Categories
ರಾಜ್ಯ

ಇನ್ಮುಂದೆ ಕಾಡಲ್ಲಿ ಜಾನುವಾರುಗಳನ್ನು ಮೇಯಿಸುವಂತಿಲ್ಲ ! – ಈಶ್ವರ್ ಖಂಡ್ರೆ

ಇನ್ಮುಂದೆ ಕಾಡಲ್ಲಿ ಜಾನುವಾರುಗಳನ್ನು ಮೇಯಿಸುವಂತಿಲ್ಲ ! – ಈಶ್ವರ್ ಖಂಡ್ರೆ

* ಸಾಕುಪ್ರಾಣಿ, ದನಕರುಗಳನ್ನ ಅರಣ್ಯದಲ್ಲಿ ಮೇಯಿಸುವುದನ್ನು ನಿಷೇಧಿಸಿ ಈಶ್ವರ ಖಂಡ್ರೆ ಆದೇಶ
* ಮಲೆನಾಡಿಗರಿಗೆ ಇದೆಂತಾ ಸಂಕಷ್ಟ ಅರಣ್ಯ ಸಚಿವರೇ

ವಿಶೇಷ ವರದಿ: ಸಚಿನ್,ಶೃಂಗೇರಿ
NAMMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಅರಣ್ಯ ಪ್ರದೇಶದೊಳಗೆ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿರುವ ಅವರು, ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುವುದರಿಂದ ಕಾಡಿನಲ್ಲಿ ಆಗಷ್ಟೇ ಮೊಳಕೆ ಒಡೆದ ಚಿಕ್ಕಪುಟ್ಟ ಸಸಿಗಳು ಸಾಕು ಪ್ರಾಣಿಗಳಿಗೆ ಆಹಾರವಾಗಿ, ಅರಣ್ಯದಲ್ಲಿ ಹೊಸ ಗಿಡಗಳು ಬೆಳೆಯದೇ ಅರಣ್ಯ ಸಂವರ್ಧನೆಗೆ ಅಡ್ಡಿಯಾಗುತ್ತಿದೆ ಎಂದು ಪರಿಸರಪ್ರೇಮಿಗಳು ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿದ್ದಾರೆ.
ದೊಡ್ಡ ಸಂಖ್ಯೆಯ ಸಾಕುಪ್ರಾಣಿಗಳು ಕಾಡಿನಲ್ಲಿ ಮೇಯುವುದರಿಂದ ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳಿಗೂ ಮೇವಿನ ಕೊರತೆ ಉಂಟಾಗುತ್ತದೆ. ಮಿಗಿಲಾಗಿ ಊರಿನಿಂದ ಕಾಡಿಗೆ ಮೇಯಲು ಹೋಗುವ ಪ್ರಾಣಿಗಳಿಂದ ವನ್ಯಜೀವಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ ಎಂಬ ಅಂಶವನ್ನೂ ಉಲ್ಲೇಖಿಸಿದ್ದಾರೆ. ಅರಣ್ಯ ಸಂವರ್ಧನೆಯಾಗದಿದ್ದರೆ ಅದು ಆ ಅರಣ್ಯದಲ್ಲಿ ಹರಿಯುವ ನದಿಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳವಾಗುತ್ತದೆ. ಕಾಡಿನೊಳಗೆ ಹೋಗುವ ದನಗಾಹಿಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪರಿಹಾರ ನೀಡಲೂ ನಿಯಮದಲ್ಲಿ ಅವಕಾಶ ಇರುವುದಿಲ್ಲ. ಹೀಗಾಗಿ ಕೂಡಲೇ ಅಭಯಾರಣ್ಯಗಳಲ್ಲಿ ಮೇಕೆ, ಕುರಿ, ದನಕರುಗಳನ್ನು ಮೇಯಿಸುವುದನ್ನು ನಿಷೇಧಿಸಬೇಕು ಎಂದು ವನ್ಯಜೀವಿ ಪ್ರೇಮಿಗಳು, ಪರಿಸರವಾದಿಗಳು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ಕಾನೂನು ರೀತಿಯ ಕ್ರಮವಹಿಸಲು ಸೂಚಿಸಿದ್ದಾರೆ.
ಕಾಡಿನಲ್ಲಿರುವ ವನ್ಯಜೀವಿಗಳು ಮೇಯಲು ಹೋದ ದನಕರುಗಳನ್ನು ಕೊಂದಾಗ, ಆಕ್ರೋಶಗೊಂಡು ಕೆಲವರು ಮೃತ ಜಾನುವಾರುಗಳಿಗೆ ವಿಷಹಾಕುವ ಕಾರಣ ವನ್ಯಜೀವಿಗಳು ಸಾವಿಗೀಡಾಗುತ್ತವೆ. ಇದಕ್ಕೆ ಇತ್ತೀಚೆಗೆ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಸಾವಿಗೀಡಾಗಿರುವುದೇ ಸಾಕ್ಷಿಯಾಗಿದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿರುತ್ತಾರೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.
ಮಿಗಿಲಾಗಿ ಮದ್ರಾಸ್ ಹೈಕೋರ್ಟ್ ತಮಿಳುನಾಡಿನ ಅರಣ್ಯದೊಳಗೆ ಸಾಕು ಪ್ರಾಣಿಗಳನ್ನು ಮೇಯಿಸುವುದರ ವಿರುದ್ಧ ನೀಡಿದ ತೀರ್ಪಿನ ಬಳಿಕ, ನೆರೆಯ ರಾಜ್ಯದಿಂದಲೂ ನಮ್ಮ ರಾಜ್ಯಕ್ಕೆ ದನಕರುಗಳನ್ನು ತಂದು ಕಾಡಿನಲ್ಲಿ ಮೇಯಿಸಲಾಗುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದ ಅರಣ್ಯಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅರಣ್ಯ ಪ್ರದೇಶದೊಳಗೆ ಸಾಕು ಪ್ರಾಣಿಗಳನ್ನು ಮೇಯಲು ಬಿಡುವುದನ್ನು ನಿರ್ಬಂಧಿಸಲು ಮತ್ತು ನಿಷೇಧಿಸಲು ನಿಯಮಾನುಸಾರ ಕ್ರಮವಹಿಸಲು ಸೂಚಿಸಿದ್ದಾರೆ.

