Categories
ಮಂಗಳೂರು

ಮಂಗಳೂರು: ದುಷ್ಕರ್ಮಿಗಳ ದಾಳಿ.!

ಮಂಗಳೂರು: ದುಷ್ಕರ್ಮಿಗಳ ದಾಳಿ.!

– ಹಿಂದೂ ಕಾರ್ಯಕರ್ತ, ರೌಡಿ ಶೀಟ‌ರ್ ಸುಹಾಸ್‌ ಶೆಟ್ಟಿ ಬಜ್ಪೆ ಹತ್ಯೆ
– ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ಉಗ್ರ ಪ್ರತಿಭಟನೆ
– ವಾಹನ ಸಂಚಾರಕ್ಕೆ ಸ್ಥಗಿತ, ಜನಸಾಮಾನ್ಯರಲ್ಲಿ ಆತಂಕ

NAMMUR EXPRESS NEWS
ಮಂಗಳೂರು: ಬಜ್ಪೆ ಸಮೀಪದ ಕಿನ್ನಿಪದವು ಬಳಿ ಅಪರಿಚಿತ ಗುಂಪೊಂದು ದಾಳಿ ನಡೆಸಿ ಹಿಂದೂ ಕಾರ್ಯಕರ್ತ ರೌಡಿ ಶೀಟರ್ ಸುಹಾಸ್ ಶೆಟ್ಟಿ ಬಜ್ಪೆ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಿಂದೂ ಸಂಘಟನೆಗಳಲ್ಲಿ ಪ್ರಭಲವಾಗಿ ಗುರುತಿಸಿಕೊಂಡಿದ್ದ ಸುಹಾಸ್ ಶೆಟ್ಟಿ ಹತ್ಯೆ ಇದೊಂದು ಪೂರ್ವ ನಿಯೋಜಿತ ದಾಳಿ ಎಂಬ ಅನುಮಾನ ವ್ಯಕ್ತವಾಗಿದ್ದು, ಹತ್ಯೆ ಆದ ಸುಹಾಸ್ ಶೆಟ್ಟಿ ಈ ಹಿಂದೆ 2022ರಲ್ಲಿ ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು ಒಂದು ವರ್ಷದ ಹಿಂದೆ ಬೇಲ್ ಪಡೆದು ಹೊರಬಂದಿದ್ದ ಎನ್ನಲಾಗಿದೆ. ಹೀಗಾಗಿ ಫಾಝಿಲ್ ಹತ್ಯೆಯ ಪ್ರತಿಕಾರವಾಗಿ ಈ ಹತ್ಯೆ ನಡೆದಿದೆ ಎಂದು ಅನುಮಾನ ವ್ಯಕ್ತವಾಗಿದ್ದು ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇದೊಂದು ಬರ್ಬರ ದಾಳಿಯಾಗಿದ್ದು ದುಷ್ಕರ್ಮಿಗಳು ಕೊಚ್ಚಿದ ರಭಸಕ್ಕೆ ಸುಹಾಸ್ ಶೆಟ್ಟಿ ತಲೆ, ಕೈ, ಕಾಲು, ದೇಹವೆಲ್ಲ ಗಾಯಗಳಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ರಕ್ತದ ಹೊಳೆಯೇ ಹರಿದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಸುಹಾಸ್‌ ಶೆಟ್ಟಿಯನ್ನು ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದಾರಿ ಮಧ್ಯೆಯೇ ಸುಹಾಸ್ ಮೃತಪಟ್ಟ ಬಗ್ಗೆ ವೈದ್ಯರು ಖಾತರಿ ಪಡಿಸಿದ್ದಾರೆ.
ಸುಹಾಸ್‌ ಶೆಟ್ಟಿ ಇನ್ನೋರ್ವ ಕಾರಿನಲ್ಲಿ ಬಜ್ಪೆಯ ಕಿನ್ನಿಪದವು ಬಳಿ ಬರುತ್ತಿದ್ದ ಸಂದರ್ಭ, ಮೀನಿನ ಪಿಕ್ ಅಪ್ ವಾಹನವೊಂದು ಕಾರಿಗೆ ಅಡ್ಡಗಟ್ಟಿ ಅಪಘಾತ ನಡೆಸಲೆತ್ನಿಸಿದ್ದು ಸುಹಾಸ್ ಶೆಟ್ಟಿ ಕಾರು ರಸ್ತೆ ಬದಿಯ ಸಲೂನ್ ಒಂದಕ್ಕೆ ನುಗ್ಗಿದೆ, ಸುಹಾಸ್ ಶೆಟ್ಟಿ ಹಾಗು ಸಹಚರರು ಕಾರಿನಿಂದ ಇಳಿಯುವಷ್ಟರಲ್ಲೇ ಸುಹಾಸ್‌ ಶೆಟ್ಟಿಯನ್ನು ಬೆನ್ನಟ್ಟಿ ಬಂದಿದ್ದ ಸ್ವಿಫ್ಟ್ ಕಾರಿನಲ್ಲಿದ್ದ ದುಷ್ಕರ್ಮಿಗಳ ತಂಡ ದಾಳಿ ನಡೆಸಿದ್ದು ಸುಹಾಸ್ ಶೆಟ್ಟಿಯನ್ನೇ ಗುರಿಯಾಗಿಸಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ದಾಳಿ ವೇಳೆ ಸುಹಾಸ್‌ ಶೆಟ್ಟಿ ಜೊತೆಗಿದ್ದವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರೆಲ್ಲರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಕಮಿಷನ‌ರ್ ತಿಳಿಸಿದ್ದಾರೆ. ಘಟನೆಗೆ ಸಂಭಂದಿಸಿದಂತೆ ದುಷ್ಕರ್ಮಿಗಳ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೊಲೀಸ್ ಬಿಗಿ ಬಂದೋಬಸ್ತ್!

