Categories
ಕ್ರಿಕೆಟ್ ಕ್ರೀಡಾ ಸುದ್ದಿ

ಜಯದ ಯಾತ್ರೆಯಲ್ಲಿ ಮುಂಬೈಗೆ 5 ನೇ ಜಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ – 2025
* ಜಯದ ಯಾತ್ರೆಯಲ್ಲಿ ಮುಂಬೈಗೆ 5 ನೇ ಜಯ
* ಸೇಡಿನ ಚಾಲೆಂಜ್‌ನಲ್ಲಿ ರಾಯಲ್ ಜಯಗಳಿಸಿದ ಬೆಂಗಳೂರು

NAMMMUR EXPRESS SPORTS NEWS
* ಜಯದ ಯಾತ್ರೆಯಲ್ಲಿ ಮುಂಬೈಗೆ 5 ನೇ ಜಯ
ಮುಂಬೈ : ವೇಗಿ ಜಸ್‌ಪ್ರಿತ್‌ ಬುಮ್ರಾ ಅವರ ಮಾರಕ ದಾಳಿಗೆ ನಲುಗಿದ ಲಖನೌ ಸೂಪರ್‌ ಜೈಂಟ್ಸ್‌ ತಂಡ, ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ 54 ರನ್‌ಗಳ ಅಂತರದಿಂದ ಸೋಲು ಕಂಡಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಮುಂಬೈ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 215 ರನ್‌ ಗಳಿಸಿ ಎದುರಾಳಿ ತಂಡಕ್ಕೆ 216 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತುವಲ್ಲಿ ವಿಫಲವಾದ ಲಖನೌ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 161 ರನ್‌ ಗಳಿಸಿ 54 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಅತಿಥೇಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಬೃಹತ್‌ ಮೊತ್ತ ಪೇರಿಸಲು ರಿಕೆಲ್ಟನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಸಹಕರಿಸಿದರು.
ರಿಕೆಲ್ಟನ್‌ 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ ಸಹಿತ 58 ರನ್‌ ಬಾರಿಸಿದರೇ, ಸೂರ್ಯಕುಮಾರ್‌ ಯಾದವ್‌ 28 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ ಸಹಿತ 54 ರನ್‌ ಚಚ್ಚಿದರು.
ಉಳಿದಂತೆ ರೋಹಿತ್‌ ಶರ್ಮಾ 12(5), ವಿಲ್‌ ಜಾಕ್‌ 29(21), ತಿಲಕ್‌ ವರ್ಮಾ 6(5), ನಾಯಕ ಹಾರ್ದಿಕ್‌ ಪಾಂಡ್ಯ 5(7), ಕಾರ್ಬಿನ್‌ 20(10) ರನ್‌ ಗಳಿಸಿದರೇ, ನಮನ್‌ ಧಿರ್‌ ಔಟಾಗದೇ 25(11) ಹಾಗೂ ದೀಪಕ್‌ ಚಾಹರ್‌ ಒಂದು ರನ್‌ ಗಳಿಸಿ ಸ್ಕ್ರೀಜ್‌ನಲ್ಲಿಯೇ ಉಳಿದರು.
ಲಖನೌ ಪರ ಮಯಾಂಕ್‌ ಯಾದವ್‌ ಹಾಗೂ ಆವೇಶ್‌ ಖಾನ್‌ ತಲಾ ಎರಡು ವಿಕೆಟ್‌, ಪ್ರಿನ್ಸ್‌ ಯಾದವ್‌, ಬಿಷ್ಣೋಯ್‌ ಹಾಗೂ ದಿಗ್ವೇಶ್‌ ತಲಾ ಒಂದೊಂದು ವಿಕೆಟ್‌ ಪಡೆದರು.
ಮುಂಬೈ ನೀಡಿದ ಬೃಹತ್‌ ಮೊತ್ತದ ಟಾರ್ಗೆಟ್‌ ಬೆನ್ನತ್ತಿದ ಲಖನೌಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಐಡೆನ್‌ ಮಾರ್ಕ್ರಂ 9(11) ವಿಕೆಟ್‌ ಬೇಗನೇ ಕಳೆದುಕೊಂಡಿತು. ಅಬ್ಬರದ ಬ್ಯಾಟಿಂಗ್‌ ಮಾಡುತ್ತಿದ ಮಿಚೆಲ್‌ ಮಾರ್ಷ್‌ 34(24), ನಿಕೋಲಸ್‌ ಪೂರನ್‌ 27(15) ರನ್‌ ಕಲೆಹಾಕಿದರು.
ಬಳಿಕ ಬಂದ ನಾಯಕ ರಿಷಬ್‌ ಪಂತ್‌ ಕೇವಲ ನಾಲ್ಕು ರನ್‌ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಒಂದಾದ ಆಯೋಷ್‌ ಬದೋನಿ 35(22) ಹಾಗೂ ಡೇವಿಡ್‌ ಮಿಲ್ಲರ್‌ 24(16) ಕೊಂಚ ಅಬ್ಬರಿಸಿ ಮರೆಯಾದರು. ಈ ಜೋಡಿಯ ವಿಕೆಟ್‌ ಪತನದೊಂದಿಗೆ ಲಖನೌಗೆ ಸೋಲು ಕಂಡಿತು.
ಉಳಿದಂತೆ ಅಬ್ದುಲ್ ಸಮದ್‌ 2(4), ಬಿಷ್ಟೋಯ್‌ 13(14), ಆವೇಶ್‌ ಖಾನ್‌ ಡಕ್‌ ಔಟ್‌ ಆದರೇ, ಪ್ರಿನ್ಸ್‌ ಯಾದವ್‌ ನಾಲ್ಕು, ದಿಗ್ವೇಶ್‌ ಒಂದು ರನ್‌ ಗಳಿಸಿ ಔಟಾಗದೇ ಉಳಿದರು.
ಮುಂಬೈ ಪರ ಬುಮ್ರಾ ಪ್ರಮುಖ ನಾಲ್ಕು ವಿಕೆಟ್, ಟ್ರೆಂಟ್‌ ಬೌಲ್ಟ್‌ ಮೂರು ವಿಕೆಟ್‌, ವಿಲ್‌ ಜಾಕ್‌ ಎರಡು ವಿಕೆಟ್‌ ಪಡೆದು ಗಮನಸೆಳೆದರು.

