ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ – 2025
* ಇಂದು ಆರ್ಸಿಬಿ ಹಾಗೂ ಪಂಜಾಬ್ ನಡುವೆ ಕ್ವಾಲಿಫಯರ್-1 ಪಂದ್ಯ
* ಗೆದ್ದವರು ಫೈನಲ್ ಪ್ರವೇಶ,ಸೋತವರಿಗೆ ಇನ್ನೊಂದು ಅವಕಾಶ
* ಹೇಗಿದೆ ತಂಡಗಳ ಬಲಾಬಲ,ಪಿಚ್,ಆಟಗಾರರು ಇಲ್ಲಿದೆ ಮಾಹಿತಿ
NAMMMUR EXPRESS SPORTS NEWS
ಚಂಡೀಗಢ:ಇಂದು ಐಪಿಎಲ್ -18 ನೇ ಆವೃತ್ತಿಯ ಮೊದಲ ಕ್ವಾಲಿಫೈರ್ ಪಂದ್ಯ ನಡೆಯಲಿದೆ. ಇದರಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿರುವ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಐಪಿಎಲ್ 2025ರ ಋತುವಿನಲ್ಲಿ ಈ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು ಕಪ್ ಗೆಲ್ಲುವ ಫೆವರೀಟ್ ತಂಡಗಳಾಗಿವೆ.
ಆರ್ಸಿಬಿ ಇದುವರೆಗೂ 14 ಪಂದ್ಯಗಳನ್ನು ಆಡಿದ್ದು ಇದರಲ್ಲಿ 9ರಲ್ಲಿ ಗೆಲುವು ಸಾಧಿಸಿದ್ದು 4ರಲ್ಲಿ ಸೋಲನ್ನು ಕಂಡಿದೆ. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಸದ್ಯ ಆರ್ಸಿಬಿ 19 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಂಜಾಬ್ ತಂಡ 14 ಪಂದ್ಯಗಳಲ್ಲಿ 9ರಲ್ಲಿ ಗೆದ್ದು 4ರಲ್ಲಿ ಸೋಲನ್ನು ಕಂಡು 9ರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಇದರೊಂದಿಗೆ 19 ಅಂಕಗಳನ್ನು ಪಡೆದುಕೊಂಡಿದೆ. ನೆಟ್ ರನ್ರೇಟ್ ಹೆಚ್ಚಿರುವ ಕಾರಣ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂದು ಗೆಲ್ಲುವ ತಂಡವು ನೇರ ಫೈನಲ್ಗೆ ಪ್ರವೇಶ ಪಡೆಯಲಿದ್ದು,ಸೋತ ತಂಡಕ್ಕೆ ಇನ್ನೊಂದು ಅವಕಾಶ ಇರಲಿದೆ.
* ಆರ್ಸಿಬಿ ಮತ್ತು ಪಂಜಾಬ್ ಹೆಡ್ ಟು ಹೆಡ್
ಈ ಆವೃತ್ತಿಯಲ್ಲಿ ಈ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಪಂಜಾಬ್ ಮತ್ತು ಬೆಂಗಳೂರು ತಂಡಗಳು ತಲಾ ಒಂದು ಬಾರಿ ಗೆಲುವು ಸಾಧಿಸಿದೆ. ಈ ಹಿಂದೆ ಇದೇ ಮೈದಾನದಲ್ಲಿ ಪಂಜಾಬ್ ತಂಡವನ್ನು ಮಣಿಸಿದ್ದು ಆರ್ಸಿಬಿಗೆ ಪ್ಲಸ್ ಪಾಯಿಂಟ್ ಆಗಿದೆ. ಇದುವರೆಗೂ ಐಪಿಎಲ್ನಲ್ಲಿ ಈ ಎರಡು ತಂಡಗಳು 35 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಪಂಜಾಬ್ ಒಂದು ಹೆಜ್ಜೆ ಮುಂದಿದೆ. ಆರ್ಸಿಬಿ ವಿರುದ್ಧ 18 ಬಾರಿ ಗೆಲುವು ಸಾಧಿಸಿದ್ದು 17 ಸಲ ಸೋಲನ್ನು ಕಂಡಿದೆ. ಹಿಂದಿನ ಐದು ಪಂದ್ಯಗಳಲ್ಲಿ ಬೆಂಗಳೂರು ತಂಡ 3 ಬಾರಿ ಗೆಲುವು ಸಾಧಿಸಿದೆ.
