ಬೆಂಗಳೂರು: ಇ-ಕೆವೈಸಿ ದೃಢೀಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ಗಡುವನ್ನು ನವೆಂಬರ್ 10ರ ಮಂಗಳವಾರದವರೆಗೆ ವಿಸ್ತರಿಸಲಾಗಿದೆ. ಅದಕ್ಕೂ ಮೊದಲು ಅಕ್ಟೋಬರ್ 20ರ ಮಂಗಳವಾರ ಕೊನೆಯ ದಿನವೆಂದು ಹೇಳಲಾಗಿತ್ತು. ಇ-ಕೆವೈಸಿ ಮಾಡಿಸಿದ 1.15.87.298 ಫಲಾನುಭವಿಗಳ ಜೊತೆಗೆ, ಇದುವರೆಗೂ ಒಂದು ಬಾರಿಯೂ ಇ-ಕೆವೈಸಿ ಮಾಡಿಸದ 3.82 ಲಕ್ಷಕ್ಕೂ ಹೆಚ್ಚಿನ ಹಾಗೂ ಐದು ವರ್ಷ ಮೇಲ್ಪಟ್ಟು ಇ-ಕೆವೈಸಿ ಮಾಡಿಸಿದ 54.27 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳು ಇ-ಕೆವೈಸಿ ಅನ್ನು ದೃಢಪಡಿಸಬೇಕಿದೆ ಎಂದು ಆಹಾರ ಇಲಾಖೆಯು ತಿಳಿಸಿದೆ.
ಸಾರ್ವಜನಿಕರು ‘ಅನ್ನಸೇವೆ’ ಮೊಬೈಲ್ ಅಪ್ಲಿಕೇಶನ್ ಮುಖಾಂತರ ಖುದ್ದಾಗಿ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ‘ಆಹಾರ’ ತಂತ್ರಾಂಶದ ಮೂಲಕ ಇ-ಕೆವೈಸಿ ಅನ್ನು ಮಾಡಿಸಬೇಕು, ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆಯು ಸ್ಪಷ್ಟಪಡಿಸಿದೆ. ಕರ್ನಾಟಕ ಮೂಲದ ಶಿಕ್ಷಣ, ಉದ್ಯೋಗದ ನಿಮಿತ್ತ ಹೊರರಾಜ್ಯಗಳಲ್ಲಿ ವಾಸವಾಗಿರುವ ಕರ್ನಾಟಕ ಮೂಲದ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅನುಕೂಲವಾಗಲೆಂದು ‘ಅನ್ನ ಸೇವೆ’ ಆ್ಯಪ್ ಅನ್ನು ಬಿಡುಗಡೆಗೊಳಿಸಲಾಗಿದ್ದು, ಇದನ್ನು ದೇಶಾದ್ಯಂತ ವಿಸ್ತರಿಸಲಾಗಿದೆ. ಹೊರರಾಜ್ಯಗಳಲ್ಲಿ ವಾಸವಾಗಿರುವ ಕನ್ನಡಿಗರು ಅಂದರೆ ರಾಜ್ಯದ ಪಡಿತರ ಚೀಟಿದಾರರು ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಇ-ಕೆವೈಸಿ ಅನ್ನು ಪೂರ್ಣಗೊಳಿಸುವಂತೆ ಆಹಾರ ಇಲಾಖೆಯು ವಿನಂತಿಸಿಕೊಂಡಿದೆ.
