ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟುಗಳಿಗೆ ಗೌರವ!
– ಆರ್ಯನ್, ಸಂಮಿತ್ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
– ತೀರ್ಥಹಳ್ಳಿ ಪಟ್ಟಣದಲ್ಲಿ ಭವ್ಯ ಮೆರವಣಿಗೆ
NAMMUR EXPRESS NEWS
ತೀರ್ಥಹಳ್ಳಿ: ವಾಲಿಬಾಲ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟುಗಳಾದ ಕುರುವಳ್ಳಿಯ ಆರ್ಯನ್ ಗೌಡ ಮತ್ತು ಸಂಮಿತ್ ಅವರಿಗೆ ತೀರ್ಥಹಳ್ಳಿ ಮತ್ತು ಕುರುವಳ್ಳಿ ಜನತೆ ಸಂಭ್ರಮದಿಂದ ಗೌರವ ನೀಡಿದ್ದಾರೆ. ತೀರ್ಥಹಳ್ಳಿಯ ಕುಶಾವತಿಯಿಂದ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಕುರುವಳ್ಳಿಯವರೆಗೆ ಮೆರವಣಿಗೆ ಮೂಲಕ ಕರೆತಂದು ಗೌರವ ನೀಡಲಾಯಿತು. ಈ ಮೂಲಕ ಆರ್ಯನ್ ಗೌಡ ( Aryan Gowda ) ಮತ್ತು ಸಂಮಿತ್ ( Samith ) ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಆಗುಂಬೆಯ ಅನ್ನಪೂರ್ಣ ವಿದ್ಯಾ ಮಂದಿರದ ವಿದ್ಯಾರ್ಥಿಗಳಾದ ಆರ್ಯನ್, ಸಂಮಿತ್ ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ ಬಳಿಕ ಇದೀಗ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟುಗಳಾದ ಆರ್ಯನ್ ಮತ್ತು ಸಂಮಿತ್ ಈ ಇಬ್ಬರು ವಿದ್ಯಾರ್ಥಿಗಳು ಈ ದಿನ ತೀರ್ಥಹಳ್ಳಿಗೆ ಆಗಮಿಸಿದ್ದಾರೆ. ಈ ಇಬ್ಬರು ಕ್ರೀಡಾಪಟುಗಳನ್ನು ತೀರ್ಥಹಳ್ಳಿಯ ಕುಶಾವತಿ ಆವರಣದಲ್ಲಿ ಭವ್ಯವಾಗಿ ಸ್ವಾಗತಿಸಿ ಅಲ್ಲಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಕೊಪ್ಪ ಸರ್ಕಲ್ ನ ಕುವೆಂಪು ಪುತ್ತಳಿಗೆ ಕ್ರೀಡಾಪಟುಗಳಿಂದ ಮಾಲಾರ್ಪಣೆ ಮಾಡಲಾಯಿತು. ಮೆರವಣಿಗೆಯಲ್ಲಿ ಕ್ರೀಡಾಪಟುಗಳಿಗೆ ಸಾರ್ವಜನಿಕರಿಂದ ಹಾಗೂ ಗಣ್ಯರಿಂದ ಮಾಲಾರ್ಪಣೆ ಮಾಡಿ ಗೌರವಿಸಿದರು ಈ ಮೆರವಣಿಗೆಯಲ್ಲಿ ಪ್ರಮುಖರಾದ ಚಂದವಳ್ಳಿ ಸೋಮಶೇಖರ್, ಕುರುವಳ್ಳಿ ಪಂಚಾಯತಿ ಮಾಜಿ ಅಧ್ಯಕ್ಷ ಅನಿಲ್, ಮೇಗರವಳ್ಳಿ ರಕ್ಷಿತ್, ಪ್ರಮೋದ್ ಪೂಜಾರಿ, ಪೂರ್ಣೇಶ್ ಪೂಜಾರಿ , ಕುಕ್ಕೆ ಪ್ರಶಾಂತ, ನವೀನ್ ಬೆಟ್ಮಕ್ಕಿ, ನಾಗೇಂದ್ರ ಕುರುವಳ್ಳಿ, ಕುರುವಳ್ಳಿ ನಾಗರಾಜ್, ಬಳಗಟ್ಟೆ ಗಿರೀಶ್, ವಿನುತ್ ಗೌಡ, ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.
ತೀರ್ಥಹಳ್ಳಿಯ ಕ್ರೀಡಾ ರತ್ನಗಳು!
ಕುರುವಳ್ಳಿ ಅನಿಲ್ ಗೌಡ ಮತ್ತು ರಮ್ಯಾ ದಂಪತಿ ಪುತ್ರ ಆರ್ಯನ್ ಮತ್ತು ಮೇಲಿನ ಕುರುವಳ್ಳಿ ಮಂಜು ಟೈಲ್ಸ್ ಮಾಲೀಕ ಮಂಜು ಅವರ ಪುತ್ರ ಸಂಮಿತ್ ತೀರ್ಥಹಳ್ಳಿಯ ಹಿರಿಮೆಯನ್ನು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿಸಿದ್ದಾರೆ.