Categories
ರಾಜ್ಯ

ಡೀಸೆಲ್, ಪೆಟ್ರೋಲ್ ದುಬಾರಿ..?!

ಡೀಸೆಲ್, ಪೆಟ್ರೋಲ್ ದುಬಾರಿ..?!
– ಅಮೇರಿಕಕಾ – ಇರಾನ್ ಯುದ್ಧ: ಹೋರ್ಮಝ್ ಜಲಸಂಧಿಗೆ ಇರಾನ್ ನಿರ್ಬಂಧ
* ಭಾರತಕ್ಕೆ ತೈಲ ಖರೀದಸಲು ತೊಡಕಾಗುತ್ತಾ? ಹೆಚ್ಚಾಗುತ್ತಾ ತೈಲ ಬೆಲೆ

NAMMMUR EXPRESS NEWS
ನವದೆಹಲಿ: ಅಮೇರಿಕಾ ಇರಾನ್ ಯುದ್ಧದ ಕಾರ್ಮೋಡ ಇದೀಗ ಭಾರತಕ್ಕೆ ದೊಡ್ಡ ಪೆಟ್ಟು ನೀಡಲಿದೆ ಎನ್ನಲಾಗಿದೆ.
ಪರ್ಷಿಯನ್ ಕೊಲ್ಲಿಯನ್ನು ಅರಬ್ಬಿ ಸಮುದ್ರದೊಂದಿಗೆ ಜೋಡಿಸುವ ಅಗಲ ಕಿರಿದಾದ ಹೋರ್ಮಝ್ ಜಲಸಂಧಿಯಲ್ಲಿ ನೌಕೆಗಳ ಸಂಚಾರವನ್ನು ಇರಾನ್ ನಿರ್ಬಂಧ ಮಾಡಿದಲ್ಲಿ ಅಥವಾ ಈ ಜಲಸಂಧಿಯಲ್ಲಿ ಸಂಚಾರ ಯಾವುದೇ ರೀತಿಯಲ್ಲಿ ಅಸ್ತವ್ಯಸ್ತಗೊಂಡರೂ ಭಾರತದ ಇಂಧನ ಭದ್ರತೆಗೆ ತೊಡಕಾಗಲಿದೆ ಮಾತ್ರವಲ್ಲ ಜಾಗತಿಕವಾಗಿ ಮತ್ತು ಪ್ರಾದೇಶಿಕವಾಗಿ ತೀವ್ರ ಪರಿಣಾಮವಾಗಲಿದೆ ಎಂದು ವ್ಯೂಹಾತ್ಮಕ ವ್ಯವಹಾರಗಳ ತಜ್ಞರು ಎಚ್ಚರಿಸಿದ್ದಾರೆ. ಇಲ್ಲಿಂದಲೇ ಎಲ್ಲಾ ತೈಲ ಟ್ಯಾಂಕರ್ ಪ್ರಯಾಣ ಮಾಡಲಿದ್ದು, ಇಲ್ಲಿ ಮಾರ್ಗ ಬಂದ್ ಆದಲ್ಲಿ ಭಾರತದಲ್ಲಿ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಆಗಲಿದೆ.
ಯಾವುದೇ ಹಡಗುಗಳು ಹೋರ್ಮಝ್ ಜಲ ಸಂಧಿಯಿಂದಾಗಿ ಸಾಗದಂತೆ ತಡೆಯುವುದು ಅಥವಾ ಪ್ರಸ್ತುತ ಜಲಸಂಧಿಯನ್ನು ಮುಚ್ಚಿಬಿಡುವುದು ಎದುರಾಳಿಗಳ ಮೇಲೆ ಒತ್ತಡ ಹೇರಲಿರುವ ಏಕೈಕ ಮಾರ್ಗವೆಂದು ಇರಾನ್ ಎಚ್ಚರಿಸಿದೆ. ಅಮೆರಿಕ ಭಾನುವಾರ ಮುಂಜಾನೆ ಇರಾನ್‌ನ ಮೂರು ಪ್ರಮುಖ ಪರಮಾಣು ನೆಲೆಗಳಿಗೆ ಬಾಂಬ್ ಹಾಕಿ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಇರಾನ್, ಭಾರತ ಸಹಿತ ಬಹುತೇಕ ರಾಷ್ಟ್ರಗಳಿಗೆ ಇಂಧನ ಸರಬರಾಜಿಗೆ ಪ್ರಮುಖ ಮಾರ್ಗವಾಗಿರುವ ಹೋರ್ಮಝ್ “ಜಲಸಂಧಿಯನ್ನು ಮುಚ್ಚುವ ಬೆದರಿಕೆಯೊಡ್ಡಿದೆ. ಪ್ರಸ್ತುತ ಶೇ.30ರಷ್ಟು ಜಾಗತಿಕ ತೈಲ ಮತ್ತು – ಜಗತ್ತಿನ ಮುಕ್ತಾಲಂಶ ಎಲ್‌ಎನ್‌ಜಿ ಸಾಗಣೆಯಾಗೋದು ಇದೇ ಜಲಸಂಧಿ ಮೂಲಕವೇ ಇದನ್ನೇನಾದರು ಇರಾನ್ ಬಂದ್ ಮಾಡಿದಲ್ಲಿ ಜಾಗತಿಕ ತೈಲ ಪೂರೈಕೆ ತಕ್ಷಣ ಬಾಧಿತವಾಗಲಿದೆ ಮತ್ತು ದರ ಒಮ್ಮಿಂದೊಮ್ಮೆ ಗಗನಕ್ಕೇರಲಿದೆ.
ಮಾತ್ರವಲ್ಲ, ಜಾಗತಿಕವಾಗಿ ಇಂಧನ ಮಾರುಕಟ್ಟೆಗಳಲ್ಲಿ ಗಮನಾರ್ಹ ಏರಿಳಿತವಾಗಲಿದೆ ಮತ್ತು ಭಾರತದ ಇಂಧನ ಭದ್ರತೆ ಮೇಲೂ ಪರಿಣಾಮ ಬೀರಲಿದೆ ಎಂದು ಜವಾಹರಲಾಲ್ ನೆಹರೂ ವಿವಿಯಲ್ಲಿನ ರಾಷ್ಟ್ರೀಯ ಭದ್ರತೆ ಕುರಿತ ವಿಶೇಷ ಕೇಂದ್ರದ ಸಹಾಯಕ ಪ್ರೊಫೆಸರ್ ಲಕ್ಷ್ಮಣ್ ಕುಮಾರ್ ಬೆಹೆರಾ ಹೇಳುತ್ತಾರೆ.

