Categories
ರಾಜ್ಯ

ತುಮಕೂರು : ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಂದೆಗೆ ಒಂದು ದಿನ ಜೈಲು ಶಿಕ್ಷೆ!

ಟಾಪ್ 4 ನ್ಯೂಸ್ ಕರ್ನಾಟಕ

ತುಮಕೂರು : ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಂದೆಗೆ ಒಂದು ದಿನ ಜೈಲು ಶಿಕ್ಷೆ!
– ದಾವಣಗೆರೆ : ವಿದ್ಯುತ್‌ ಶಾರ್ಟ್‌ ಸರ್ಕ್ಯುಟ್ ನಿಂದ ತಾಯಿ-ಮಗ ಸಾವು..!!
– ಗೋಕಾಕ: ಆಟೋ ರಿಕ್ಷಾದಲ್ಲೇ ನೇಣು ಬಿಗಿದು ಪ್ರೇಮಿಗಳು ಆತ್ಮಹತ್ಯೆ..!!
– ದಾವಣಗೆರೆ : ಕೋರ್ಟ್ ಆವರಣದಲ್ಲೇ ಕೈ ಕೊಯ್ದುಕೊಂಡ ವ್ಯಕ್ತಿ.!

NAMMUR EXPRESS NEWS

ತುಮಕೂರು : ಅಪ್ರಾಪ್ತ ಮಗನಿಗೆ ವಾಹನವನ್ನು ಚಲಾಯಿಸಲು ನೀಡಿದ್ದಕ್ಕೆ ತಂದೆಗೆ ತುಮಕೂರು ಜಿಲ್ಲೆಯ ಗುಬ್ಬಿ ಜೆಎಂಎಫ್‌ಸಿ ನ್ಯಾಯಾಲಯ ₹30000 ದಂಡ ಹಾಗೂ ಒಂದು ದಿನ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಅಕ್ಟೋಬರ್ 31ರಂದು ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನವನ್ನು ತಂದೆ ನೀಡಿದರು. ಆತ ತುಮಕೂರಿನಿಂದ ಚಾಲನೆ ಮಾಡಿಕೊಂಡು ಬರುವಾಗ ರಾತ್ರಿ ಗುಬ್ಬಿಬೈಪಾಸ್‌ನ ಸಿಐಟಿ ಕಾಲೇಜು ಹಿಂಭಾಗ ರಸ್ತೆ ಪಕ್ಕದಲ್ಲಿದ್ದ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೊಡೆದಿದ್ದ. ಈ ಸಂಬಂಧ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಸಂಬಂಧ ನ್ಯಾಯಾಲಯ ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಂದೆಗೆ 1 ದಿನ ಜೈಲು ಶಿಕ್ಷೆ ಮತ್ತು 30000 ರು. ದಂಡ ವಿಧಿಸಿ ತೀರ್ಪು ನೀಡಿದೆ.

– ದಾವಣಗೆರೆ : ವಿದ್ಯುತ್‌ ಶಾರ್ಟ್‌ ಸರ್ಕ್ಯುಟ್ ನಿಂದ ತಾಯಿ-ಮಗ ಸಾವು..!!

