ಜಗದ ಕವಿ ಯುಗದ ಕವಿಗೆ ನಾಡ ನಮನ
– ಕುಪ್ಪಳಿಯಲ್ಲಿ ಕುವೆಂಪು ಸಮಾಧಿಗೆ ಪೂಜೆ
– ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಂಭ್ರಮ
– ಕುವೆಂಪು ಪ್ರೇರಣೆಯಿಂದ ವರ್ಷಕ್ಕೆ 2 ಲಕ್ಷ ಪ್ರವಾಸಿಗರ ಭೇಟಿ!
NAMMUR EXPRESS NEWS
ತೀರ್ಥಹಳ್ಳಿ: ಜಗದ ಕವಿ ಯುಗದ ಕವಿ ಕುವೆಂಪು ಅವರ ಜನ್ಮ ದಿನವನ್ನು ಕುವೆಂಪು ಅವರ ಹುಟ್ಟೂರು ಕುಪ್ಪಳಿಯಲ್ಲಿ ಅವರ ಸಮಾಧಿಗೆ ನಮನ ಸಲ್ಲಿಸಲಾಯಿತು. ಕುವೆಂಪು ಸಮಾಧಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಲ್. ಶಂಕರ್, ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ನೆಫ್ರೋ ಯೂರೋಲಜಿ ಸ್ಥಾಪಕ ನಿರ್ದೇಶಕ ಡಾ.ಜಿ.ಕೆ. ವೆಂಕಟೇಶ್ ಸೇರಿದಂತೆ ಜಿಲ್ಲಾ ಆಡಳಿತ, ತಾಲೂಕು ಆಡಳಿತ, ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತದ ಪ್ರಮುಖರು ಹಾಜರಿದ್ದರು. ಬಳಿಕ ಪೂರ್ಣಚಂದ್ರ ತೇಜಸ್ವಿ ಅವರ ಸಮಾಧಿಗೆ ನಮನ ಸಲ್ಲಿಸಲಾಯಿತು.
ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ
ಪ್ರಶಸ್ತಿಗಳು ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡುತ್ತದೆ. ಆದರೆ ಶ್ರೇಷ್ಟವಾದ ಸಾಹಿತ್ಯ ಓದುಗರ ಮನಸ್ಸಿನಲ್ಲಿ ದೀರ್ಘವಾಗಿ ಉಳಿಯುವಂತೆ ಪ್ರಭಾವ ಬೀರುತ್ತದೆ ಎಂದು ಖ್ಯಾತ ಬಂಗಾಳಿ ಸಾಹಿತಿ ಶೀಷೇಂಧು ಮುಖ್ಯೋಪಾಧ್ಯಾಯ ಅಭಿಪ್ರಾಯ ವ್ಯಕ್ತಪಡಿಸಿದರು. ಕುಪ್ಪಳಿಯಲ್ಲಿ ಶುಕ್ರವಾರ ಕುವೆಂಪು 119ನೇ ಜನ್ಮದಿನೋತ್ಸವ ಅಂಗವಾಗಿ ನಡೆದ ವಿಶ್ವಮಾನದ ದಿನಾಚರಣೆಯಲ್ಲಿ “ಕುವೆಂಪು ರಾಷ್ಟ್ರೀಯ ಪುರಸ್ಕಾರ” ₹5 ಲಕ್ಷ ನಗದು ಬಹುಮಾನ ಸ್ವೀಕರಿಸಿ ಅವರು ಮಾತನಾಡಿದರು.
