ತೀರ್ಥಹಳ್ಳಿಯ ಅದ್ಧೂರಿ ಮಕ್ಕಳ ಸಾಹಿತ್ಯ ಸಮ್ಮೇಳನ
– ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಯಶಸ್ವಿ!
– ಅಚ್ಚುಕಟ್ಟಾದ ನಿರ್ವಹಣೆ- ಎಲ್ಲರ ಪ್ರಶಂಸೆ!
– ಸಾಧಕ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಕುಶಾವತಿ ಪಾರ್ಕಿನಿಂದ ಮೆರವಣಿಗೆಯ ಮೂಲಕ ಆರಂಭವಾಗಿದ್ದು, ತಾಯಿ ಭುವನೇಶ್ವರಿಯ ಮೆರವಣಿಗೆಯಲ್ಲಿ ಸಾವಿರಾರು ಮಕ್ಕಳು ಮತ್ತು ಕಾರ್ಯಕ್ರಮದ ಸರ್ವಾಧ್ಯಕ್ಷರು ಮತ್ತು ಉದ್ಘಾಟಕರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತ ಮಾಡಲಾಯಿತು. ಯಕ್ಷಗಾನ, ಚದ್ಮ ವೇಷಧಾರಿಗಳು, ಟ್ಯಾಬ್ಲೋ ಹಾಗೂ ಚಂಡೆ ವಾದ್ಯದೊಂದಿಗೆ, ಅದ್ಧೂರಿಯ ಮೆರವಣಿಗೆ ಮೂಲಕ ಸೊಪ್ಪುಗುಡ್ಡೆ ಗೋಪಾಲಗೌಡ ರಂಗಮಂದಿರಕ್ಕೆ ಕರೆತರಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ನಾಡಗೀತೆ ಹಾಡಿದ ಬಳಿಕ ಸಮ್ಮೇಳನದ ಉದ್ಘಾಟಕರಾದ ಕುಮಾರಿ ರಜತಾ ಡಿ. ಗಣ್ಯರೊಂದಿಗೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಸಮ್ಮೇಳವನ್ನು ಉದ್ಘಾಟಿಸಿದ ಡಿ.ರಜತಾ ಮಾತನಾಡಿ, ‘ನಾನು ಪ್ರಾಥಮಿಕ ತರಗತಿಯನ್ನು ಕನ್ನಡದಲ್ಲಿ ವ್ಯಾಸಂಗ ಮಾಡಿದವಳು.
ಹೃದಯದಿಂದ ಮೂಡುವ ಸಾಹಿತ್ಯ ಸಜ್ಜನ ನಡುವಳಿಕೆಯ ಮಾರ್ಗದರ್ಶನದೊಂದಿಗೆ ಸಾಂತ್ವನವನ್ನು ನೀಡುತ್ತದೆ’ ಎಂದು ಹೇಳಿದ್ದಾರೆ. ಸರ್ವಾಧ್ಯಕ್ಷರಾದ ಕುಮಾರಿ ಸಾನಿಕ ಎಂ ಹೆಗಡೆ. ಮಾತನಾಡಿ ‘ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯಕ್ಕೆ ಸರಿಸಾಟಿಯಾಗಿ ನಿಲ್ಲುವಷ್ಟು ಕನ್ನಡ ಭಾಷೆ ಸಮರ್ಥವಾಗಿದ್ದರು ಪರಭಾಷೆಯ ವ್ಯಾಮೋಹದಿಂದ ಕನ್ನಡಿಗರಾದ ನಾವುಗಳು ನಮ್ಮ ಮಾತೃ ಭಾಷೆಯನ್ನೇ ಕಡೆಗಾಣಿಸುವ ಮನೋಭಾವವನ್ನು ಹೊಂದಿರುವುದು ಬೇಸರದ ಸಂಗತಿಯಾಗಿದೆ. ಕನ್ನಡಕ್ಕೆ ಎರಡು ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟಿರುವ ಕುವೆಂಪು, ಅನಂತಮೂರ್ತಿ ಜನಿಸಿದ ಈ ನೆಲದಲ್ಲಿ ಬದುಕುತ್ತಿರುವ ನಮಗೆ ಸಾಹಿತ್ಯಾಭಿಮಾನ ಹೊಂದಿದ ವಾತಾವರಣ ಬೇರೆಲ್ಲಿ ಸಿಗಬಹುದು?’ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ ಕನ್ನಡ ಸಾಹಿತ್ಯ ಕ್ಷೇತ್ರದ ಮಹಾನ್ ವ್ಯಕ್ತಿಗಳು ಜನಿಸಿದ ಈ ಮಣ್ಣಿನಲ್ಲಿ ವಿಶೇಷ ಶಕ್ತಿ ಇದೆ. ಮಕ್ಕಳು ಅಂಕಗಳಿಸುವ ಒಂದೇ ಉದ್ದೇಶಕ್ಕಿಂತ ಈ ಎಳೆಯ ಪ್ರತಿಭೆಗಳಲ್ಲಿರುವ ಸೃಜನಶೀಲತೆಯನ್ನು ಉದ್ದೀಪನ ಗೊಳಿಸುವ ನಿಟ್ಟಿನಲ್ಲಿ ಇಂತಹ ಸಮ್ಮೇಳನವು ಪೂರಕವಾಗುತ್ತದೆ ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್ ಮಾತನಾಡಿ ಮಕ್ಕಳಿಗೆ ಶುಭ ಕೋರಿದರು.
