ಶೀಘ್ರದಲ್ಲೇ ಡಿಸಿಸಿ ಬ್ಯಾಂಕ್ 5 ನೂತನ ಶಾಖೆ!
– ಡಿಸಿಸಿ ಬ್ಯಾಂಕ್‌ಗೆ ಐತಿಹಾಸಿಕದಲ್ಲೇ ಅತಿ ಹೆಚ್ಚು ಲಾಭ
– ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌ಎಂ ಮಂಜುನಾಥಗೌಡ ಮಾಹಿತಿ
NAMMUR EXPRESS NEWS
ಶಿವಮೊಗ್ಗ : ಡಿಸಿಸಿ ಬ್ಯಾಂಕ್ ಐತಿಹಾಸಿಕ ಲಾಭ ಗಳಿಸಿದ್ದು, 2024-25ಕ್ಕೆ 18.24 ಕೋಟಿ ರೂ. ನಿವ್ವಳ ಲಾಭ ಬಂದಿದೆ.ಶೀಘ್ರದಲ್ಲೇ ಡಿಸಿಸಿ ಬ್ಯಾಂಕ್ 5 ನೂತನ ಶಾಖೆ ತೆರೆಯಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಇತಿಹಾಸದಲ್ಲಿಯೇ ಇದು ಅತ್ಯಂತ ಹೆಚ್ಚು ಲಾಭ ಗಳಿಸಿದ ವರ್ಷವಾಗಿದೆ. ಒಟ್ಟು 46 ಕೋಟಿ ರೂ. ಲಾಭ ಬಂದಿದೆ. ಅದರಲ್ಲಿ 18.24 ಕೋಟಿ ರೂ. ನಿವ್ವಳ ಲಾಭವಾಗಿದೆ. ಸುಮಾರು 3464.50 ಕೋಟಿ ರೂ. ವ್ಯವಹಾರ ವನ್ನು ಬ್ಯಾಂಕ್ ಮಾಡಿದೆ. 1690.17 ಕೋಟಿ ರೂ. ಠೇವಣಿ ಇದ್ದು 150.60 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. 75.95 ಕೋಟಿ ನಿಧಿಗಳಿದ್ದು 2582.86 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ಅಂಕಿ ಅಂಶ ನೀಡಿದ್ದಾರೆ.
ಶೀಘ್ರದಲ್ಲೇ ನೂತನ ಶಾಖೆಗಳ ಆರಂಭ: ಬ್ಯಾಂಕ್ ಈಗಾಗಲೇ ಜಿಲ್ಲೆಯಲ್ಲಿ ಹಲವು ನೂತನ ಶಾಖೆಗಳನ್ನು ತೆರೆಯುತ್ತಿದ್ದು, ಹೊಸದಾಗಿ ಗಾಜನೂರು, ಬಾರಂದೂರು, ತೀರ್ಥಹಳ್ಳಿ, ತ್ಯಾಗರ್ತಿ ಮತ್ತು ನಗರ ಗ್ರಾಮಗಳಲ್ಲಿ ಹೊಸ ಐದು ಶಾಖೆಗಳನ್ನು ತೆರೆಯಲಾಗುವುದು. ಇದರ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ 2025-26ನೇ ಸಾಲಿಗೆ 14 ಹೊಸ ಶಾಖೆಗಳನ್ನು ತೆರೆಯುವ ಉದ್ದೇಶವಿದೆ. ಆರ್.ಬಿ.ಐ. ಕೂಡ ಅನುಮತಿ ನೀಡಿದೆ. ಶೀಘ್ರದಲ್ಲೇ ಬ್ಯಾಂಕ್ ನೂತನ ಶಾಖೆಗಳ ಕಾರ್ಯ ಆರಂಭಿಸಲಾಗುವುದು ಎಂದಿದ್ದಾರೆ.
ಡಿಸಿಸಿ ಬ್ಯಾಂಕ್ ರೈತರ ಹಿತಕ್ಕಾಗಿಯೇ ಕೆಲಸ ಮಾಡುತ್ತಾ ಬಂದಿದ್ದು, ನಬಾರ್ಡ್ ಪುನರ್ ಧನ ಸೌಲಭ್ಯ ಕಡಿತದ ನಡುವೆಯೂ ಕೂಡ ಪ್ರಸ್ತುತ ಸಾಲಿನಲ್ಲಿ 1.08.500 ರೈತರಿಗೆ 1206.60 ಕೋಟಿ ರೂ ಕೃಷಿ ಬೆಳೆ ಸಾಲ ನೀಡಲಾಗಿದೆ. ಮಧ್ಯಮಾವಧಿ ಕೃಷಿ ಸಾಲವನ್ನು 532 ರೈತರಿಗೆ 80 ಕೋಟಿ ರೂ. ಸಾಲ ನೀಡಲಾಗಿದೆ. ಸಾಲದ ವಸೂಲಾತಿಯೂ ಕೂಡ ಶೇ. 99.60 ರಷ್ಟಿದೆ ಎಂದ ಅವರು, ಸ್ವ-ಸಹಾಯ ಸಂಘಗಳಿಗೂ ಕೂಡ ಸಾಲ ನೀಡಲಾಗಿದೆ. 8500 ಸ್ವಸಹಾಯ ಸಂಘಗಳ ಪೈಕಿ 3255 ಸಂಘಗಳಿಗೆ 140.82 ಕೋಟಿ ರೂ. ಸಾಲ ನೀಡಲಾಗಿದೆ. ಹಾಗೆಯೇ ಸುಮಾರು 15824 ವ್ಯಕ್ತಿಗಳಿಗೆ ಕೃಷಿಯೇತರ ಸಾಲವಾಗಿ 545.26 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.
