Categories
ರಾಜ್ಯ

ದೀಪಾವಳಿ ಹಬ್ಬದ ಸಂಭ್ರಮಕ್ಕೆ ತೆರೆ!

ದೀಪಾವಳಿ ಹಬ್ಬದ ಸಂಭ್ರಮಕ್ಕೆ ತೆರೆ!
– 5 ದಿನಗಳ ಹಬ್ಬ: ಮನೆ ಮಂದಿಯೆಲ್ಲಾ ಸೇರಿ ಸಂತಸ
– ಪ್ರಕೃತಿಯ ಆರಾಧನೆಯ ಸಂಕೇತ ವರ್ಷ ತೊಡಕು ಹಬ್ಬ

NAMMUR EXPRESS NEWS
ದೀಪಾವಳಿ ಸಡಗರ ಸಂಭ್ರಮ ಈ ಬಾರಿ ಮಳೆ ನಡುವೆ ಕಳೆದಿದೆ. 5 ದಿನಗಳ ಕಾಲ ಪ್ರತಿ ಮನೆಯಲ್ಲೂ ಹಬ್ಬದ ಸಡಗರ ಕಂಡು ಬಂತು. ಅ. 19ರಿಂದ ಅ. 24ರವರೆಗೆ ಹಬ್ಬ ಆಚರಣೆ ಮಾಡಲಾಯಿತು.
ಲಕ್ಷ್ಮಿ ಪೂಜೆ, ಮನೆ ಪೂಜೆ, ಗೋ ಪೂಜೆ, ಬಲಿಂದ್ರ ಪೂಜೆ, ವರ್ಷ ತೊಡಕು ಹಬ್ಬವನ್ನು ಮನೆ ಮಂದಿ ಎಲ್ಲಾ ಸೇರಿ ಆಚರಣೆ ಮಾಡಿದರು. ಹೊರ ಊರಿನಲ್ಲಿ ಇದ್ದವರು ಕೂಡ ಆಗಮಿಸಿ ಹಬ್ಬ ಆಚರಣೆ ಮಾಡಿದರು.
ಪ್ರತಿಯೊಂದು ಹಬ್ಬವನ್ನು ರಾಜ್ಯಾದ್ಯಂತ ಸೀಮೆಗಳಿಗೆ ಅನುಸಾರವಾಗಿ, ಅಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಪರಂಪರೆಯಂತೆ ಆಚರಿಸಿಕೊಂಡು ಬರಲಾಗುತ್ತದೆ.‌ ವರ್ಷ ತೊಡಕು ಹಬ್ಬ ಕೊನೆ ದಿನ. ರೈತಾಪಿ ಜನರು, ವ್ಯವಸಾಯದ ಮೂಲವನ್ನು ಹೊಂದಿರುವವರು ಸಡಗರದಿಂದ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ ಇದು. ಮಳೆಗಾಲದಲ್ಲಿ ನಾಟಿ ಮಾಡಿದ ಭೂಮಿಗೆ, ಆಶ್ವಯುಜ ಮಾಸದಲ್ಲಿ ಬರುವ ಹುಣ್ಣಿಮೆಯ ದಿನದಂದು, ಭೂಮಿ ಹುಣ್ಣಿಮೆ ಎಂಬ ಹೆಸರಿನಿಂದ ಭೂತಾಯಿಯ ಸೀಮಂತವನ್ನು ನಡೆಸಿ, ಯಾವುದೇ ಸಮಸ್ಯೆಗಳು ಎದುರಾಗದಂತೆ, ಉತ್ತಮ ಫಲ ನೀಡು ಎಂದು ಪ್ರಾರ್ಥಿಸಿಕೊಂಡು ಆಕೆಯ ಬಯಕೆಯನ್ನು ನೆರವೇರಿಸುತ್ತಾರೆ. ಬಳಿಕ ಕಾರ್ತಿಕ ಮಾಸದಲ್ಲಿ ಬರುವ ದೊಡ್ಡ ಮತ್ತು ಬೆಳಕಿನ ಹಬ್ಬವಾದ ದೀಪಾವಳಿ ಮುಗಿದ ನಂತರ, ತದಿಗೆಯ ದಿನದಂದು ಗದ್ದೆಗಳಿಗೆ ತೆರಳಿ, ಪೂಜೆಯನ್ನು ನೆರವೇರಿಸಿ, ಮೊದಲ ಫಲವಾದ ಭತ್ತದ ತೆನೆಯನ್ನು ಕೊಯ್ದು, ತಲೆಯ ಮೇಲೆ ಹೊತ್ತುಕೊಂಡು ಬಂದು ಸಂಭ್ರಮದಿಂದ ಮನೆಗೆ ಬರಮಾಡಿಕೊಳ್ಳುವುದೇ ಹೊಸತು ತರುವುದು, ಕದಿರು ತರುವುದು ಅಥವಾ ವರ್ಷ ತೊಡಕು. ಮನೆಗೆ ತಂದ ನಂತರ, ದೇವರಮನೆಯಲ್ಲಿರಿಸಿ ಮತ್ತೊಮ್ಮೆ ಪೂಜೆಯನ್ನು ನೆರವೇರಿಸಿ, ದೇವರ ಕೋಣೆ, ಮನೆಯ ಮುಂಬಾಗಿಲು, ಹಣವನ್ನಿರಿಸುವ ಬೀರು ಮೊದಲಾದ ಕಡೆಗಳಲ್ಲಿ ಕಟ್ಟಿ, ಪ್ರತಿ ವರ್ಷ ಇದೇ ರೀತಿ ಭೂಮಿಯಲ್ಲಿ ಮತ್ತು ಮನೆಯಲ್ಲಿ ಸಮೃದ್ಧಿ ತುಂಬಿರಲಿ ಎಂದು ಪ್ರಾರ್ಥಿಸಿಕೊಳ್ಳುವುದು ಈ ಹಬ್ಬದ ವಿಶೇಷ. ಜೊತೆಗೆ ಮೊದಲ ಫಸಲೆಂದು ತೆನೆಯಿಂದ ಸ್ವಲ್ಪ ಭತ್ತದ ಕಣಗಳನ್ನು ತೆಗೆದು, ಅದನ್ನು ಅನ್ನದಲ್ಲಿ ಅಥವಾ ಪಾಯಸದಲ್ಲಿ ಬೆರೆಸಿ ಪ್ರಸಾದದ ರೂಪದಲ್ಲಿ ಸೇವಿಸುವುದು, ಆ ಮೂಲಕ ಹಬ್ಬದ ಊಟವನ್ನು ಮಾಡುವುದು ಇದರ ಮತ್ತೊಂದು ವೈಶಿಷ್ಟ್ಯ. ಹೆಚ್ಚಾಗಿ ಸಿಹಿ ಪದಾರ್ಥಗಳಲ್ಲೇ ಇದನ್ನು ಬೆರೆಸುವುದು ವಾಡಿಕೆ. ಪರಿಸರ ಆರಾಧಿಸುವುದು ಮತ್ತು ಸಂಭ್ರಮಿಸುವುದೇ ವರ್ಷ ತೊಡಕಿನ ಮೂಲ. ಹೀಗೆ ಹಬ್ಬದ ಸಂಭ್ರಮ ಕಳೆದು ಜನ ಮತ್ತೆ ತಮ್ಮ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.