ವರ್ಷಕ್ಕೆ 2 ಲಕ್ಷ ಪ್ರವಾಸಿಗರ ಭೇಟಿಗೆ ಕುವೆಂಪು ಪ್ರೇರಣೆ
“ಕುವೆಂಪು ಅಭಿವ್ಯಕ್ತಿ ಸ್ವಾಂತ್ರಂತ್ರವನ್ನು ಗೌರವಿಸುತ್ತಿದ್ದರು. ರಾಜಕಾರಣಿ, ಪ್ರಧಾನಿ, ಸ್ವಾಮೀಜಿಗಳಿಗೂ ನಿಷ್ಠೂರವಾದಿಯಾಗಿ ಕಾಡಿದ್ದರು. ಸಾಸ್ಕೃತಿಕ ಮನಸ್ಸಿದ್ದರೆ ಏನು ಬೇಕಾದರು ಸಾಧ್ಯ ಎಂಬುದಕ್ಕೆ ಕುಪ್ಪಳಿ ಉದಾಹರಣೆಯಾಗಿದೆ. ವಾರ್ಷಿಕವಾಗಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಎಲ್ಲರಿಗೂ ಸೌಕರ್ಯ ಒದಗಿಸುವ ಜವಾಬ್ದಾರಿ ಕಷ್ಟಸಾಧ್ಯ” ಎಂದು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್. ಶಂಕರ್ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಆರಗ ಜ್ಞಾನೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಸ್ನೇಹಲ್ ಸುಧಾಕರ್ ಲೋಕಂಡೆ, ದೇವಂಗಿ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ಕುಮಾರ್, ಸದಸ್ಯೆ ಹೆಚ್.ಸಿ. ಸರೋಜ ಇದ್ದರು.

ಬಂಗಾರಪ್ಪ ಅವರಿಂದ ಕುವೆಂಪು ಕನಸು ನನಸು
ಕುವೆಂಪು ಲೇಖನಗಳಲ್ಲಿ ಉಲ್ಲೇಖವಾದ ನಿಷ್ಟೂರ ವ್ಯಕ್ತಿತ್ವ ತದ್ರೂಪ ರಾಜಕಾರಣದಲ್ಲಿ ಎಸ್.ಬಂಗಾರಪ್ಪ ಅವರದ್ದಾಗಿತ್ತು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸ್ವತಃ ಅವರೇ ಮನೆಗೆ ತೆರಳಿ ನೀಡಿದ್ದರು. ಕೊನೆಯ ದಿನಗಳಲ್ಲಿ ಕುವೆಂಪು ಅವರಿಗಿದ್ದ ಕುಪ್ಪಳಿ ನೋಡುವ ಆಸೆಯನ್ನು ತೀರಿಸಿದ್ದರು. ಎಲ್ಲರೂ ಇತಿಹಾಸದ ಪಾಲುದಾರರಾಗಬೇಕು. ಕುವೆಂಪು ಕನ್ನಡಿಗರ ಹೃದಯದಲ್ಲಿ ಅಜರಾಮರವಾಗಿ ನೆಲೆಸಿದ್ದಾರೆ.
– ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಕುವೆಂಪು ವಿಚಾರಧಾರೆಗೆ ಸಾವು ಇಲ್ಲ
ಕುವೆಂಪು ವಿಚಾರಧಾರೆಗೆ ಸಾವು ಎಂಬುದಿಲ್ಲ. ವ್ಯಕ್ತಿತ್ವದ ಮೂಲಕವೇ ಚಿರಂಜೀವಿಯಾಗಿ ನಮ್ಮೊಂದಿಗೆ ಬದುಕಿದ್ದಾರೆ. ಮಲೆನಾಡಿನ ಅಗಾಧ ಪ್ರಕೃತಿಯನ್ನು ವರ್ಣಿಸುವ ದಿವ್ಯದೃಷ್ಟಿ ಅವರಿಗಿತ್ತು. ಕುವೆಂಪು ಹೆಸರಿನಲ್ಲಿರುವ ಜೈವಿಕ ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ ಸಲ್ಲ. ಪೂರ್ಣ ಮೂಲಭೂತ ಸೌಲಭ್ಯ ಕಲ್ಪಿಸಿದರೆ ವಿಲಾಸಿ ಕೇಂದ್ರವಾಗಿ ಪರಿವರ್ತನೆ ಹೊಂದಲಿದೆ.
– ಆರಗ ಜ್ಞಾನೇಂದ್ರ, ಶಾಸಕ