ದಾವಣಗೆರೆ: ಕಾಯಿಪೇಟೆಯಲ್ಲಿನ ದೇವನಗರಿ ಗ್ಯಾಸ್ ಏಜೆನ್ಸಿ ಮಾಲಿಕ, ಬಿಜೆಪಿ ಮುಖಂಡ ಎಚ್.ಎಂ.ರುದ್ರಮುನಿಸ್ವಾಮಿ ಅವರ ಮನೆಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯುಟ್‌ನಿಂದ ಇಬ್ಬರು ಮೃತಪಟ್ಟಿದ್ದಾರೆ. ಕಾಯಿಪೇಟೆ ನಿವಾಸಿ ವಿಮಲಾ (75) ಹಾಗೂ ಅವರ ಪುತ್ರ ಕುಮಾರ (35) ಮೃತಪಟ್ಟವರು. ಕುಟುಂಬದ ಇನ್ನೂ ನಾಲ್ವರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜಾನೆ 4 ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕ್ಯುಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಆಗ ಮನೆಯಲ್ಲಿ ಆರು ಜನರಿದ್ದು, ಅವರಲ್ಲಿ ನಾಲ್ಕು ಜನರು ಮನೆಯಿಂದ ಹೊರಬಂದಿದ್ದಾರೆ.
ಒಂದು ರೂಂನಲ್ಲಿ ರುದ್ರಮುನಿಸ್ವಾಮಿ, ಅವರ ಪತ್ನಿ ಇಬ್ಬರು ಮಕ್ಕಳು, ಮತ್ತೊಂದು ರೂಂನಲ್ಲಿ ಪತ್ನಿಯ ತಾಯಿ ವಿಮಲಾ, ಸಹೋದರ ಕುಮಾರ್ ಮಲಗಿದ್ದರು. ಮನೆಯಲ್ಲಿ ಸುಟ್ಟ ವಾಸನೆ ಬಂದಿದೆ ಎಂದು ನೋಡಿದಾಗ ಮನೆಯಲ್ಲಿ ಹೊಗೆ ಆವರಿಸಿದೆ. ರುದ್ರಮುನಿಸ್ವಾಮಿ ಅವರು ಪತ್ನಿ, ಮಕ್ಕಳನ್ನು ಹೊರಗಡೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ರುದ್ರಮುನಿಸ್ವಾಮಿ ಅವರ ಪತ್ನಿಯ ಸಹೋದರ ರೂಂನಿಂದ ಹೊರಬಂದಿದ್ದಾರೆ. ತನ್ನ ತಾಯಿಯನ್ನು ರೂಂನಿಂದ ಹೊರಗೆ ಕರೆತರಲು ಹೋದಾಗ ಅಲ್ಲಿ ಸಿಲುಕಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೊಠಡಿಯಲ್ಲಿ ಸಿಲುಕಿದ್ದ ತಾಯಿ ಮತ್ತು ಮಗನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

– ಗೋಕಾಕ: ಆಟೋ ರಿಕ್ಷಾದಲ್ಲೇ ನೇಣು ಬಿಗಿದು ಪ್ರೇಮಿಗಳು ಆತ್ಮಹತ್ಯೆ..!!

ಗೋಕಾಕ : ವಿವಾಹಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನನೊಂದು ಪ್ರೇಮಿಗಳಿಬ್ಬರೂ ಆಟೋರಿಕ್ಷಾದಲ್ಲಿಯೇ ನೇಣಿಗೆ ಶರಣಾದ ಘಟನೆ ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಸವದತ್ತಿ ತಾಲೂಕಿನ ಮುನ್ನೋಳಿಯ ನಾಗಲಿಂಗ ನಗರದ ನಿವಾಸಿಗಳಾದ ನಾರಾಯಣ ಜಾಧವ(28) ಮತ್ತು ರಂಜಿತಾ ಅಡಿವೆಪ್ಪ ಚೌಬಾರಿ (25) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕಳೆದ ನಾಲ್ಕು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಸ್ವಂತ ಆಟೋ ಓಡಿಸಿಕೊಂಡು ಬದುಕು ಸಾಗಿಸುತ್ತಿದ್ದ ರಾಘವೇಂದ್ರನ ಜತೆ ರಂಜಿತಾ ಪ್ರೀತಿಯಲ್ಲಿದ್ದುದು ಅವರ ಮನೆಯವರಿಗೆ ಸರಿಬಿದ್ದಿರಲಿಲ್ಲ. ಹಾಗಾಗಿಯೆ ವಾರದ ಹಿಂದೆ ಬೇರೊಬ್ಬ ಹುಡುಗನ ಜತೆ ರಂಜಿತಾಳ ಮದುವೆ ನಿಶ್ಚಯ ಮಾಡಲಾಗಿತ್ತು. ಮನೆಯವರ ನಿರ್ಧಾರದಿಂದ ದಿಕ್ಕು ತೋಚದಂತಾದ ಪ್ರೇಮಿಗಳು ಸಾವಿನಲ್ಲಿ ಒಂದಾಗುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಹಾಗಾಗಿಯೇ ಮನೆಯಿಂದ ದೂರ ಆಟೋದಲ್ಲಿಯೇ ಬಂದು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಆದರೊಳಗೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗೋಕಾಕ ಗ್ರಾಮೀಣ ಪಿಎಸ್‌ಐ ಕಿರಣ ಮೋಹಿತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

– ದಾವಣಗೆರೆ : ಕೋರ್ಟ್ ಆವರಣದಲ್ಲೇ ಕೈ ಕೊಯ್ದುಕೊಂಡ ವ್ಯಕ್ತಿ.!