* ಆರ್ಸಿಬಿಯಿಂದ ಸ್ಟಾರ್ ಪ್ಲೇಯರ್ ಔಟ್
ಇಂದಿನ ಪಂದ್ಯದಲ್ಲಿ ಆರ್ಸಿಬಿ ತಂಡದಿಂದ ಒಬ್ಬ ಆಟಗಾರ ಹೊರಗುಳಿಯಲಿದ್ದಾರೆ. ಹೌದು ಹಿಂದಿನ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಆಲ್ರೌಂಡರ್ ಲಿವಿಂಗ್ಸ್ಟೋನ್ ಅವರನ್ನು ಇಂದು ತಂಡದಿಂದ ಹೊರಗಿಡಲಾಗುತ್ತಿದೆ. ಈ ಆವೃತ್ತಿಯಲ್ಲಿ ಲಿವಿಂಗ್ಸ್ಟೋನ್ ಕೇವಲ ಒಂದು ಅರ್ಧಶತಕ ಗಳಿಸಿದ್ದು ಬಿಟ್ಟರೇ ಉಳಿದ ಪಂದ್ಯಗಳಲ್ಲಿ ಅತೀ ಕಳಪೆ ಪ್ರದರ್ಶನ ತೋರಿದ್ದಾರೆ. ಇದೀಗ ಈ ಪ್ಲೇಯರ್ ಸ್ಥಾನಕ್ಕೆ ಟಿಮ್ ಡೇವಿಡ್ ವಾಪಸ್ಸಾಗಲಿದ್ದಾರೆ. ತಂಡದಲ್ಲಿ ಕೆಲ ಬದಲಾವಣೆಗಳಾಗೋ ನಿರೀಕ್ಷೆಯಿದೆ.
* ಆರ್ಸಿಬಿ ಫ್ಯಾನ್ಸ್ಗೆ ಗುಡ್ನ್ಯೂಸ್ !!
ಹೌದು, ಲಕ್ನೋ ವಿರುದ್ಧ ನಡೆದಿದ್ದ ಪಂದ್ಯದಿಂದ ಸ್ಫೋಟಕ ಹಿಟ್ಟರ್ ಟಿಮ್ ಡೇವಿಡ್ ಹೊರಗುಳಿದಿದ್ದರು. ಕಳೆದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಡೇವಿಡ್ ಇಂದು ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಲಕ್ನೋ ವಿರುದ್ಧದ ಪಂದ್ಯದಲ್ಲಿ ಡೇವಿಡ್ ಬದಲಿಗೆ ಲಿವಿಂಗ್ಸ್ಟೋನ್ ಕಣಕ್ಕಿಳಿದಿದ್ದರು. ಆದರೆ, ಶೂನ್ಯಕ್ಕೆ ಪೆವಿಲಿಯನ್ ಸೇರಿದ್ದರು. ಇದೀಗ ಮುಂದಿನ ಪಂದ್ಯಕ್ಕೆ ಡೇವಿಡ್ ಲಭ್ಯರಿರುತ್ತಾರೆ ಎಂದು ವರದಿಯಾಗಿದೆ. ಡೇವಿಡ್ ಫಿಟ್ ಆಗಿದ್ದು ಈ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಆವೃತ್ತಿಯಲ್ಲಿ ಟಿಮ್ ಡೇವಿಡ್ ಆರ್ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ವರೆಗೂ ಆಡಿರುವ 12 ಪಂದ್ಯಗಳಲ್ಲಿ 185.15 ಸ್ಟ್ರೈಕ್ ರೇಟ್ನೊಂದಿಗೆ 185 ರನ್ ಬಾರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದಿದ್ದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 22 ಎಸೆತಗಳಲ್ಲಿ 50 ರನ್ ಬಾರಿಸಿದ್ದು, ಈ ಆವೃತ್ತಿಯ ಬೆಸ್ಟ್ ಇನ್ನಿಂಗ್ಸ್ ಆಗಿದೆ. ಒಟ್ಟಾರೆ ಟಿ-20 ಸ್ವರೂಪದಲ್ಲಿ ಡೆವಿಡ್ ಐದು ಸಾವಿರಕ್ಕೂ ಹೆಚ್ಚಿನ ರನ್ ಗಳಿಸಿದ್ದು 332 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಇಂದಿನ ಪಂದ್ಯ ಮುಲ್ಲಾನ್ಪುರದ ಮಹಾರಾಜ ಯಧವೀಂದ್ರ ಸಿಂಗ್ ಮೈದಾನದಲ್ಲಿ ನಡೆಯಲಿದೆ.








