ಟಾಪ್ 4 ನ್ಯೂಸ್ ಕರ್ನಾಟಕ
-ಹೋರಿ ಹಬ್ಬದಲ್ಲಿ ಹಾರಿ ಹೋಯ್ತು ಮೂರು ಜೀವ…!!
– ಕುಮಟಾ : ಪೊಲೀಸ್ ಚೆಕ್ ಪೋಸ್ಟ್ ಮೇಲೆ ಹರಿದ ಲಾರಿ..!!
– ಯಾದಗಿರಿ : ನವಜಾತ ಶಿಶು ಅದಲು-ಬದಲು
– ಚಿತ್ರದುರ್ಗ: ವಿದ್ಯಾರ್ಥಿಗೆ ಥಳಿಸಿದ್ದ ಶಿಕ್ಷಕ ಅರೆಸ್ಟ್
NAMMUR EXPRESS NEWS
ಹಾವೇರಿ: ಹಾವೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಬುಧವಾರ (ಅ.22) ಹಮ್ಮಿಕೊಂಡಿದ್ದ ‘ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ’ ಹಾಗೂ ಹೋರಿಗಳ ಮೆರವಣಿಗೆ ಸಂದರ್ಭದಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟಿದ್ದಾರೆ. ಹಾವೇರಿಯ ದಾನೇಶ್ವರಿನಗರದ ಚಂದ್ರಶೇಖರ ಕೋಡಿಹಳ್ಳಿ (70), ಹಾವೇರಿ ತಾಲ್ಲೂಕಿನ ದೇವಿಹೊಸೂರಿನ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ (75) ಹಾಗೂ ಹಾನಗಲ್ ತಾಲ್ಲೂಕಿನ ತಿಳವಳ್ಳಿಯ ಭರತ್ ರಾಮಪ್ಪ ಹಿಂಗಮೇರಿ (24) ಮೃತರು. ಹೆಸ್ಕಾಂನ ನಿವೃತ್ತ ನೌಕರ ಚಂದ್ರಶೇಖರ್ ಕೋಡಿಹಳೊ ಅವರು ಹಾವೇರಿಯ ಹಳೇ ಪಿ.ಬಿ.ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಹಾವೇರಿಯ ವೀರಭದ್ರೇಶ್ವರ ದೇವಸ್ಥಾನ ಎದುರು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓಡಿದ ಹೋರಿ, ಹಳೇ ಪಿ.ಬಿ. ರಸ್ತೆಗೆ ಬಂದಿತ್ತು. ಇದೇ ಹೋರಿ, ಚಂದ್ರಶೇಖರ್ ಅವರಿಗೆ ಗುದ್ದಿ ಈ ಅವಘಡ ನಡೆದಿದೆ. ದೇವಿಹೊಸೂರು ಗ್ರಾಮದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಎತ್ತುಗಳನ್ನು ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿದ್ದ ಎತ್ತು ಬೆದರಿ ಹೊಂಡದ ಓಣಿಯಲ್ಲಿರುವ ಮನೆಯ ಕಟ್ಟೆ ಮೇಲೆ ಕುಳಿತಿದ್ದ ಘನಿಸಾಬ ಅವರ ಕುತ್ತಿಗೆ ಮತ್ತು ಎದೆಗೆ ಕೊಂಬಿನಿಂದ ತಿವಿದಿತ್ತು. ಅವರನ್ನು ಚಿಕಿತ್ಸೆಗಾಗಿ ಹಾವೇರಿಯ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
– ಕುಮಟಾ : ಪೊಲೀಸ್ ಚೆಕ್ ಪೋಸ್ಟ್ ಮೇಲೆ ಹರಿದ ಲಾರಿ..!!
ಕುಮಟಾ : ರಾಷ್ಟ್ರೀಯ ಹೆದ್ದಾರಿ 66 ರ ಕುಮಟಾ-ಅಂಕೋಲ ಹೆದ್ದಾರಿಯಲ್ಲಿ ಸರಕು ತುಂಬಿಕೊಂಡು ಬಂದ ಲಾರಿ ನಿಯಂತ್ರಣ ತಪ್ಪಿ ನೇರವಾಗಿ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಹರಿದು ಬಿದ್ದಿದ್ದು, ಚೆಕ್ ಪೋಸ್ಟ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಅತೀ ವೇಗದಲ್ಲಿ ಬಂದ ಲಾರಿ ಚಾಲಕನ ನಿದ್ದೆ ಗಣ್ಣಿನಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದ್ದು, ಚೆಕ್ ಪೋಸ್ಟ್ ಬಳಿಯೇ ಇದ್ದ ಪೊಲೀಸರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ,ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ಪೂರ್ಣ ಗೊಂಡಿಲ್ಲ ದ್ವಿಮುಖ ರಸ್ತೆ ನಿರ್ಮಾಣವಾಗಿದ್ದು ಒಂದು ಭಾಗ ಬಂದ್ ಮಾಡಲಾಗಿದೆ. ಆದರೇ ವೇಗವಾಗಿ ಬರುವ ವಾಹನಗಳಿಗೆ ಈ ರಸ್ತೆಯಲ್ಲಿ ಸಾಗುವಾಗ ಸಮರ್ಪಕ ನಾಮಫಲಕ ಇಲ್ಲದ ಕಾರಣ ಗೊಂದಲಕ್ಕೆ ಒಳಗಾಗುವ ಸವಾರರು ಈ ಭಾಗದಲ್ಲಿ ಹೇಗೆಬೇಕೋ ಹಾಗೆ ನುಗ್ಗುತಿದ್ದಾರೆ. ಹೀಗಾಗಿ ಈ ರೀತಿಯ ಘಟನೆ ನಡೆಯುತಿದ್ದು , ಈ ಅಪಘಾತಗಳಿಗೆ IRB ಕಂಪನಿ ನೇರ ಹೊಣೆ ಎಂಬುದು ಸ್ಥಳೀಯರ ಆರೋಪ. ಸಧ್ಯ ಘಟನೆ ಸಂಬಂಧ ಗೋಕರ್ಣ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
– ಯಾದಗಿರಿ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶು ಅದಲು-ಬದಲು..!!