ದಾವಣಗೆರೆ : ಜೈಲಿಗೆ ಕಳಿಸುತ್ತಾರೆಂದು ಹೆದರಿ ಅಣ್ಣಪ್ಪ ನಾಯ್ಕ ಎಂಬಾತ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಕೌಟುಂಬಿಕ ಕಲಹದಲ್ಲಿ ಅಣ್ಣಪ್ಪನಾಯ್ಕ ತಮ್ಮ ಪತ್ನಿಯ ಸಹೋದರ ಹಾಗೂ ಅವರ ತಂದೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಹಲ್ಲೆ ಮಾಡಿದ್ದಕ್ಕಾಗಿ ಪತ್ನಿ ಆಶಾಬಾಯಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ 307 ಕೇಸ್ ದಾಖಲು ಮಾಡಿದ್ದಳು. ಹೀಗಾಗಿ, ಪತಿಯನ್ನು ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಕರುಣೆ ತೋರಿ ಪತ್ನಿ ಆಶಾಬಾಯಿ ಜಾಮೀನು ಕೊಡಿಸಿ ಜೈಲಿನಿಂದ ಪತಿಯನ್ನು ಬಿಡಿಸಿದ್ದರು. ಆದರೆ, ಜಾಮೀನು ಸಿಕ್ಕಿದ ನಂತರ ಮನೆಗೆ ಹೋದ ಪತಿ ಅಣ್ಣಪ್ಪ ನಾಯ್ಕ ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಮತ್ತೊಮ್ಮೆ ದೂರು ನೀಡಿ ಜಾಮೀನು ವಾಪಸ್ ಪಡೆಯಲು ಆಕೆ ನ್ಯಾಯಾಲಯಕ್ಕೆ ಬಂದಿದ್ದರು. ಜಾಮೀನು ವಾಪಸ್ ಪಡೆದರೆ ಮತ್ತೆ ಜೈಲಿಗೆ ಹಾಕುತ್ತಾರೆಂದು ಹೆದರಿ ಅಣ್ಣಪ್ಪನಾಯ್ಕ ಪತ್ನಿ ಬರುತ್ತಿದ್ದಂತೆ ಆಕೆಯ ಮುಂದೆಯೇ ಬ್ಲಡ್‌ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆನ್ನಲಾಗಿದೆ. ಈ ಕುರಿತು ಅಣ್ಣಪ್ಪ ನಾಯ್ಕ ಪ್ರತಿಕ್ರಿಯಿಸಿ. ಅನ್ಯ ಧರ್ಮಕ್ಕೆ ಮತಾಂತರ ಆಗು ಎಂದು ನನಗೆ ಟಾರ್ಚರ್ ಕೊಡ್ತಿದ್ದಾರೆ. ಮನೆಯಲ್ಲಿ ನಮ್ಮ ಧರ್ಮದ ದೇವರ ಫೋಟೊ ತೆಗೆದು ಅನ್ಯ ದೇವರ ಫೋಟೊಗಳನ್ನು ಹಾಕಿದ್ದಾರೆ. ಪ್ರಶ್ನಿಸಿದ್ದಕ್ಕಾಗಿ ವಿಚ್ಛೇದನ ಕೊಡುವುದಾಗಿ ಹೇಳಿ ಕೋರ್ಟ್ ಬಳಿ ಕರೆದುಕೊಂಡು ಬಂದಿದ್ದರು. ಅದಕ್ಕೆ ಕೈ ಕೊಯ್ದುಕೊಂಡಿದ್ದೇನೆ ಎಂದಿದ್ದಾರೆ. ಇದರ ಸಂಬಂಧ ಅಣ್ಣಪ್ಪ ನಾಯ್ಕ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.