ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿ ನೀತಿಯನ್ನು ವಿರೋಧಿಸಿ ಸಹಕಾರ ನಾಯಕರು ಆದ ಡಾ.ಆರ್ ಎಂ ಮಂಜುನಾಥಗೌಡ ನೇತೃತ್ವದಲ್ಲಿ ಕಾರಣಗಿರಿಯಿಂದ ಹೊಸನಗರದವರೆಗೆ ಪಾದಯಾತ್ರೆಗೆ ಭಾರೀ ಜನ ಸ್ಪಂದನೆ ವ್ಯಕ್ತವಾಗಿದೆ.
ಪ್ರತಿಭಟನೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ,ಎಂಎಡಿಬಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ ಹಲವಾರು ನಾಯಕರು ಭಾಗಿಯಾದರು. ಮಲೆನಾಡಿನ ಈ ಜ್ವಲoತ ಸಮಸ್ಯೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿ ಸೂಚನೆಯನ್ನು ಕುರಿತು ವಿರೋಧ ವ್ಯಕ್ತಪಡಿಸಿ ಹೊಸನಗರ ತಾಲ್ಲೂಕು ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಈ ಪ್ರತಿಭಟನೆಗೆ ಕರೆ ನೀಡಿತ್ತು. ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಶಿವಮೊಗ್ಗದ ಅಧ್ಯಕ್ಷರಾದ ಆರ್.ಎಂ. ಮಂಜುನಾಥಗೌಡ ಮತ್ತು ಸಂಚಾಲಕರಾದ ಬಿ.ಆರ್. ಜಯಂತ್ ಅವರ ನೇತೃತ್ವದಲ್ಲಿ ಮಲೆನಾಡು ಪ್ರದೇಶ ಮತ್ತು ರೈತರ ರಕ್ಷಣೆಯನ್ನು ಒಳಗೊಂಡಂತೆ ಹಲವಾರು ಅಂಶಗಳನ್ನು ಆಧರಿಸಿ ಕಾರಣಗಿರಿ ಶ್ರೀಸಿದ್ಧಿವಿನಾಯಕ ದೇವಸ್ಥಾನದಿಂದ ಪಾದಯಾತ್ರೆ ಮತ್ತು ಬಹಿರಂಗ ಸಭೆ ನಡೆಯಿತು. ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿ, ಕಸ್ತೂರಿ ರಂಗನ್ ವರದಿ ಜಾರಿಯಿಂದ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಗಟ್ಟಿ, ಮಲೆನಾಡಿನ ಹಿತರಕ್ಷಣೆಯನ್ನು ಕಾಪಾಡಬೇಕೆಂದು ಕರೆ ನೀಡಲಾಯಿತು
ಪ್ರಮುಖರಾದ ಕಲಗೋಡು ರತ್ನಾಕರ್, ವಿದ್ಯಾಧರ ಗುರುಶಕ್ತಿ, ಚಂದ್ರ ಮೌಳಿ, ಶ್ವೇತಾ ಬಂಡಿ, ಸುಬ್ರಮಣ್ಯ ಮಾಸ್ತಿಕಟ್ಟೆ, ಮುರಳಿಧರ್ ಸೇರಿ ಅನೇಕರು ಹಾಜರಿದ್ದರು.
ವಿಜಯೇಂದ್ರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಪ್ರಮುಖರ ಸಭೆ
ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಕರಡು ಜಾರಿ ಹಾಗೂ ಅದರಿಂದ ಮಲೆನಾಡು ಭಾಗದ ಜನರ ಮೇಲಾಗುವ ಪರಿಣಾಮಗಳ ಕುರಿತು, ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಶಿವಮೊಗ್ಗ ವಿಭಾಗ ಮಟ್ಟದ (ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳು) ಪಕ್ಷದ ಪ್ರಮುಖರ ವಿಶೇಷ ಸಭೆ ನಡೆಯಿತು.
ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಜೊತೆಗೆ ಮಲೆನಾಡಿನ ಜನರ ಜೀವನೋಪಾಯ, ಮೂಲಭೂತ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ಕಾಯುವುದು ನಮ್ಮ ಮೊದಲ ಆದ್ಯತೆಯಾಗಿದೆ. ಪರಿಸರ ರಕ್ಷಣೆ ಮತ್ತು ಜನರ ಕಲ್ಯಾಣ — ಎರಡಕ್ಕೂ ಸಮತೋಲನದ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಕ್ಷ ಬದ್ಧವಾಗಿದೆ ಎಂದು ನಾಯಕರು ಹೇಳಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿಗೆ ಡಾ.ಜಿ.ಪರಮೇಶ್ವರ ತೀವ್ರ ಖಂಡನೆ
ಬೆಂಗಳೂರು: ಪಶ್ಚಿಮ ಘಟ್ಟಗಳ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ ಅಧಿಸೂಚನೆಯನ್ನು ರಾಜ್ಯದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು “ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ 1449 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳು ಎಂದು ಘೋಷಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯು ರಾಜ್ಯದ ಲಕ್ಷಾಂತರ ಕುಟುಂಬಗಳಲ್ಲಿ ಗಂಭೀರ ರೀತಿಯ ಆತಂಕವನ್ನು ಮೂಡಿಸಿದೆ. ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಈ ನಿರ್ಧಾರದ ಬಗ್ಗೆ ಚರ್ಚಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ವಿಧಾನಮಂಡಲದ ಒಂದು ದಿನದ ವಿಶೇಷ ಅಧಿಸೂಚನೆಯನ್ನು ಕರೆಯಲು ಸರ್ಕಾರವು ನಿರ್ಧರಿಸಿದೆ. ಶತಮಾನಗಳಿಂದಲೂ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಜನರು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಾ ಪರಿಸರವನ್ನು ಗೌರವಿಸುವ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಮಾನವ ಮತ್ತು ಪ್ರಕೃತಿ ನಡುವಿನ ಈ ನಿಕಟ ಬಾಂಧವ್ಯವೇ ಪಶ್ಚಿಮ ಘಟ್ಟಗಳ ಜೀವಂತಿಕೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ. ಇಂತಹ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಏಕಾಏಕಿ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುವುದು ಜನವಿರೋಧಿ ಹಾಗೂ ಅಮಾನವೀಯ ಘಟನೆಯಾಗಿದೆ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗಳನ್ನು ಕರ್ನಾಟಕ ಸರ್ಕಾರವು ಇದುವರೆಗೆ ಆರು ಬಾರಿ ತಿರಸ್ಕರಿಸಿದೆ ಮತ್ತು ತನ್ನ ಸ್ಪಷ್ಟವಾದ ನಿಲುವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ ಎನ್ನಲಾಗಿದೆ. ಹೀಗಿದ್ದರೂ ಕೂಡ ರಾಜ್ಯ ಸರ್ಕಾರದ ಕಳಕಳಿಯನ್ನು ಲೆಕ್ಕಿಸದೆ ತನ್ನ ನಿರ್ಧಾರವನ್ನು ಕರ್ನಾಟಕದ ಜನರ ಮೇಲೆ ಹೇರಲು ಕೇಂದ್ರ ಸರ್ಕಾರವು ಪದೇಪದೇ ಪ್ರಯತ್ನಿಸುತ್ತಿರುವುದು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಅಲ್ಲದೆ ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರವು ರಾಜ್ಯದ ಜನರ ಬದುಕು ಮತ್ತು ಜೀವನೋಪಾಯದ ಮೇಲೆ ನೇರ ಪರಿಣಾಮ ಬೀರುವ ಅನ್ಯಾಯದ ಹಾದಿ ಹಿಡಿದಿದೆ. ಇದು ಪಕ್ಷ ಸಿದ್ಧಾಂತಗಳು ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ ವಿಷಯವಾಗಿದೆ. ಜನರ ಬದುಕು ಮತ್ತು ಜೀವನೋಪಾಯಕ್ಕಿಂತ ದೊಡ್ಡ ಸಿದ್ಧಾಂತ ಯಾವುದೂ ಇರಲು ಸಾಧ್ಯವಿಲ್ಲ ಎಂದು ನಾನು ಬಲವಾಗಿ ನಂಬಿದ್ದೇನೆ ಎಂದು ಡಾ.ಜಿ.ಪರಮೇಶ್ವರ್ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವರದಿ ಜಾರಿಯಾಗದಂತೆ ಸದನದಲ್ಲಿ ರಾಜ್ಯ ಸರ್ಕಾರವು ಕೈಗೊಳ್ಳುವ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕರು ಬೆಂಬಲ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.