* ತೈಲ ವ್ಯಾಪಾರದಲ್ಲಿ ಏರುಪೇರು,ಹೆಚ್ಚಾಗತ್ತಾ ತೈಲ ಬೆಲೆ !

ಇರಾನ್ ಹೋರ್ಮಝ್ ಜಲಸಂಧಿ ಮುಚ್ಚಿದಲ್ಲಿ ಜಾಗತಿಕ ತೈಲ ವ್ಯಾಪಾರಗಳಿಗೆ ಗಣನೀಯ ಹೊಡೆತ ಬೀಳಲಿದೆ ಎಂದು ಭಾರತೀಯ ನೌಕಾಪಡೆಯ ಮಾಜಿ ವಕ್ತಾರ ಕ್ಯಾಪ್ಟನ್ ಡಿ.ಕೆ.ಶರ್ಮಾ (ನಿವೃತ್ತ) ಎಚ್ಚರಿಸಿದ್ದಾರೆ. ಯಾವುದೇ ತರ ಅಡಚಣೆಯಾದಲ್ಲಿ ವಿಮಾ ಕಂತುಗಳು ಜಾಸ್ತಿಯಾದೀತು ಮತ್ತು ತೈಲ ಸರಕು ಸಾಗಣೆಗೆ ಬದಲಿ ಹಾದಿಗಳು ದುಬಾರಿಯಾಗಲಿವೆ ಎಂದಿದ್ದಾರೆ.

* ಬ್ಯಾರೆಲ್ ದರ 100 ಡಾಲರ್‌ಗೆ ಜಿಗಿತ?

ವಲಯದಲ್ಲಿನ ಉದ್ವಿಗ್ನ ವಾತಾವರಣದಲ್ಲಿ ಇರಾನ್ ಪ್ರತೀಕಾರ ಕ್ರಮಕ್ಕೆ ಮುಂದಾದಲ್ಲಿ, ತೈಲ ದರಗಳು ಗಗನಕ್ಕೇರಲಿವೆ. ಪ್ರತೀ ಬ್ಯಾರೆಲ್‌ಗೆ 80ರಿಂದ 90ಡಾಲರ್‌ಗೆ ಜಿಗಿಯಲಿದೆ ಅಥವಾ 100ಡಾಲರ್‌ಗಳಿಗೆ ಏರಿದರೂ ಆಶ್ಚರ್ಯವಿಲ್ಲ. ವಲಯದ ಕರೆನ್ಸಿಗಳ ಮೌಲ್ಯಗಳಲ್ಲೂ ವೇಗವಾಗಿ ಏರಿಳಿತವಾಗೋ ಸಾಧ್ಯತೆಗಳಿವೆ. ವಲಯದ ಆರ್ಥಿಕ ಬೆಳವಣಿಗೆಗೆ ಹೊಡೆತ ಬೀಳಲಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಇತರ ಸ್ಥಿರ ಮಾರುಕಟ್ಟೆಗಳತ್ತ ದೃಷ್ಟಿ ಹಾಯಿಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂದು ಶರ್ಮಾ ಹೇಳುತ್ತಾರೆ.
ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯ ಈಚಿನ ವಿಶ್ಲೇಷಣೆ ಪ್ರಕಾರ, ಹೋರ್ಮಝ್ ಜಲಸಂಧಿಯಲ್ಲಿ ಅವ್ಯವಸ್ಥೆಯಾದರೂ ತೈಲ ಮಾರುಕಟ್ಟೆಗಳ ಮೇಲೆ ನೆಗಿಟಿವ್ ಪರಿಣಾಮಗಳಾಗಲಿವೆ ಎಂದಿದೆ. ಜಾಗತಿಕವಾಗಿ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಗಳು ತೈಲ ಉತ್ಪಾದಕರು ಮತ್ತು ಬಳಕೆದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕಾರಣ ಅಂತಾರಾಷ್ಟ್ರೀಯ ಇಂಧನ ನೀತಿ ಅಜೆಂಡಾದಲ್ಲಿ ತೈಲ ಪೂರೈಕೆ ಭದ್ರತೆಗೆ ಬಹಳ ಪ್ರಾಧಾನ್ಯತೆ ನೀಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.