ಕುಡುಪು ಗುಂಪು ಹತ್ಯೆ, ಇನ್‌ಸ್ಪೆಕ್ಟರ್ ಶಿವಕುಮಾರ್ ಸಹಿತ ಮೂವರು ಪೊಲೀಸರು ಅಮಾನತು!
– ಹಲ್ಲೆ ವೇಳೆ ಕರೆ ಮಾಡಿ ವಿಷಯ ತಿಳಿಸಿದರೂ ನಿರ್ಲಕ್ಷಿಸಿದ ಪೊಲೀಸರು
– ಬಂಧಿತರ ಸಂಖ್ಯೆ 23 ಕ್ಕೆ ಏರಿಕೆ!
NAMMUR EXPRESS NEWS
ಮಂಗಳೂರು: ನಗರ ಹೊರವಲಯದ ಕುಡುಪು ಎಂಬಲ್ಲಿ ಎ.27ರಂದು ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಕೆ ಆರ್, ಹೆಡ್‌ಕಾನ್‌ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತುಗೊಳಿಸಲಾಗಿದೆ.
ಎ.27ರಂದು ಕುಡುಪುವಿನ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸಮಯ ಓರ್ವ ಅಪರಿಚಿತ ವ್ಯಕ್ತಿಗೆ, ಆಟಗಾರರು ಮತ್ತು ಅಲ್ಲಿ ನರೆದಿದ್ದ ಪ್ರೇಕ್ಷಕರು ಗುಂಪು ಹಲ್ಲೆ ನಡೆಸುತ್ತಿದ್ದ ಕುರಿತು ದೀಪಕ್ ಎಂಬುವರು ಪೊಲೀಸರಿಗೆ ಪೋನ್ ಕರೆ ಮಾಡಿ ತಿಳಿಸಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್, ಸಿಬ್ಬಂದಿಗಳಿಗೆ ಮಾಹಿತಿ ಬಂದಿತ್ತು. ಘಟನೆಯ ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ಗುಂಪು ಹತ್ಯೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿಲ್ಲ ಎನ್ನಲಾಗಿದೆ.
ಹಾಗಾಗಿ ಗುಂಪು ಹತ್ಯೆ ಪ್ರಕರಣವು ಮೊದಲು ಯುಡಿಆರ್ ಪ್ರಕರಣವಾಗಿ, ಬಳಿಕ ಗುಂಪು ಹತ್ಯೆ ಪ್ರಕರಣವಾಗಿ ದಾಖಲಾಯಿತು.
ಗುಂಪು ಹತ್ಯೆಯ ಬಗ್ಗೆ ಮಾಹಿತಿ ತಿಳಿದಿದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತಾರದೇ ತೀವ್ರ ಕರ್ತವ್ಯ ನಿರ್ಲಕ್ಷತನ ತೋರಿದ ಆರೋಪದ ಮೇಲೆ ಮೂವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
– ಬಂಧಿತರ ಸಂಖ್ಯೆ 23 ಕ್ಕೆ ಏರಿಕೆ!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುಡುಪು ಬಳಿ ಗುಂಪು ಹಲ್ಲೆಯಿಂದ ಕೇರಳದ ವ್ಯಕ್ತಿ ಮೃತಪಟ್ಟ ಘಟನೆ ಸಂಬಂಧಪಟ್ಟಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೀಪ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ. ‘ಪಾಕಿಸ್ತಾನ ಪಾಕಿಸ್ತಾನ’ ಬೊಬ್ಬೆ ಹೊಡೆದಿದ್ದೇ ಈ ಘಟನೆಗೆ ಕಾರಣ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಕ್ರಿಕೆಟ್ ಪಂದ್ಯದ ವೇಳೆ ಕೇರಳದ ವ್ಯಕ್ತಿ ಮೊಹಮ್ಮದ್ ಅಶ್ರಫ್, ‘ಪಾಕಿಸ್ತಾನ ಪಾಕಿಸ್ತಾನ’ ಎಂದು ಘೋಷಣೆ ಕೂಗಿದ್ದ. ಆಗ ಸ್ಥಳದಲ್ಲಿದ್ದವರು ಆತನನ್ನು ಬೆನ್ನಟ್ಟಿ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಮತ್ತೆ ಮೂವರನ್ನು ಬಂಧನ ಮಾಡಿದ್ದಾರೆ. ಬಂಧಿತರ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ.
