Categories
ಇತರೆ ಸುದ್ದಿ ಕೃಷಿ

ಈರುಳ್ಳಿ, ಸಕ್ಕರೆ, ಬೆಲ್ಲ ಈಗ ಮುಟ್ಟoಗಿಲ್ಲ! – ಬೆಲೆಯಲ್ಲಿ ದಿಢೀರ್ ಏರಿಕೆ: ಜನತೆ ಕಂಗಾಲು – ಹಬ್ಬದ ಸಂದರ್ಭದಲ್ಲಿ ಜನತೆಗೆ ಬೆಲೆ ಏರಿಕೆ ಶಾಕ್ – ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಶುರು

ನವದೆಹಲಿ: ಈರುಳ್ಳಿ ಬೆಲೆಯಲ್ಲಿ ಏಕಾಏಕಿ ಏರಿಕೆ ಕಂಡುಬಂದಿದ್ದು, ಕಳೆದ ವರ್ಷಕ್ಕಿಂತ ಶೇಕಡ 45ರಷ್ಟು ಹೆಚ್ಚಳಗೊಂಡಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಒಂದು ಕೆಜಿ ಈರುಳ್ಳಿಯು 45 ರಿಂದ 52 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದರೆ, ದೆಹಲಿಯಲ್ಲಿ ಇದರ ಬೆಲೆ 35 ರಿಂದ 65ರೂಪಾಯಿಗೆ, ಚೆನ್ನೈನಲ್ಲಿ 33 ರೂಪಾಯಿಗಳಿಂದ 58 ರೂಪಾಯಿಗೆ ತಲುಪಿದೆ. ಮಹಾರಾಷ್ಟ್ರದಲ್ಲಿ ಖಾರಿಫ್ ಬೆಳೆ ಉತ್ಪಾದನೆಯಲ್ಲಿನ ಕುಸಿತ ಮತ್ತು ಹಬ್ಬದ ಸಮಯವಾದ್ದರಿಂದ ಬೇಡಿಕೆ ಹೆಚ್ಚಳಗೊಂಡಿರುವುದೇ ಬೆಲೆ ಅಧಿಕಗೊಳ್ಳಲು ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಮಹತ್ವದಾಯಕ ನಿರ್ಣಯವನ್ನು ಕೈಗೊಂಡಿದ್ದು, ತನ್ನ ಬಳಿ ಇರುವ ಬಫರ್ ಶೇಖರಣೆಯಿಂದ ಈರುಳ್ಳಿಗಳನ್ನು ಪ್ರಮುಖ ನಗರಗಳಿಗೆ ಸಾಗಿಸಲು ‘ಕಾಂಡಾ ಎಕ್ಸ್ ಪ್ರೆಸ್ ‘ ರೈಲು ಸೇವೆಯನ್ನು ಸೋಮವಾರದಿಂದ ಆರಂಭಿಸಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.

ಹಬ್ಬದ ಸಂದರ್ಭದಲ್ಲಿ ಜನತೆಗೆ ಶಾಕ್

ಬೆಂಗಳೂರು: ಶ್ರಾವಣ ಮಾಸದ ಹಬ್ಬಗಳ ಸಂಭ್ರಮದಲ್ಲಿರುವ ಸಾರ್ವಜನಿಕರಿಗೆ ಸಿಹಿಯ ಬದಲಿಗೆ ಕಹಿಯನ್ನು ನೀಡುವಂತಹ ವರದಿಯೊಂದು ಹೊರಬಿದ್ದಿದೆ. ಈಗಾಗಲೇ ಹಲವಾರು ಸರಕು ಸಾಮಗ್ರಿಗಳ ಬೆಲೆ ಏರಿಕೆಯ ಚಿಂತೆಯಲ್ಲಿರುವ ಜನರಿಗೆ, ಹಬ್ಬದ ಸಂದರ್ಭದಲ್ಲಿ ಸಿಹಿ ತಿನಿಸುಗಳನ್ನು ತಯಾರಿಸಲು ಅಗತ್ಯವಾಗಿ ಬೇಕಾಗಿರುವ ಬೆಲ್ಲ ಮತ್ತು ಸಕ್ಕರೆಯಲ್ಲೂ ಬೆಲೆಯನ್ನು ಏರಿಸಿರುವುದು ಮತ್ತೊಂದು ರೀತಿಯ ತಲೆನೋವಾಗಿ ಪರಿಣಮಿಸಿದೆ. ಮಾಹಿತಿಯ ಪ್ರಕಾರ ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಕೆಜಿಗೆ 50 ರಿಂದ 55 ರೂಪಾಯಿಯಿಂದ 70 ರಿಂದ 75 ರೂಪಾಯಿಗಳಿಗೆ ತಲುಪಿದೆ. ಬೆಲ್ಲದ ದರವು ಕೂಡ ಕ್ವಿಂಟಾಲ್ ಗೆ 4500ರೂಪಾಯಿಗಳಿಂದ 6500 ರಿಂದ 7000 ರೂಪಾಯಿಗಳಿಗೆ ಏರಿಕೆ ಕಂಡಿದೆ. ಇದರಿಂದಾಗಿ ಕೇವಲ ಗ್ರಾಹಕರಿಗಷ್ಟೇ ಅಲ್ಲದೆ ವ್ಯಾಪಾರಿಗಳಲ್ಲೂ ಆತಂಕವನ್ನುಂಟು ಮಾಡಿದೆ. ಅಲ್ಲದೆ ಸಕ್ಕರೆ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬರಲು ಎಥೆನಾಲ್ ಉತ್ಪಾದನೆಯೇ ಮುಖ್ಯ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಆರೇಳು ತಿಂಗಳಿನಿಂದ ಮಳೆಯು ಸಮರ್ಪಕವಾಗಿ ಸುರಿಯದೆ ಕಬ್ಬಿನ ಗದ್ದೆಗಳು ಒಣಗಿವೆ.‌ ನೀರಿನ ಕೊರತೆಯಿಂದಾಗಿ ಕಬ್ಬಿನ ಇಳುವರಿಯಲ್ಲಿ ಸುಮಾರು ಅರ್ಧದಷ್ಟು ಕಡಿಮೆಗೊಂಡಿರುವುದರಿಂದ ಗಾಣಗಳಲ್ಲಿ ಬೆಲ್ಲದ ಉತ್ಪಾದನೆಯಲ್ಲಿ ಕುಸಿತ ಉಂಟಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಬರುವ ಸರಕಿನ ಪ್ರಮಾಣದಲ್ಲೂ ಕೊರತೆ ಉಂಟಾಗಿರುವುದರಿಂದ ಈ ದಿಢೀರ್ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ. ಮೊದಲು 10 ರಿಂದ 12 ಲಾರಿಗಳಷ್ಟು ಬೆಲ್ಲದ ಪೂರೈಕೆಯಾಗುತ್ತಿತ್ತು ಈಗ ಅದರ ಅರ್ಧದಷ್ಟು ಕೂಡ ಲಭ್ಯವಾಗುತ್ತಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ. ಮಾರುಕಟ್ಟೆ ಇತಿಹಾಸದಲ್ಲೇ ಈ ಪ್ರಮಾಣದ ಬೆಲೆ ಏರಿಕೆಯನ್ನು ಎಂದೂ ಕಂಡಿರಲಿಲ್ಲ ಎನ್ನುತ್ತಿದ್ದಾರೆ ವ್ಯಾಪಾರಸ್ಥರು. ಮುಂದೆ ಬರುವ ಹಬ್ಬದ ದಿನಗಳ ಸಂದರ್ಭದಲ್ಲಿ ಇದರ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