ತಹಶಿಲ್ದಾರ್ ಜಕ್ಕಣ್ಣನವರ್ ಮತ್ತು ತಾಲೂಕು ಕಾರ್ಯನಿರ್ವಹಣಾಧಿಕಾರಿಯು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮ್ಮೇಳನ ಉದ್ಘಾಟನೆ ಬಳಿಕ, ಕಾವ್ಯ ಕಲರವ, ಕಥಾಗೋಷ್ಠಿ,ಮತ್ತು ಪ್ರಬಂಧ ಗೋಷ್ಠಿ ಹೀಗೆ ಮೂರು ಗೋಷ್ಠಿಗಳು ನಡೆದವು. ಇವುಗಳ ಮಧ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ನಡೆದಿದ್ದು ಮನ ಮುದಗೊಳಿಸಿದವು. ಸಮಾರೋಪ ಸಮಾರಂಭವನ್ನು ಸರ್ವಾಧ್ಯಕ್ಷರಾದ ಕುಮಾರಿ ಸಾನಿಕ ಎಂ ಹೆಗಡೆ ಮತ್ತು ಅಧ್ಯಕ್ಷರಾದ ಕುಮಾರ್ ಪ್ರೀತಮ್ ನಡೆಸಿಕೊಟ್ಟರು. ಗೋಷ್ಠಿಯಲ್ಲಿ ಆಯ್ದ ಮಕ್ಕಳನ್ನು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಮಾಡಲಾಯಿತು.

ಸಾಧಕ ಮಕ್ಕಳಿಗೆ ಸನ್ಮಾನ…..!
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತ ಕುಮಾರಿ ಆಗ್ನಿ ಮತ್ತು ಮನಸ್ವಿ ಬಿ,ಎಂ ಎಂಬ ಎರಡು ಮಕ್ಕಳಿಗೆ ಗಣ್ಯರಿಂದ ಸನ್ಮಾನಿಸಲಾಯಿತು. ಸಮ್ಮೇಳನದಲ್ಲಿ ಭಾಗಿಯಾಗಿದ್ದ ಎಲ್ಲಾ ಮಕ್ಕಳಿಗೂ ಉದ್ಯಮಿಗಳಾದ ಮಹೇಂದ್ರ ಗೌಡ ಅವರು ಪ್ರತಿ ಮಕ್ಕಳಿಗೂ ಡಾಕ್ಯುಮೆಂಟರಿ ಫೈಲ್ ಮತ್ತು ಸ್ವೀಟ್ ಬಾಕ್ಸನ್ನು ವಿತರಿಸಿದರು. ಈ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ವಾಗ್ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರು ಯಡೂರು ಸುರೇಂದ್ರ, ನೌಕರ ಸಂಘದ ಅಧ್ಯಕ್ಷರಾದ ಸತೀಶ್ ಶೆಟ್ಟಿ, ವರ್ತಕ ಸಂಘದ ಅಧ್ಯಕ್ಷರಾದ ಡಾನ್ ರಾಮಣ್ಣ, ಜ್ಯೋತಿ ಮೋಹನ್, ಜಯಂತಿ ಎಂ ಕೆ, ಸುಶೀಲಾ ಶೆಟ್ಟಿ, ನಾಗಪ್ಪ ಸರ್ ಉಪ ಪ್ರಿನ್ಸಿಪಾಲರು, ಕಾರ್ಯಕ್ರಮದ ರೂವಾರಿ ಮಹಾಬಲೇಶ್ ಹೆಗಡೆ, ರೇಣುಕಾ ಎಂ ಹೆಗಡೆ, ಪುಟ್ಟಪ್ಪ, ಮತ್ತು ಉದ್ಯಮಿ ಮಹೇಂದ್ರ ಗೌಡ ಹಾಗೂ ಎಲ್ಲಾ ಪ್ರಮುಖರು ಇದ್ದರು.
ತೀರ್ಥಹಳ್ಳಿಯ ಈ ಸಮ್ಮೇಳನ ಅತ್ಯಂತ ಯಶಸ್ವಿಯಾಗಿದ್ದು, ಮುಂದಿನ ಇಂತಹ ಕಾರ್ಯಕ್ರಮಗಳಿಗೆ ಮಾದರಿಯಾಗಿದೆ. ಸಭಾಂಗಣ ಕಿಕ್ಕಿರಿದು ತುಂಬಿದ್ದು ನೋಡುಗರಿಗೆ, ಮಕ್ಕಳು ಸಾಹಿತ್ಯ ಸಂಸ್ಕೃತಿಯನ್ನು ಪ್ರತಿನಿಧಿಸಿ ಇಷ್ಟೊಂದು ಹುಮ್ಮಸ್ಸಿನಲ್ಲಿ ನಡೆಸಿಕೊಟ್ಟಿದ್ದು ಸಂತಸದ ವಿಷಯವಾಗಿದೆ. ಪೋಷಕ ವರ್ಗ ಹಾಗು ನಡೆಸಿಕೊಟ್ಟ ಎಲ್ಲರಿಗೂ ನಿರ್ವಾಹಕರು ಧನ್ಯವಾದಗಳನ್ನು ತಿಳಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಿನದಾಗಿ ನಡೆಯಲಿ. ಮತ್ತು ಮುಂಬರುವ ಸಾಹಿತ್ಯಾಸಕ್ತರಿಗೆ ಪ್ರೇರಣೆಯಾಗಲಿ ಎಂದು ನಡೆಸಿಕೊಟ್ಟ ಎಲ್ಲರಿಗೂ ನಮ್ಮೂರ್ ಎಕ್ಸ್‌ಪ್ರೆಸ್ ಶುಭ ಕೋರುತ್ತಿದೆ.