* ಮಲೆನಾಡಿಗರೇ ಇಂದೆಂತಹ ಸಂಕಷ್ಟ ನೀಡಿದಿರಿ ಅರಣ್ಯ ಸಚಿವರೇ ?
ಹೌದು, ಅರಣ್ಯ ಸಚಿವರ ಈ ಆದೇಶದಿಂದ ಮಲೆನಾಡಿಗರು ಅಕ್ಷರಶಃ ಸಂಕಷ್ಟಕ್ಕೀಡಾಗುತ್ತಾರೆ.ಅರಣ್ಯ ಸಚಿವರಿಗೆ ಮಲೆನಾಡಿನ ಕಲ್ಪನೆ ಇಲ್ವಾ ಅಥವಾ ಯಾವುದೋ ದ್ವೇಷದಿಂದ ಈ ಆದೇಶ ಮಾಡಿದ್ದಾರೆ ಅನ್ನೋ ಅನುಮಾನ ಮೂಡುತ್ತಿದೆ. ಮಲೆನಾಡಿಗರು ಬೆಳಿಗ್ಗೆ ತಮ್ಮ ಜಾನುವಾರಗಳನ್ನು ಮೇಯಲು ಬಿಟ್ಟು ತಮ್ಮ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿ ಸಂಜೆ ಕೆಲಸ ಮುಗಿಸಿ ಬಂದು ಜಾನುವಾರುಗಳನ್ನು ಕಟ್ಟುವುದು ಸರ್ವೇ ಸಾಮಾನ್ಯ. ಬೆಳಿಗ್ಗೆ ಮೇಯಲು ಬಿಟ್ಟ ಜಾನುವಾರುಗಳು ಅಲ್ಲೇ ಸ್ವಲ್ಪ ದೂರದಲ್ಲಿರುವ ಅಥವಾ ರೈತರ ಜಮೀನಿನ ಪಕ್ಕದಲ್ಲಿರುವ ಕಾಡಿಗೆ ಮೇಯಲು ಹೋಗುತ್ತವೆ. ಹಾಗೆ ಮೇಯಲು ಹೋದ ಜಾನುವಾರುಗಳು ಯಾವುದೋ ದೊಡ್ಡ ಮರಗಳನ್ನಾಗಲಿ,ಸೊಪ್ಪಿನ ಗಿಡಗಳನ್ನಾಗಲಿ ತಿನ್ನುವುದಿಲ್ಲ ಕೇವಲ ಹುಲ್ಲನ್ನು ಸಣ್ಣಪುಟ್ಟ ಗಿಡಗಳ ಎಲೆಗಳನ್ನು ತಿನ್ನುತ್ತದೆ,ಹಾಗಂತ ಕಾಡು ಪ್ರಾಣಿಗಳ ಆಹಾರವನ್ನು ತಿನ್ನುತ್ತವೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಸಚಿವರ ಆದೇಶದ ಪ್ರಕಾರ ನಡೆಯುವುದಾದರೇ ಮಲೆನಾಡಿಗರು ತಮ್ಮ ದೈನಂದಿನ ಕೆಲಸವನ್ನು ಬಿಟ್ಟು ಜಾನುವಾರುಗಳೊಡನೆ ಇದ್ದು ಕಾಡಿಗೆ ಹೋಗದಂತೆ ನೋಡಿಕೊಳ್ಳಬೇಕಾಗುತ್ತದೆ.