Categories
ಕ್ರಿಕೆಟ್ ಕ್ರೀಡಾ ಸುದ್ದಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ -2025

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ -2025
* ಬೆಂಗಳೂರು ಕಾಲ್ತುಳಿತ ಪ್ರಕರಣ, ಆರ್‌ಸಿಬಿ ಸಿಬ್ಬಂದಿಗಳಿಗೆ ಜಾಮೀನು

NAMMMUR EXPRESS SPORTS NEWS
* ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ -2025
ಕ್ರಿಕೆಟ್ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 212 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡ ಹೀನಾಯ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಮಾರಕ ದಾಳಿಗೆ ಬೆದರಿದ ಆಫ್ರಿಕಾ ತಂಡ ಕೇವಲ 138 ರನ್‌ಗಳಿಗೆ ಆಲೌಟ್ ಆಗಿದೆ. ಹೀಗಾಗಿ ಕಾಂಗರೂ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 74 ರನ್‌ಗಳ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ಪರ ಕಮ್ಮಿನ್ಸ್ ಆರು ವಿಕೆಟ್‌ಗಳನ್ನು ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ ಎರಡು ಮತ್ತು ಜೋಶ್ ಹೇಜಲ್‌ವುಡ್ ಒಂದು ವಿಕೆಟ್ ಪಡೆದರು. ಇತ್ತ ಆಫ್ರಿಕಾ ಪರ ನಾಲ್ವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು.
ದಕ್ಷಿಣ ಆಫ್ರಿಕಾ ಪರ ಡೇವಿಡ್ ಬೆಡಿಂಗ್‌ಹ್ಯಾಮ್ ಅತ್ಯಧಿಕ 45 ರನ್ ಗಳಿಸಿದರೆ, ನಾಯಕ ಟೆಂಬಾ ಬವುಮಾ 36 ರನ್ ಗಳಿಸಿ ಔಟಾದರು. ರಯಾನ್ ರಿಕಲ್ಟನ್ 16 ಮತ್ತು ಕೈಲ್ ವೆರ್ರೆಯ್ನ್ 13 ರನ್‌ಗಳ ಕೊಡುಗೆ ನೀಡಿದರು. ಮೊದಲ ದಿನದಾಟದಂತ್ಯಕ್ಕೆ 43 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾದ ಇನ್ನಿಂಗ್ಸ್ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ನಾಯಕ ಬವುಮಾ ಮತ್ತು ಬೆಡಿಂಗ್ಹ್ಯಾಮ್ ಐದನೇ ವಿಕೆಟ್‌ಗೆ 64 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದರೆ ಈ ಪಾಲುದಾರಿಕೆ ಮುರಿದ ತಕ್ಷಣ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಕುಸಿಯಿತು. ದಕ್ಷಿಣ ಆಫ್ರಿಕಾ ಪರ, ವಿಯಾನ್ ಮುಲ್ಡರ್ ಆರು, ಟ್ರಿಸ್ಟಾನ್ ಸ್ಟಬ್ಸ್ ಎರಡು, ಕೇಶವ್ ಮಹಾರಾಜ್ ಏಳು ಮತ್ತು ಕಗಿಸೊ ರಬಾಡ ಒಂದು ರನ್ ಗಳಿಸಿದರೆ ಐಡೆನ್ ಮಾರ್ಕ್ರಾಮ್ ಮತ್ತು ಮಾರ್ಕೊ ಯಾನ್ಸೆನ್​ಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ.

* ಕಮ್ಮಿನ್ಸ್ ದಾಖಲೆ
ಇತ್ತ ಆಸ್ಟ್ರೇಲಿಯಾ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ನಾಯಕ ಪ್ಯಾಟ್ ಕಮ್ಮಿನ್ಸ್ 6 ವಿಕೆಟ್‌ ಉರುಳಿಸಿದರು. ಈ ಮೂಲಕ ಕಮ್ಮಿನ್ಸ್ ಈ ಆವೃತ್ತಿಯಲ್ಲಿ ಆರನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಅಷ್ಟೇ ಅಲ್ಲ, ಕಮ್ಮಿನ್ಸ್ ಪ್ರಸ್ತುತ ಡಬ್ಲ್ಯೂಟಿಸಿ ಸೈಕಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ. ಅವರು 2023-25ರ ಆವೃತ್ತಿಯಲ್ಲಿ ಇದುವರೆಗೆ 79 ವಿಕೆಟ್‌ಗಳನ್ನು ಕಬಳಿಸಿದ್ದು ಈ ಮೂಲಕ ಭಾರತದ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿದ್ದಾರೆ.

* ಬೆಂಗಳೂರು ಕಾಲ್ತುಳಿತ ಪ್ರಕರಣ, ಆರ್‌ಸಿಬಿ ಸಿಬ್ಬಂದಿಗಳಿಗೆ ಜಾಮೀನು
ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್‌ ಕುಮಾರ್, ಶಮಂತ್ ಮಾವಿನಕೆರೆಗೆ ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಆರೋಪಿಗಳು ಪಾಸ್ ಪೋರ್ಟ್ ವಶಕ್ಕೆ ನೀಡುವಂತೆ ನ್ಯಾ.ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ಷರತ್ತು ಬದ್ಧ, ಮಧ್ಯಂತರ ಜಾಮೀನು ನೀಡಿದೆ.
ಪ್ರಕರಣದಲ್ಲಿ ತಮ್ಮನ್ನು ಬಂಧಿಸಿದ ಪೊಲೀಸರ ಕ್ರಮ ಕಾನೂನು ಬಾಹಿರವಾಗಿದ್ದು, ಕೂಡಲೆ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ನಾಲ್ವರು ಆರ್​ಸಿಬಿ ಸಿಬ್ಬಂದಿ ಅರ್ಜಿ ಸಲ್ಲಿಸಿದ್ದರು. ಆರ್​ಸಿಬಿ ಮಾರ್ಕೆಟಿಂಗ್​ ಹೆಡ್ ನಿಖಿಲ್​ ಸೋಸಲೆ, ಡಿಎನ್​ಎ ಎಂಟರ್​ಟೈನ್​ಮೆಂಟ್​ ನೆಟ್​ವರ್ಕ್​​ನ ನಿರ್ದೇಶಕ ಸುನೀಲ್​ ಮ್ಯಾಥ್ಯೂ, ಡಿಎನ್​ಎ ಮ್ಯಾನೇಜರ್​ ಕಿರಣ್​ ಕುಮಾರ್ ಮತ್ತು ಸಮಂತ್​ ಮಾವಿನಕೆರೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಮಧ್ಯಂತರ ಮನವಿ ಕುರಿತ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್​.ಆರ್​ ಕೃಷ್ಣ ಕುಮಾರ್ ಅವರ ಪೀಠ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.