ಭಾರತದ 2.0 ದಾಳಿಗೆ ತತ್ತರಿಸಿದ ಪಾಕಿಸ್ತಾನ
* ದುಬೈನಲ್ಲಿ ಭಾರತದ ಪರ ರನ್ ಅಭಿಷೇಕ
* ಅಬ್ಬರಿಸಿದ ಗಿಲ್, ಭಾರತವನ್ನು ಕೆಣಕಿದ ಪಾಕ್‌ಗೆ ತಕ್ಕ ಉತ್ತರ
NAMMMUR EXPRESS SPORTS NEWS
ದುಬೈ: ಇಲ್ಲಿನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ 14ನೇ ಪಂದ್ಯದಲ್ಲಿ ಭಾರತ ತಂಡ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿ ಪಾಕ್ ತಂಡವನ್ನು ಹೀನಾಯವಾಗಿ ಬಗ್ಗು ಬಡಿದಿದೆ ಎಂಬುದು ವಿಶೇಷ.ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಪರ ಆರಂಭಿಕ ಆಟಗಾರ ಸಾಹಿಬ್ಝಾದ ಫರ್ಹಾನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 45 ಎಸೆತಗಳನ್ನು ಎದುರಿಸಿದ ಫರ್ಹಾನ್ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 58 ರನ್ ಗಳಿಸಿ ಔಟಾದರು. ಇನ್ನು ಸೈಮ್ ಅಯ್ಯೂಬ್ 21 ರನ್‌ಗಳ ಕೊಡುಗೆ ನೀಡಿದರೆ, ಕೊನೆಯ ಹಂತದಲ್ಲಿ ಫಹೀಮ್ ಅಶ್ರಫ್ 20 ರನ್ ಬಾರಿಸಿದರು. ಈ ಮೂಲಕ ಪಾಕಿಸ್ತಾನ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.
* ಭಾರತ ತಂಡಕ್ಕೆ ಗೆಲುವಿನ ಅಭಿಷೇಕ,ಗಿಲ್ ಆರ್ಭಟ
172 ರನ್‌ಗಳ ಗುರಿ ಪಡೆದ ಭಾರತ ತಂಡ ಶುಭ್ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ಒದಗಿಸಿದರು. ಮೊದಲ ಓವರ್ನ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿ ಶುಭಾರಂಭ ಮಾಡಿದ ಅಭಿಷೇಕ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅತ್ತ ಶುಭ್ಮನ್ ಗಿಲ್ ಕೂಡ ಬಿರುಸಿನ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ಈ ಮೂಲಕ ಗಿಲ್ ಕೂಡ 28 ಎಸೆತಗಳಲ್ಲಿ 47 ರನ್ ಬಾರಿಸಿದರು. ಆರಂಭಿಕರಿಬ್ಬರ ತೂಫಾನ್ ಬ್ಯಾಟಿಂಗ್ನೊಂದಿಗೆ ಭಾರತ ಕೇವಲ 10 ಓವರ್ಗಳಲ್ಲಿ 109 ರನ್ ಕಲೆಹಾಕಿತು.
ಶುಭ್ಮನ್ ಗಿಲ್ (47) ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ (0) ಕೂಡ ರನ್ ಗಳಿಸದೇ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಆರ್ಭಟ ಮುಂದುವರೆಸಿದ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 74 ರನ್ ಬಾರಿಸಿ, ತನ್ನ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ಸಂಜು ಸ್ಯಾಮ್ಸನ್ 13 ರನ್ಗಳಿಸಿ ಔಟಾದರೆ,ಈ ಹಂತದಲ್ಲಿ ಜೊತೆಗೂಡಿದ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಜೊತೆಯಾಟದೊಂದಿಗೆ ಭಾರತ ತಂಡವನ್ನು 18.5 ಓವರ್ಗಳಲ್ಲಿ ಗೆಲುವಿನ ಗುರಿ ಮುಟ್ಟಿಸಿದರು. ಈ ಮೂಲಕ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
* ಭಾರತ ತಂಡವನ್ನು ಕೆಣಕಿದ ಪಾಕ್‌ಗೆ ತಕ್ಕ ಉತ್ತರ
ಏಷ್ಯಾ ಕಪ್ ಟೂರ್ನಿಯ ಭಾರತ ಪಾಕ್ ಮೊದಲ ಪಂದ್ಯದಲ್ಲೇ ಹಲವು ಚರ್ಚೆಗೆ ಕಾರಣವಾಗಿ ಆಟಗಾರರ ನಡುವೆ ಕಾಲೆಳೆವ ಹಲವು ಪ್ರಸಂಗ ನಡೆದಿತ್ತು,ಅದರಂತೆ ಎರಡನೇ ಪಂದ್ಯದಲ್ಲೂ ಕೂಡ ನಡೆದಿದೆ. ಈ ಪಂದ್ಯದಲ್ಲೂ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಪಾಕ್ ತಂಡದ ನಾಯಕನ ಕೈಕುಲುಕದೇ,ಭಾರತ ತಂಡವನ್ನು ಕೆಣಕಿದ ಪಾಕ್‌ಗೆ ತಕ್ಕ ಉತ್ತರ ನೀಡಿದರು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಪಾಕ್‌ನ ಫರ್ಹಾನ್ ಅರ್ಧ ಶತಕ ಸಿಡಿಸಿ ಸಂಭ್ರಮಿಸುವಾಗ ಗನ್ ಮಾದರಿಯಲ್ಲಿ ಅಣಕಿಸಿದ್ದರು ಈ ವೀಡಿಯೋ ಭಾರೀ ವೈರಲ್ ಆಗಿ ಆಕ್ರೋಶಕ್ಕೆ ಕಾರಣವಾಗಿದೆ. ನಂತರ ಭಾರತ ತಂಡದ ಪರ ಅಭಿಷೇಕ್ ಸಿಡಿಸಿದ 75 ರನ್‌ಗಳ ಆಟವಾಡಿ ತಕ್ಕ ಉತ್ತರ ನೀಡಿದರು.