ಮಲೆನಾಡಿನಲ್ಲಿ ಈ ಕೆಲಸ ತಂಬಾ ಕಷ್ಟ. ಸಚಿವರ ಆದೇಶಕ್ಕೆ ಮಲೆನಾಡಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುವ ಎಲ್ಲಾ ಲಕ್ಷಣಗಳು ಇದ್ದು,ಸಂಬಂಧಪಟ್ಟ ಇಲಾಖೆಯವರು ಅರಣ್ಯದಲ್ಲಿ ಕಾವಲಿಗೆ ನಿಲ್ಲಬೇಕು ಅಥವಾ ಇಡೀ ಅರಣ್ಯಕ್ಕೆ ಬೇಲಿ ಹಾಕಿ ನಂತರ ಈ ಆದೇಶ ಮಾಡಿ ಎಂಬ ಆಕ್ರೋಶದ ಕೂಗು ಕೇಳ ತೊಡಗಿದೆ. ಇನ್ನೊಂದೆಡೆ ಮಲೆನಾಡಿನಲ್ಲಿ ಈಗಾಗಲೇ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಮೊದಲು ಕಾಡು ಪ್ರಾಣಿಗಳು ರೈತರ ಜಮೀನಿಗೆ ಬಾರದಂತೆ,ನಾಡಿಗೆ ಬಾರದಂತೆ ನೋಡಿಕೊಳ್ಳಿ ಆಮೇಲೆ ರೈತರ ಸಾಕು ಪ್ರಾಣಿಗಳು ಕಾಡಿಗೆ ಮೇಯಲು ಹೋಗಬಾರದೆಂಬ ಆದೇಶ ಮಾಡಿ ಎಂಬ ಕೂಗು ಮಲೆನಾಡು ಭಾಗದಲ್ಲಿ ಕೇಳುತ್ತಿದೆ.
ಒಟ್ಟಿನಲ್ಲಿ ಮಲೆನಾಡು,ಅರಣ್ಯ ಇದರ ಬಗ್ಗೆ ಅರಿವೇ ಇಲ್ಲದ,ಮಲೆನಾಡಿನ ಜೀವನ ಶೈಲಿ ಬಗ್ಗೆ ಗೊತ್ತಿರದ ವ್ಯಕ್ತಿಯನ್ನು ಅರಣ್ಯ ಸಚಿವರನ್ನಾಗಿ ಮಾಡಿದರೆ ಕೇವಲ ಪರಿಸರ ಪ್ರೇಮಿಗಳ ಮಾತನ್ನು ಕೇಳಿ ಆದೇಶ ಹೊರಡಿಸೋದಷ್ಟೇ ಸಾಧ್ಯ, ನಿಜಕ್ಕೂ ಇಲ್ಲಿ ಪರಿಸರ ಪ್ರೇಮಿಗಳು ಮಲೆನಾಡಿಗರು,ಸಾವಿರಾರು ವರ್ಷಗಳಿಂದ ಪ್ರಕೃತಿಯೊಂದಿಗೆ ಬದುಕುತ್ತಿರುವವರು,ಪ್ರಕೃತಿಯ ಸಣ್ಣ ಬದಲಾವಣೆ ಕೂಡ ಅರ್ಥ ಮಾಡಿಕೊಂಡವರು ಈ ಮಲೆನಾಡಿಗರೇ ಹೊರತು ಅಲ್ಲೆಲ್ಲೋ ದೊಡ್ಡ ನಗರಗಳಲ್ಲಿ ಕೂತು ಪರಿಸರ ಪ್ರೇಮದ ಬಗ್ಗೆ ಬಿಟ್ಟಿ ಉಪದೇಶ ನೀಡುತ್ತಾ,ಒಂದು ದಿನ ಗಿಡ ನೆಡುವ ಆ ವೈಟ್ ಕಾಲರ್ ಜನರಲ್ಲಿ ಎಂಬ ಸತ್ತವನ್ನು ಸರ್ಕಾರಕ್ಕೆ ಹಾಗೂ ಸಚಿವರಿಗೆ ಮಲೆನಾಡು ಭಾಗದ ಶಾಸಕರುಗಳು ಅರ್ಥ ಮಾಡಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.