– ಬಿಪಿಎಲ್ ಕಾರ್ಡ್ ಆದಾಯದ ಮಿತಿ 3 ಲಕ್ಷಕ್ಕೆ ಏರಿಕೆ
ಬೆಂಗಳೂರು: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ವಿಶೇಷ ಸುದ್ಧಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಪಡೆಯಲು ಅಗತ್ಯವಾಗಿರುವಂತಹ ಆದಾಯದ ಮಿತಿಯನ್ನು 1.20 ಲಕ್ಷದಿಂದ 3ಲಕ್ಷಕ್ಕೆ ಹೆಚ್ಚಿಸುವ ನಿರ್ಧಾರವನ್ನು ಕರ್ನಾಟಕ ಆಡಳಿತಾತ್ಮಕ ಸುಧಾರಣೆ ಆಯೋಗ-2ರ ಶಿಫಾರಸಿನ ಮೇರೆಗೆ ಕೈಗೊಂಡಿದೆ. ಒಂದೆಡೆ ಆದಾಯದ ಮಿತಿಯನ್ನು 3 ಲಕ್ಷಕ್ಕೆ ಸಡಿಲಗೊಳಿಸಲಾಗಿದ್ದರೂ, ಅನರ್ಹರನ್ನು ತಡೆಗಟ್ಟುವ ಭೌತಿಕ ಮಾನದಂಡಗಳನ್ನು ಸರ್ಕಾರವು ಕಟ್ಟುನಿಟ್ಟಾಗಿ ಮುಂದುವರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕುಟುಂಬದಲ್ಲಿ ಯಾವುದೇ ಸದಸ್ಯರು ತಮ್ಮ ಸ್ವಂತ ಬಳಕೆಗೆ ಕಾರು ಅಥವಾ ಯಾವುದೇ ನಾಲ್ಕು ಚಕ್ರದ ವಾಹನವನ್ನು ಹೊಂದಿದ್ದಾದಲ್ಲಿ ಅಂತಹವರು ಬಿಪಿಎಲ್ ಪಡಿತರ ಚೀಟಿಗೆ ಅನರ್ಹರಾಗಿರುತ್ತಾರೆ. ಅಲ್ಲದೆ ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಬಳಸುವಂತಹ ಆಟೋ, ಟ್ಯಾಕ್ಸಿ ಮತ್ತು ವಾಣಿಜ್ಯ ವಾಹನಗಳಿಗೆ ನಿಯಮಾನುಸಾರವಾಗಿ ಈ ವಿಚಾರದಲ್ಲಿ ವಿನಾಯಿತಿಯನ್ನು ನೀಡಲಾಗುತ್ತದೆ. ಹಾಗೆಯೇ ಕುಟುಂಬದ ಯಾವುದೇ ಸದಸ್ಯರು ಆದಾಯ ತೆರಿಗೆ ಅಥವಾ ಜಿಎಸ್ಟಿ ಅನ್ನು ಪಾವತಿಸುತ್ತಿದ್ದಲ್ಲಿ ಅಂತಹವರಿಗೂ ಬಿಪಿಎಲ್ ಪಡಿತರ ಚೀಟಿ ಸೌಲಭ್ಯ ದೊರೆಯುವುದಿಲ್ಲ. ಇದರೊಂದಿಗೆ ಕೇಂದ್ರ, ರಾಜ್ಯ ಸರ್ಕಾರಿ ನೌಕರರು, ಅರೆ ಸರ್ಕಾರಿ ಹಾಗೂ ಪೀಂಚಣಿದಾರರು, ಸರ್ಕಾರ ನಿಗದಿಪಡಿಸಿರುವಂತಹ ಮಿತಿಗಿಂತ ಹೆಚ್ಚಿನ ಜಮೀನು ಅಥವಾ ನಗರ ಪ್ರದೇಶಗಳಲ್ಲಿ ವಿಸ್ತಾರವಾದ ಸ್ವಂತ ಮನೆ, ವಾಣಿಜ್ಯ ಮಳಿಗೆಯನ್ನು ಹೊಂದಿರುವವರು ಕೂಡ ಬಿಪಿಎಲ್ ಪಡಿತರ ಚೀಟಿಗೆ ಅನರ್ಹರಾಗಿರುತ್ತಾರೆ. ಆದರೆ, ಪಡಿತರ ಚೀಟಿಗಳ ಪರಿಶೀಲನೆಯ ಸಂದರ್ಭದಲ್ಲಿ ಆದಾಯದ ಮಾನದಂಡದ ಕಾರಣಕ್ಕಾಗಿ ಯಾವುದೇ ಬಿಪಿಎಲ್ ಪಡಿತರ ಚೀಟಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸ್ಪಷ್ಟಪಡಿಸಿದ್ದು, ಇದರ ಬದಲಿಗೆ ಅನರ್ಹ ಅಥವಾ ಮಾನದಂಡಗಳನ್ನು ಮೀರಿರುವಂತಹ ಚೀಟಿಗಳನ್ನು ತಾತ್ಕಾಲಿಕವಾಗಿ ಎಪಿಎಲ್ ಪಡಿತರ ಚೀಟಿಗೆ ವರ್ಗಾಯಿಸಲಾಗುತ್ತದೆ ಎಂದು ಈ ಮೂಲಕ ತಿಳಿಸಲಾಗಿದೆ. ಈಗಾಗಲೇ ಹೊಸ ಮಾರ್ಗಸೂಚಿಗಳು ಮತ್ತು ಸಚಿವ ಸಂಪುಟದ ಅಧಿಕೃತ ಅನುಮೋದನೆಯ ಪ್ರಕ್ರಿಯೆಗಳು ಅಂತಿಮ ಹಂತವನ್ನು ತಲುಪಿದ್ದು, ಅತಿ ಶೀಘ್ರದಲ್ಲಿಯೇ ಈ ಹೊಸ ನಿಯಮಗಳು ಸಂಪೂರ್ಣವಾಗಿ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.