ಆಗುಂಬೆ ಘಾಟಿ ಎಂಟ್ರಿಯಲ್ಲೆ ಬಿದ್ದ ಮರ!
– 4 ಆಂಬುಲೆನ್ಸ್ ಸೇರಿ, ಹಲವು ವಾಹನಗಳು ಜಾಮ್ ಜಾಮ್
– ಕಲ್ಲತ್ತಗಿರಿ ಬಳಿ ಕಾರಿನ ಮೇಲೆ ಮರ: ಕಾರು ಪುಡಿ ಪುಡಿ!
NAMMUR EXPRESS NEWS
ತೀರ್ಥಹಳ್ಳಿ/ ಚಿಕ್ಕಮಗಳೂರು: ಮಲೆನಾಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಬಿರುಗಾಳಿಗೆ ಬೃಹತ್ ಮರಗಳು ಧರೆಗುರುಳುತ್ತಿವೆ. ಎಲ್ಲಾ ಕಡೆ ಭೂಕುಸಿತ ಸಂಭವಿಸುತ್ತಿದೆ. ಈ ನಡುವೆ
ಆಗುಂಬೆ ಘಾಟಿ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.ಆಗುಂಬೆ ವಿವ್ ಪಾಯಿಂಟ್ಗೆ ಹೋಗುವ ದಾರಿಯಲ್ಲಿರುವ ಕೆರೆಯ ಎದುರಿಗಿನ ಮರ ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಪೂರ್ಣವಾಗಿ ರಸ್ತೆಯ ಮೇಲೆ ಬಿದ್ದಿದೆ. ಈ ಮರವು ಬೃಹತ್ ಗಾತ್ರದ್ದಾಗಿರುವುದರಿಂದ ಅದನ್ನು ತೆರವುಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಹೀಗಾಗಿ ವಾಹನ ಸವಾರರು ನೆರವಿಗೆಗಾಗಿ ಕಾಯುತ್ತಿದ್ದರು. ಇತ್ತೀಚಿನ ಮಾಹಿತಿ ಪ್ರಕಾರ, ಬಿದ್ದ ಮರವನ್ನು ತೆರವುಗೊಳಿಸಲಾಗಿದೆ ಎನ್ನಲಾಗುತ್ತಿದೆ
ನಾಲ್ಕು ಆಂಬುಲೆನ್ಸ್ಗಳು ಸೇರಿ ಹಲವು ವಾಹನಗಳು ಸಿಲುಕಿ ಪರದಾಟ
ಇನ್ನು ಮರ ಬಿದ್ದ ಪರಿಣಾಮ, ಆಗುಂಬೆ ಮಾರ್ಗವಾಗಿ ಬಂದ ನಾಲ್ಕು ಆಂಬುಲೆನ್ಸ್ಗಳು ಶಿವಮೊಗ್ಗಕ್ಕೆ ಬರಲಾಗದೆ ಮರದ ಬುಡದಲ್ಲಿಯೇ ನಿಲ್ಲುವಂತಾಗಿತ್ತು.. ಆಂಬುಲೆನ್ಸ್ಗಳು ಮಾತ್ರವಲ್ಲದೆ, ಘಾಟಿ ಹತ್ತಿ ಮೇಲೆ ಬಂದ ವಾಹನಗಳು ಮತ್ತು ಘಾಟಿಯಿಂದ ಇಳಿಯಲು ಹೊರಟಿದ್ದ ವಾಹನಗಳು ಚೆಕ್ ಪೋಸ್ಟ್ ಬಳಿಯೇ ಸಿಲುಕಿದ್ದವು.
ಈ ಭಾಗದಲ್ಲಿ ಹೆವಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿರುವುದರಿಂದ ಸಣ್ಣ ವಾಹನಗಳು ಮಾತ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದವು.
ಇನ್ನು ಚಿಕ್ಕಮಗಳೂರು ಜಿಲ್ಲೆಯ ಕಲ್ಲತ್ತಗಿರಿ ಬಳಿ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ.