥಳದಲ್ಲಿ ಕಾಮಗಾರಿ ಕೈಗೊಳ್ಳುವಾಗ ಸ್ಥಳೀಯರ ಅಭಿಪ್ರಾಯ ಪಡೆಯಬೇಕಿತ್ತು. ಎಲ್ಲಿಂದಲೋ ಬಂದ ಅಧಿಕಾರಿಗಳು ಇಲ್ಲಿನ ನೆಲ, ಮಣ್ಣು, ಮಳೆಯ ಪರಿಚಯವಿಲ್ಲದೆ ಏಕಾಏಕಿ ಕಾಮಗಾರಿ ಕೈಗೊಂಡ ಪರಿಣಾಮವೇ ಇದು. ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರ ಕುಸಿತ ಉಂಟಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗುಡ್ಡದಿಂದ ಹರಿದು ಬರುತ್ತಿರುವ ನೀರು 

ಗುಡ್ಡದ ಮೇಲ್ಬಾಗದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಮಾಡಲಾಗಿದ್ದರೂ, ಅದರಲ್ಲಿ ಮಣ್ಣು ತುಂಬಿ ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಇನ್ನೊಂದು ಬದಿಯಲ್ಲಿ ಗುಡ್ಡಕ್ಕೆ ಅಭಿಮುಖವಾಗಿ ತಡೆಗೋಡೆ ಕಟ್ಟಿ ರಸ್ತೆ ನಿರ್ಮಾಣಕ್ಕೆ ಮಣ್ಣು ತುಂಬಿಸಲಾಗುತ್ತಿದ್ದು, ನೀರಿನ ರಭಸಕ್ಕೆ ಈ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.