ಯಾದಗಿರಿ: ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಲ್ಲಿನ ನರ್ಸ್ ನವಜಾತ ಶಿಶುಗಳನ್ನು ಅದಲು-ಬದಲು ಮಾಡಿದ ಆರೋಪ ಕೇಳಿ ಬಂದಿದೆ. ನಗರದ ಮಹಿಳೆಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ರಾತ್ರಿ ಆಕೆಗೆ ಹೆರಿಗೆಯಾಗಿದ್ದು ಹೆಣ್ಣು ಮಗುವಾದರೂ, ಗೀತಾ ಎಂಬ ನರ್ಸ್ ‘ನಿಮಗೆ ಗಂಡು ಮಗು ಜನಿಸಿದೆ’ ಎಂದು ತಿಳಿಸಿದ್ದರು. ಆದರೆ, ತಾಯಿ ಕಾರ್ಡ್‌ನಲ್ಲಿ ಹೆಣ್ಣು ಮಗು ಅಂತ ನಮೂದು ಮಾಡಲಾಗಿತ್ತು. ಬಳಿಕ ಕುಟುಂಬಸ್ಥರು ಜಿಲ್ಲಾ ಸರ್ಜನ್ ಕಚೇರಿಗೆ ಆಗಮಿಸಿ, ದೂರು ನೀಡಿದರು. ಬಳಿಕ ನೈಟ್ ಡ್ಯೂಟಿಯಲ್ಲಿದ್ದ ನರ್ಸ್ ಗೀತಾಳನ್ನು ಕರೆಸಿದ ಜಿಲ್ಲಾ ಸರ್ಜನ್ ವಿಚಾರಣೆ ನಡೆಸಿದಾಗ ಅಜಾಗರೂಕತೆಯಿಂದ ಈ ರೀತಿಯಾಗಿದೆ ಎಂದು ತಿಳಿದು ಬಂದಿತು.
ವಿದ್ಯಾರ್ಥಿಗೆ ಥಳಿಸಿದ್ದ ಶಿಕ್ಷಕ ಅರೆಸ್ಟ್!
ವಿದ್ಯಾರ್ಥಿ ಮೇಲೆ ಮನಸ್ಸೋ ಇಚ್ಛೆ ಥಳಿಸಿ, ಕಾಲಿನಿಂದ ಒದ್ದು, ಅಮಾನವೀಯವಾಗಿ ವರ್ತಿಸಿದ್ದ ಶಿಕ್ಷಕ ಕೊನೆಗೂ ಅರೆಸ್ಟ್ ಆಗಿದ್ದಾನೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ 9 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ ಶಿಕ್ಷಕ ವೀರೇಶ್ ಹೀರೇಮಠ್ ಎಂಬಾತ ತಲೆ, ಬೆನ್ನ ಮೇಲೆ ಹೊಡೆದು, ಕಾಲಿನಿಂದ ಹೀನಾಯವಾಗಿ ಒದ್ದು ರಾಕ್ಷಸನಂತೆ ವರ್ತಿಸಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಸರ್ಕಾರದ ಪ್ರಮುಖರು ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಲಬುರಗಿಯಲ್ಲಿ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಶಿಕ್ಷಕ ಅರೆಸ್ಟ್, ನ್ಯಾಯಾಂಗ ಬಂಧನ
ವೇದಾಧ್ಯಯನ ಶಾಲೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪಿ ಶಿಕ್ಷಕನನ್ನು ಅರೆಸ್ಟ್ ಮಾಡಲಾಗಿದೆ. ಕಲಬುರಗಿಯಲ್ಲಿ ಶಿಕ್ಷಕ ವಿರೇಶ್ ಹೀರೇಮಠ್‌ನನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ನಡೆಸಿ ಚಿತ್ರದುರ್ಗ ಪೊಲೀಸರು, ಆತನನ್ನು ಬಂಧಿಸಿ ನಾಯಕನಹಟ್ಟಿಗೆ ಕರೆತಂದರು. ಬಳಿಕ ಚಳ್ಳಕೆರೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯ್ತು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿ ವೀರೇಶ್ ಹೀರೇಮಠ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಆದೇಶಿಸಿದರು. ಇದೀಗ ಆರೋಪಿಯನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.