Categories
ರಾಜ್ಯ ಹಬ್ಬಗಳು

ಹನುಮ ಹನುಮ.. ಹನುಮನಿಗೆ ಎಲ್ಲೆಡೆ ಪೂಜೆ!

ಹನುಮ ಹನುಮ.. ಹನುಮನಿಗೆ ಎಲ್ಲೆಡೆ ಪೂಜೆ!
– ರಾಮನ ಬಂಟನಿಗೆ ವಿಶೇಷ ಅಲಂಕಾರ: ಹನುಮಾನ್ ಜೈ
– ಸಮಸ್ತ ಜನತೆಗೆ ಹನುಮ ಜಯಂತಿ ಶುಭಾಶಯಗಳು

ರಾಮ ಮತ್ತು ಸೀತೆಯರು ವನವಾಸದ ಸಂದರ್ಭದಲ್ಲಿ ಪರಸ್ಪರ ಅಗಲಿದ್ದು, ಅವರು ಮರಳಿ ಒಂದಾಗುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವನು ವಾನರ ಸೈನ್ಯದ ಮುಖ್ಯಸ್ಥ ಹನುಮಂತ. ರಾಮನ ಚೂಡಾಮಣಿಯನ್ನು ಸೀತೆಗೆ ತಂದುಕೊಡುವ ಮೂಲಕ ಸೀತೆಯು ರಾಮನು ಬಂದು ತನ್ನನ್ನು ಕರೆದೊಯ್ಯುತ್ತಾನೆ ಎನ್ನುವ ಭರವಸೆಯೊಂದಿಗೆ ನಿರಾಳವಾಗಿ, ನೆಮ್ಮದಿಯುತವಾಗಿ ಅಶೋಕವನದಲ್ಲಿ ದಿನಗಳನ್ನು ಕಳೆಯುವಂತೆ ಮಾಡಿದನು. ಉತ್ತರ ಭಾರತದಿಂದ ಲಂಕದ ನಡುವೆ ತನ್ನ ಸೇನೆಯ ಮೂಲಕ ರಾಮಸೇತುವನ್ನು ನಿರ್ಮಿಸಿ ಸೀತೆಯು ಸುರಕ್ಷಿತವಾಗಿ ರಾಮನೊಂದಿಗೆ ಮರಳಿ ಹಿಂತಿರುಗುವಂತೆ ಮಾಡುವಲ್ಲಿ ಈತನ ಪಾತ್ರ ಹಿರಿದಾದುದು. ಸಂಜೀವಿನಿ ಪರ್ವತವನ್ನು ತನ್ನ ಅಂಗೈಯಲ್ಲಿ ಎತ್ತಿ ಹಿಡಿದು ತಂದು ಯುದ್ಧದ ಸಮಯದಲ್ಲಿ ಲಕ್ಷ್ಮಣನ ಪ್ರಾಣವನ್ನು ಉಳಿಸಿದ ಮಹಾನುಭಾವ.

ಅಷ್ಟು ಗಟ್ಟಿಮುಟ್ಟಾದ ದೇಹದಾರ್ಢ್ಯವನ್ನು ಹೊಂದಿ, ದೈವತ್ವಕ್ಕೇರಿದರೂ ಸಹ ಬಾಲ್ಯದಲ್ಲಿ ಕೆಂಪಾಗಿ ಸುಂದರವಾಗಿ ಕಾಣುತ್ತಿದ್ದ ಸೂರ್ಯನನ್ನು ಹಣ್ಣೆಂದು ಸವಿಯಲು ಹೋಗಿ, ಮುಖವನ್ನು ಸುಟ್ಟುಕೊಂಡ ತುಂಟ ಬಾಲಕನನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಮಣ್ಣಿನ ಪ್ರದೇಶವಾದ ಹಂಪಿಯ ಸಮೀಪದಲ್ಲಿರುವ ಕಿಷ್ಕಿಂದೆಯಲ್ಲಿ ಅಂಜನಾದೇವಿಯ ಗರ್ಭದಲ್ಲಿ ಹನುಮನ ಜನನವಾಗಿರುವುದು ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಸಂಗತಿಯಾಗಿದೆ.

“ಎಲ್ಲಿ ರಾಮನೋ ಅಲ್ಲಿ ಹನುಮನು ಹನುಮ ಎಂದರೆ ರಾಮಚಂದ್ರನೋ“ಎಂದು ದಾಸರು, ಕವಿಗಳು ಹಾಡಿ ಹೊಗಳುವಷ್ಟರ ಮಟ್ಟಿಗೆ ರಾಮದೂತ ಎನಿಸಿಕೊಂಡ ಹನುಮಂತನು, ಭಕ್ತ ಎಂದರೆ ಆಂಜನೇಯನಂತಿರಬೇಕು ಎಂದು ಕರೆಸಿಕೊಂಡು ಜನರಿಗೆ ಭಕ್ತಿಯ ಮಾರ್ಗವನ್ನು ತೋರಿದನು. ರಾಮಬಾಣದ ತೀಕ್ಷ್ಣತೆಗಿಂತ ರಾಮನಾಮವು ಅತ್ಯಂತ ಶಕ್ತಿಶಾಲಿ ಮತ್ತು ಪರಿಣಾಮಕಾರಿಯಾಗಿದೆ ಎನ್ನುವುದನ್ನು ಜಗತ್ತಿಗೆ ಸಾರಿದವನು. ಶಕ್ತಿಗೆ ಹೆಸರಾದ ಹನುಮನ ಬಲವು ಎಲ್ಲರಲ್ಲೂ ಬೆರೆಯಲಿ. ಆದರೆ ಆ ಶಕ್ತಿ ಮತ್ತು ಸಾಮರ್ಥ್ಯ ಒಳ್ಳೆಯ ಉದ್ದೇಶಗಳಿಗೆ ಉಪಯೋಗವಾಗುವಂತಾಗಲಿ. ಎಲ್ಲೆಡೆ ಹನುಮ ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದು ಹನುಮ ದೇವಾಲಯಗಳು ಸಿಂಗಾರಗೊಂಡಿವೆ.

ಹನುಮ ಜಯಂತಿಯ ಶುಭಾಶಯಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.