* ಸೇಡಿನ ಚಾಲೆಂಜ್‌ನಲ್ಲಿ ರಾಯಲ್ ಜಯಗಳಿಸಿದ ಬೆಂಗಳೂರು
ಡೆಲ್ಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತವರನಲ್ಲಿ ಡೆಲ್ಲಿ ವಿರುದ್ಧದ ಸೋಲಿಗೆ ಸೇಡನ್ನು ತೀರಿಸಿಕೊಂಡಿದೆ. ಕಳೆದ ಬಾರಿ ತವರು ನೆಲದಲ್ಲಿ ಸೋತಿದ್ದ ಬೆಂಗಳೂರು ತಂಡ, ಈ ಬಾರಿ ಎದುರಾಳಿಯ ನೆಲದಲ್ಲಿ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು ದೆಹಲಿ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ್ದ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ಪವರ್​ ಪ್ಲೇನಲ್ಲೇ 26 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್​ ಜೇಕಬ್​ ಬೆಥೆಲ್​ (12 ರನ್​) ನಿರ್ಗಮಿಸಿದ ಬೆನ್ನಲ್ಲೆ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬ್ಯಾಟಿಂಗ್​​ಗೆ ಬಂದ ಪಡಿಕ್ಕಲ್​ ಶೂನ್ಯಕ್ಕೆ ಪೆವಿಲಿಯನ್​ ಸೇರಿದರೆ, ರಜತ್​ ಪಾಟಿದಾರ್​ (6 ರನ್)​ ನಿರಾಸೆ ಮೂಡಿಸಿದರು. ಇದರಿಂದ ತಂಡದ ಮೇಲೆ ಒತ್ತಡ ಹೆಚ್ಚಿತು.ಆದರೆ ಈ ವೇಳೆ ಬ್ಯಾಟಿಂಗ್​ಗೆ ಆಗಮಿಸಿದ ಕೃನಾಲ್​ ಪಾಂಡ್ಯ ತಮ್ಮ ಅಮೋಘ ಬ್ಯಾಟಿಂಗ್​ ಪ್ರದರ್ಶನ ದಿಂದ ವಿರಾಟ್​ ಕೊಹ್ಲಿ ಜೊತೆಗೂಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ಇಬ್ಬರು 84 ಎಸೆತಗಳಲ್ಲಿ 119ರನ್​ ಬಾರಿಸಿದರು. ಕೊಹ್ಲಿ 47 ಎಸೆತಗಳಲ್ಲಿ 51 ರನ್​ ಬಾರಿಸಿ ನಿರ್ಗಮಿಸಿದರೇ, ಕೃನಾಲ್​ ಪಾಂಡ್ಯ 47 ಎಸೆತಗಳಲ್ಲಿ ಅಜೇಯವಾಗಿ 5 ಬೌಂಡರಿ ಮತ್ತು 4 ಸಿಕ್ಸರ್​ ಸಹಾಯದಿಂದ ಅಜೇಯವಾಗಿ 73ರನ್​ ಬಾರಿಸಿದರು. ಕೊಹ್ಲಿ ಬಿಳಿಕ ಬ್ಯಾಟಿಂಗ್​ಗೆ ಬಂದ ಟಿಮ್​ ಡೇವಿಡ್​ ಕೂಡ5 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್​ ಸಿಡಿಸಿದ ಅಜೇಯವಾಗಿ 19 ರನ್​ ಕಲೆಹಾಕಿದರು. ಇದರಿಂದಾಗಿ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಬೆಂಗಳೂರು ಪಡೆ ಗೆಲುವಿನ ನಗೆ ಬೀರಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ದೆಹಲಿ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಕೆ.ಎಲ್. ರಾಹುಲ್ (41 ರನ್​) ಮತ್ತು ಟ್ರಿಸ್ಟಾನ್ ಸ್ಟಬ್ಸ್ (38 ರನ್​) ಹೊರತು ಪಡಿಸಿ ಉಳಿದ ಆಟಗಾರರು ಆರ್​ಸಿಬಿಯ ಮಾರಕ ಬೌಲಿಂಗ್​ ದಾಳಿಗೆ ಸಿಲುಕಿ ಬಹುಬೇಗ ಕ್ರೀಸ್​ ತೊರೆದರು. ಬೆಂಗಳೂರು ಪರ ಭುವನೇಶ್ವರ್ 3 ವಿಕೆಟ್ ಪಡೆದರೇ, ಹೆಜೆಲ್​ವುಡ್​ 2, ಯಶ್​ ದಯಾಲ್​, ಸುಯೇಶ್​ ಶರ್ಮಾ, ಕೃನಾಲ್​ ಪಾಂಡ್ಯ ತಲಾ ಒಂದು ವಿಕೆಟ್​ ಉರುಳಿಸಿದರು. ಈ ಗೆಲುವಿನೊಂದಿಗೆ ಬೆಂಗಳೂರು ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.