ಸಕ್ಕರೆ ಕಾರ್ಖಾನೆಗೆ ಶೇ.13ರ ಬಡ್ಡಿ ದರದಲ್ಲಿ ಸಾಲ ಕೊಟ್ಟಿದ್ದರಿಂದ ಬ್ಯಾಂಕ್ ಗೆ ಹೆಚ್ಚು ಲಾಭವಾಗಿದೆ. ಹಾಗೆಯೇ ಸುರಕ್ಷಾ ಗೋದಾಮಿಗೆ ನೀಡಿದ ಸಾಲದ ಬಾಬು ಈಗಾಗಲೇ 36 ಕೋಟಿ ಹರಾಜಿನ ಮೂಲಕ ಬಂದಿದ್ದು, ಇನ್ನು 9 ಕೋಟಿ ರೂ. ಮಾತ್ರ ಬರಬೇಕಾಗಿದೆ. ಅದು ಕೂಡ ಈ ವರ್ಷವೇ ವಸೂಲಾಗಲಿದೆ.
ಕೃಷಿ ಹಾಗೂ ಕೃಷಿಯೇತರ ಸಾಲಗಳ ಭದ್ರತೆಗಾಗಿ ವಿಮಾ ಯೋಜನೆ ಜಾರಿಗೆ ತರಲಾಗಿದೆ. ಸಾಲ ಪಡೆದ ರೈತರು 700 ರೂ. ಕಂತನ್ನು ನೀಡಿ ವಿಮಾ ಸೌಲಭ್ಯಕ್ಕೆ ಒಳಪಡಬಹುದು. ಹಾಗೆಯೇ ವಿಶೇಷ ಠೇವಣಿ ಯೋಜನೆಯನ್ನು 2025ರ ಜೂನ್‌ವರೆಗೆ ಮುಂದುವರೆಸಿದ್ದು ಇದರ ಪ್ರಯೋಜನವನ್ನು ಕೂಡ ಗ್ರಾಹಕರು ಪಡೆಯಬಹುದಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಸುಮಾರು 13 ಲಕ್ಷ ರೈತರಿಗೆ 1300 ಕೋಟಿ ರೂ. ಸಾಲ ನೀಡುವ ಉದ್ದೇಶವಿದೆ. ಶೇ.3ರ ಬಡ್ಡಿದರದಲ್ಲಿ ಸಾವಿರ ರೈತರಿಗೆ 100 ಕೋಟಿ ರೂ. ಮಧ್ಯಮಾವಧಿ ಸಾಲ ಹಂಚಿಕೆ ಮಾಡಲಾಗುವುದು ಎರಡೂವರೆ ಸಾವಿರ ಸ್ವಸಹಾಯ ಸಂಘಗಳಿಗೆ 100 ಕೋಟಿ ರೂ. ಸಾಲ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 2 ಸಾವಿರ ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಹೊಂದಿದ್ದು, ಬ್ಯಾಂಕಿಗೆ 73 ವರ್ಷ ಆಗಿದ್ದು, 75ನೇ ಅಮೃತ ವರ್ಷದ ಮಹೋತ್ಸವದ ಹೊತ್ತಿಗೆ ಸುಮಾರು 60 ಕೋಟಿ ಲಾಭಗಳಿಸುವತ್ತ ಬ್ಯಾಂಕ್ ಸಾಗುತ್ತಿದೆ ಎಂದರು.
ಹಾಲಿನ ದರ ಏರಿಕೆ ಬಗ್ಗೆ ಮಾತನಾಡಿದ ಅವರು, ಕಾಲ ಕಾಲಕ್ಕೆ ತಕ್ಕಂತೆ ಹಾಲಿನ ದರ ಏರುವುದು ಸಹಜ ಪ್ರಕ್ರಿಯೆಯಾಗಿದೆ. ಇದನ್ನು ಬಿಜೆಪಿಯವರು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ. ಒಂದು ಲೀಟರ್ ನೀರಿಗೆ 50 ರೂ. ಕೊಡುವ ಈ ಹೊತ್ತಿನಲ್ಲಿ ಒಂದು ಲೀಟರ್ ಹಾಲಿಗೆ ಇಷ್ಟು ದರ ಕೊಡಬಾರದೇ? ಅದು ಹೇಗೆ ಹೆಚ್ಚಳವಾಗುತ್ತದೆ. ಎಲ್ಲವೂ ರೈತರ ಹಿತಕ್ಕಾಗಿಯೇ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ ನಿರ್ದೇಶಕರಾದ ದುಗ್ಗಪ್ಪಗೌಡ, ದಶರಥಗಿರಿ, ಸುಧೀರ್, ಪರಮೇಶ್, ಹನುಮಂತ, ಶಿವಶಂಕರ್, ಬಸವರಾಜ್, ರುದ್ರೇಗೌಡ, ಚಂದ್ರೇಡ, ಸಿಇಒ ಅನ್ನಪೂರ್ಣ ಇದ್ದರು.
