Categories
Uncategorized

ಮೋದಿ ಜನಸೇವೆಗೆ 25ರ ಸಂಭ್ರಮ! – ಸೆ.17ರಿಂದ ಅಕ್ಟೋಬರ್ ವರೆಗೆ ದೇಶವ್ಯಾಪಿ ಕಾರ್ಯಕ್ರಮ – ಜಿಲ್ಲಾ ಕೇಂದ್ರಗಳಲ್ಲಿ ಪಾದಯಾತ್ರೆ, ಬೈಕ್ ಮತ್ತು ಸೈಕಲ್ ರಾಲಿ – ಬೆಜೆಪಿಗೆ ಹೊಸ ಜೋಶ್ ನೀಡಲಿದೆ ಈ ಕಾರ್ಯಕ್ರಮ

ನವ ದೆಹಲಿ: ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆದು 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ತಿಂಗಳಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ‘ಸೇವಾ ಸಂಕಲ್ಪ’ ಎನ್ನುವ ಶೀರ್ಷಿಕೆ ಅಡಿಯಲ್ಲಿ ದೇಶವ್ಯಾಪಿಯಾಗಿ ನಡೆಸಲು ಬಿಜೆಪಿ ಪಕ್ಷವು ನಿರ್ಧರಿಸಿದೆ.
ಸೆಪ್ಟೆಂಬರ್ 17ರ ಗುರುವಾರದಂದು ನರೇಂದ್ರ ಮೋದಿ ಅವರ ಜನ್ಮದಿನದಂದು ಚಾಲನೆ ದೊರೆಯಲಿದ್ದು, ಅಕ್ಟೋಬರ್ 7ರವರೆಗೆ ನಿರಂತರವಾಗಿ ಕಾರ್ಯಕ್ರಮಗಳು ನಡೆಯಲಿವೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.
ಅಕ್ಟೋಬರ್ 7 ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 25 ವರ್ಷಗಳಾಗುತ್ತವೆ. ಅಂದರೆ 2001ರ ಅಕ್ಟೋಬರ್ 7ರಂದು ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರವನ್ನು ಸ್ವೀಕರಿಸಿದ್ದರು. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನವೀನ್ ಅವರು ಸುದ್ಧಿಗಾರರೊಂದಿಗೆ ಮಾತನಾಡಿದ್ದು “ಸೆಪ್ಟೆಂಬರ್ 17ರ ಗುರುವಾರದಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರ ಅಡಿಯಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳು ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನಕ್ಕೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ದೀಪವನ್ನು ಬೆಳಗಿಸಲಿದ್ದಾರೆ.

ಜಿಲ್ಲಾ ಕೇಂದ್ರಗಳಲ್ಲಿ ‘ಸೇವಾ ಜ್ಯೋತಿ ಕಲಶ ಯಾತ್ರೆ’

ಜಿಲ್ಲಾ ಕೇಂದ್ರಗಳಲ್ಲಿ ‘ಸೇವಾ ಜ್ಯೋತಿ ಕಲಶ ಯಾತ್ರೆ’ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಇದರ ಅಂಗವಾಗಿ ಪಾದಯಾತ್ರೆ, ಬೈಕ್ ಮತ್ತು ಸೈಕಲ್ ರಾಲಿ ನಡೆಯಲಿವೆ. ಜಿಲ್ಲಾ ಕೇಂದ್ರಗಳ ಸುಮಾರು 1೦೦೦ ಕಡೆಗಳಲ್ಲಿ ಅಕ್ಟೋಬರ್ 7ರ ಬುಧವಾರದಂದು ವಿಕಸಿತ ಭಾರತ 2೦47ಕ್ಕಾಗಿ ಸಾಮೂಹಿಕ ಸಂಕಲ್ಪವನ್ನು ಕೂಡ ಆಯೋಜಿಸಲಾಗಿದೆ. ಅಷ್ಟೇ ಅಲ್ಲದೆ ಸೆಪ್ಟೆಂಬರ್ 17ರ ಗುರುವಾರದಿಂದ ಅಕ್ಟೋಬರ್ 7ರ ಬುಧವಾರದವರೆಗೆ ಎಲ್ಲಾ ಶಾಲೆಗಳಲ್ಲಿ ಚಿತ್ರಕಲೆ, ಭಾಷಣಗಳನ್ನು ಸಹ ನಡೆಸಲಾಗುವುದು. ಇದರೊಂದಿಗೆ ‘ನಮೋ ಸೇವೆ ಹೇಳಿದ ಕಥೆಗಳು’ ಅಡಿಯಲ್ಲಿ ಸರ್ಕಾರಿ ಕಲ್ಯಾಣ ಯೋಜನೆಗಳ ಲಾಭ ಪಡೆದು ಬದುಕು ಬದಲಿಸಿಕೊಂಡವರ ಕಥೆಗಳನ್ನು ಸಂಗೀತ, ನಾಟಕ ಮತ್ತು ಬೀದಿ ನಾಟಕಗಳ ಮೂಲಕ ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗುವುದು.‌ ಯುವಕರ ನೇತೃತ್ವದಲ್ಲಿ ಎರಡು ಸೇವಾ ಯಾತ್ರೆಗಳನ್ನು ಮೋದಿ ಅವರ ಹುಟ್ಟೂರು ವಡೋದರದಿಂದ ಕರ್ಮಭೂಮಿಯಾದ ವಾರಣಾಸಿಯವರೆಗೆ ಏರ್ಪಡಿಸಲು ನಿರ್ಧರಿಸಲಾಗಿದೆ. ಸುಮಾರು 1000 ಜನ ಯುವಕರು ಪಾಲ್ಗೊಳ್ಳಲಿದ್ದಾರೆ. 20 ದಿನಗಳ ಈ ಯಾತ್ರೆಯು 10 ರಾಜ್ಯಗಳ ಮೂಲಕ ಸಂಚರಿಸಲಿದೆ” ಎಂದು ಕಾರ್ಯಕ್ರಮದ ರೂಪುರೇಷೆಯ ಕುರಿತು ತಿಳಿಸಿದ್ದಾರೆ.