ಆಸ್ಪತ್ರೆ ಬಳಿ ಹಿಂದೂ ಕಾರ್ಯಕರ್ತರ ದಂಡು ಆಗಮಿಸಿದ್ದು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನು ಸುಹಾಸ್‌ ಶೆಟ್ಟಿ ಮೃತದೇಹವಿರುವ ಖಾಸಗಿ ಆಸ್ಪತ್ರೆಗೆ ಈಗಾಗಲೇ ಬಿಜೆಪಿ ನಾಯಕರು ಆಗಮಿಸಿದ್ದು,ಶಾಸಕರಾದ ಡಾ. ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹಾಗು ಮಾಜಿ ಸಂಸದ ನಳಿನ್ ಕುಮಾ‌ರ್ ಕಟೀಲ್‌ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

* ಇಂದು ದಕ್ಷಿಣ ಕನ್ನಡ ಬಂದ್, ಮಂಗಳೂರಿನಲ್ಲಿ ನಿಷೇಧಾಜ್ಞೆ

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕರೆ ನೀಡಿದೆ. ಮೇ. 2ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ದಕ್ಷಿಣ ಕನ್ನಡ ಜಿಲ್ಲೆ ಬಂದ್ಗೆ ಕರೆ ನೀಡಲಾಗಿದ್ದು ಹೋಟೆಲ್, ಅಂಗಡಿ ಮುಂಗಟ್ಟುಗಳು ಬಂದ್ ಆಗಿರಲಿವೆ. ಅದೇ ರೀತಿ, ಖಾಸಗಿ ಬಸ್ ಸಂಚಾರ ಕೂಡ ಸ್ಥಗಿತಗೊಳ್ಳಲಿದೆ. ಅಲ್ಲದೆ, ಮಂಗಳೂರಿನಿಂದ ಬಂಟ್ವಾಳದ ಕಾರಿಂಜದ ಪುಳಿಮಜಲು (ಸುಹಾಸ್ ಶೆಟ್ಟಿ ನಿವಾಸ) ತನಕ ಜಾಥಾ ಮೂಲಕ ಮೃತದೇಹದ ಸಾಗಾಟಕ್ಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಬಿಎನ್ಎಸ್ ಕಲಂ 163 ಅಡಿಯಲ್ಲಿ ಮೇ 2 ರ ಮುಂಜಾನೆ 6 ಗಂಟೆಯಿಂದ ಮೇ 6 ರ ಮುಂಜಾನೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್‌ ಅಗರ್ವಾಲ್ ಆದೇಶದಲ್ಲಿ ತಿಳಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧ!

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಬಂದ್ ಆಗಿದೆ. ಬಸ್ ಓಡಿಸಿದರೆ ನಮಗೂ ತೊಂದರೆಯಾಗಬಹುದು. ಈಗಾಗಲೇ ಬಸ್ಗಳಿಗೆ ಕಲ್ಲು ತೂರಾಟ ಮಾಡಿದ್ದಾರೆ. ಇವತ್ತು ಇಡೀ ದಿನ ಬಸ್ ಬಂದ್ ಇರುತ್ತದೆ ಎಂದು ಖಾಸಗಿ ಬಸ್ ಚಾಲಕರು ತಿಳಿಸಿದ್ದಾರೆ. ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಸದ್ಯ ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಯುತ್ತಿದೆ. ಮತ್ತೊಂದೆಡೆ, ಅಂಗಡಿ ಮುಂಗಟ್ಟುಗಳು ಸಹ ಬಂದ್ ಆಗಿವೆ. ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.