Categories
ಶಿವಮೊಗ್ಗ

ಆಗುಂಬೆ: ದಿನದಿಂದ ದಿನಕ್ಕೆ ಬಿಸಿಲಿನ ಜೊತೆಗೆ ಅಧಿಕ ಉಷ್ಣಾಂಶ

– ಶಿವಮೊಗ್ಗದಲ್ಲಿ ಹೆಚ್ಚು ಉಷ್ಣಾಂಶ ದಾಖಲು..!
– ಸಹ್ಯಾದ್ರಿಯ ತಪ್ಪಲು ಈಗ ಕಾದ ಬಾಣಲೆಯಂತಾಗಿದೆ

NAMMUR EXPRESS NEWS
ಶಿವಮೊಗ್ಗ: ರಾಜ್ಯದಲ್ಲೇ ಅತಿಹೆಚ್ಚು ಮಳೆ ಸುರಿಯುತ್ತಿದ್ದುದರಿಂದ ಕರ್ನಾಟಕದ ಚಿರಾಪುಂಜಿ ಎಂದು ಹೆಸರಾಗಿದ್ದ ಆಗುಂಬೆಯಲ್ಲೇ ಅತಿ ಹೆಚ್ಚು ಬಿಸಿಲು ಕಂಡುಬರುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ದಕ್ಷಿಣ ಒಳನಾಡಿನ ಮಲೆನಾಡು ಒಳಗೊಂಡಂತೆ 13 ಜಿಲ್ಲೆಗಳ ಪೈಕಿ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ಗುರುವಾರ (ಮಾರ್ಚ್ 13) ಅತಿ ಹೆಚ್ಚು 36.2 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದು ಹವಾಮಾನ ವೈಪರೀತ್ಯದ ಪರಿಣಾಮವನ್ನು ತೋರಿಸುತ್ತಿದೆ.
ಈ ಪಟ್ಟಿಯಲ್ಲಿ ದಾವಣಗೆರೆ (36 ಡಿಗ್ರಿ ಸೆಲ್ಸಿಯಸ್) 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಶಿವಮೊಗ್ಗದಲ್ಲಿ 35.6 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ವಿಶೇಷವೆಂದರೆ ಬಯಲು ಸೀಮೆಯ ಚಿತ್ರದುರ್ಗ (35.1 ಡಿಗ್ರಿ) ಹಾಗೂ ಕೋಲಾರ ಜಿಲ್ಲೆಯ ಚಿಂತಾಮಣಿಗಿಂತ (33.1 ಡಿಗ್ರಿ) ಶಿವಮೊಗ್ಗದಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗಿದೆ! ಅಭಿವೃದ್ಧಿ’ಯಿಂದಾಗಿ ಹಸಿರುಡುಗೆ ಕಳೆದುಕೊಳ್ಳುತ್ತಿರುವ ಮಲೆನಾಡಿನಲ್ಲಿ ತಂಪನೆಯ ವಾತಾವರಣ ಕಾಣೆಯಾಗಿದೆ. ವೈಶಾಖದ ದಿನಗಳು ಪ್ರಖರವಾಗುತ್ತಿವೆ. ತುಂಗೆ-ಭದ್ರೆ, ಶರಾವತಿ, ಕುಮದ್ವತಿ ನದಿಗಳ ವೈಯಾರದಿಂದ ತಂಪಿನ ಒಸಗೆ ಆಗಿದ್ದ ಸಹ್ಯಾದ್ರಿಯ ತಪ್ಪಲು ಈಗ ಬಿಸಿ ಬಾಣಲೆಯಾಗಿ ಮಾರ್ಪಟ್ಟಿದೆ.

– ಕಳೆದ ವರ್ಷ 42 ಡಿಗ್ರಿ ಉಷ್ಣಾಂಶ ದಾಖಲು: 2019 ರಿಂದ ಈಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಬಿಸಿಲಿನ ಬೇಗೆ ತೀವ್ರಗೊಂಡಿದೆ. 2022ರ ಏಪ್ರಿಲ್ 15ರಂದು ಜಿಲ್ಲೆಯಲ್ಲಿ ಉಷ್ಣಾಂಶ 42 ಡಿಗ್ರಿ ತಲುಪಿತ್ತು. 2024ರ ಮಾರ್ಚ್ 28ರಂದು 41 ಡಿಗ್ರಿ, ಏಪ್ರಿಲ್ 8ರಂದು 42 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು ಎಂಬುದನ್ನು ಭಾರತೀಯ ಹವಾಮಾನ ಇಲಾಖೆಯ ಅಂಕಿ-ಅಂಶಗಳು ದೃಢೀಕರಿಸುತ್ತವೆ. ಬಯಲು ಸೀಮೆಗಿಂತ ಬಿಸಿಲು ಇಲ್ಲಿ ಹೆಚ್ಚಾಗಿದೆ. ಇದು ಮಲೆನಾಡಿನ ಜನರಿಗೆ ಎಚ್ಚರಿಕೆ ಗಂಟೆ. ಜಿಲ್ಲೆಯಲ್ಲಿ ಈಗ ನಿಜವಾದ ಕಾಡು ಉಳಿದಿಲ್ಲ. ಈಗ ನೀಲಗಿರಿ, ಅಕೇಶಿಯಾ, ರಬ್ಬರ್, ಅಡಿಕೆ ಮಾತ್ರ ಕಾಣಸಿಗುತ್ತಿದೆ’ ಎಂದು ಪರಿಸರ ಹೋರಾಟಗಾದ ಪ್ರೊ.ಬಿ.ಎಂ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸುತ್ತಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.