ಕ್ರಿಕೆಟ್ ಅಲ್ಲೂ ಅಮೇರಿಕಾ ಕಿಂಗ್: ಪಾಕ್ ಔಟ್!
– ಪಾಕಿಸ್ತಾನ ಕೊನೆಯ ಲೀಗ್ ಪಂದ್ಯ ಆಡುವ ಮುನ್ನವೇ ಹೊರಕ್ಕೆ
– ಟಿ20 ವಿಶ್ವಕಪ್ ಸೂಪರ್-8 ಹಂತ ಪ್ರವೇಶಿಸಿ ಇತಿಹಾಸ ಬರೆದ ಅಮೇರಿಕಾ
NAMMUR EXPRESS SPORTS
ಅಮೇರಿಕಾ: ಕ್ರಿಕೆಟ್ ಅಲ್ಲೂ ಅಮೇರಿಕಾ ಕಿಂಗ್ ಆಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಪಾಕಿಸ್ತಾನ ಕೊನೆಯ ಲೀಗ್ ಪಂದ್ಯ ಆಡುವ ಮುನ್ನವೇ ಹೊರಕ್ಕೆ ಬಿದ್ದಿದೆ. ಟಿ20 ವಿಶ್ವಕಪ್ ಸೂಪರ್-8 ಹಂತ ಪ್ರವೇಶಿಸಿ ಇತಿಹಾಸ ಬರೆದ ಅಮೇರಿಕಾ ತಂಡ ಈಗ ಎಲ್ಲರ ಹುಬ್ಬೆರಿಸುವಂತೆ ಮಾಡಿದೆ.
ಆತಿಥೇಯ ಅಮೆರಿಕ ಹಾಗೂ ಐರ್ಲೆಂಡ್ ನಡುವಿನ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯ ಮಳೆ ಮತ್ತು ಒದ್ದೆ ಅಂಗಣದಿಂದಾಗಿ ಟಾಸ್ ಕಾಣದೆ ರದ್ದುಗೊಂಡಿದೆ. ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡವು. ಇದರೊಂದಿಗೆ ಅಮೆರಿಕ ಎ ಗುಂಪಿನಿಂದ 2ನೇ ತಂಡವಾಗಿ ಸೂಪರ್-8 ಹಂತಕ್ಕೆ ಅರ್ಹತೆ ಪಡೆದಿದೆ.
ಹಾಲಿ ರನ್ನರ್ಅಪ್ ಪಾಕಿಸ್ತಾನ ತನ್ನ ಕೊನೆಯ ಲೀಗ್ ಪಂದ್ಯ ಆಡುವ ಮುನ್ನವೇ ಹೊರಬಿದ್ದಿದೆ. ಪಾಕಿಸ್ತಾನ (2) ತನ್ನ ಅಂತಿಮ ಪಂದ್ಯದಲ್ಲಿ ಭಾನುವಾರ ಐರ್ಲೆಂಡ್ ಎದುರು ಗೆಲುವು ದಾಖಲಿಸಿದರೂ ಗರಿಷ್ಠ 4 ಅಂಕ ಮಾತ್ರ ಸಂಪಾದಿಸಲಿದೆ. ಅಮೆರಿಕ ತಾನಾಡುತ್ತಿರುವ ಚೊಚ್ಚಲ ಟಿ20 ವಿಶ್ವಕಪ್ನಲ್ಲೇ ಸೂಪರ್-8 ಹಂತ ಪ್ರವೇಶಿಸಿ ಇತಿಹಾಸ ಬರೆದಿದೆ.
ಗುರುವಾರ ಹಾಗೂ ಶುಕ್ರವಾರ ಪಂದ್ಯಕ್ಕೂ ಮುನ್ನ ಸುರಿದ ಮಳೆಯಿಂದಾಗಿ ಸೆಂಟ್ರಲ್ ಬ್ರೋ ವರ್ಡ್ ಅಂಗಣದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿತ್ತು. ಪಂದ್ಯ ಆರಂಭಿಕ ಸಮಯಕ್ಕೂ ಮುನ್ನ ಮಳೆ ಬಿಡುವು ನೀಡಿತು. ಆದರೆ ಮಳೆಯಿಂದ ಅಂಗಣ ಒದ್ದೆಯಾಗಿದ್ದರಿಂದ ಟಾಸ್ ಪ್ರಕ್ರಿಯೆ ವಿಳಂಬಗೊಂಡಿತು. ರಾತ್ರಿ 8 ಗಂಟೆ ಹಾಗೂ 9 ಗಂಟೆಗೆ ಎರಡು ಬಾರಿ ಅಂಗಣವನ್ನು ಪರೀಸಿದ ಅಂಪೈರ್ಗಳು ಔಟ್ ಫೀಲ್ಡ್ ಹೆಚ್ಚಿನ ತೇವಾಂಶದಿಂದ ಕೂಡಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಮೈದಾನದಲ್ಲಿದ್ದ ನೀರು ಹೊರ ಹಾಕಲು ಸಿಬ್ಬಂದಿ ಹರಸಾಹಸಪಟ್ಟರು.