ತೀರ್ಥಹಳ್ಳಿಯಲ್ಲಿ ಆಯುಷ್ ಆಯುರ್ವೇದ ಆಸ್ಪತ್ರೆ!
– ಆರಗ ಪ್ರಶ್ನೆಗೆ ಆರೋಗ್ಯ ಸಚಿವರ ಉತ್ತರ
– ಆರಗ ಬಳಿ ಶುರುವಾಗಿದೆ ಕ್ಯಾನ್ಸರ್ ಆಸ್ಪತ್ರೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ 10 ಹಾಸಿಗೆಗಳ ಆಯುಷ್ ಆಯುರ್ವೇದ ಆಸ್ಪತ್ರೆ ಮಂಜೂರಾತಿಯಾಗಿದ್ದು ಶೀಘ್ರದಲ್ಲಿ ನಿರ್ಮಾಣ ಆಗಲಿದೆ. ಈ ಆಸ್ಪತ್ರೆಗಾಗಿ ನಿರಂತರ ಪ್ರಯತ್ನ ಪಟ್ಟ ಶಾಸಕ ಆರಗ ಜ್ಞಾನೇಂದ್ರರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಸ್ಪತ್ರೆಗೆ ಮಂಜೂರಾತಿ ಪಡೆದಿದ್ದರು. ಇದಕ್ಕಾಗಿ ಇಂದಿರಾನಗರದಲ್ಲಿ ಜಾಗವನ್ನು ಗುರುತಿಸಲಾಗಿತ್ತು . ಇನ್ನೇನು ಟೆಂಡರ್ ಪ್ರಕ್ರಿಯೆ ನಡೆಯಬೇಕು ಎನ್ನುವ ಹೊತ್ತಿಗೆ ಸರ್ಕಾರ ಬದಲಾಯಿತು. ಸರ್ಕಾರ ಬದಲಾದ ಮೇಲೆ ಹಿಂದಿನ ಯೋಜನೆಗಳು, ಮಂಜೂರಾತಿಗಳೆಲ್ಲವೂ ನೆನೆಗುದಿಗೆ ಬಿದ್ದವು. ಬೆಳಗಾವಿಯಲ್ಲಿ ನಡೆದ ವಿಧಾನ ಸಭೆ ಅಧಿವೇಶನದಲ್ಲಿ ಶಾಸಕ ಆರಗ ಜ್ಞಾನೇಂದ್ರ ಈ ವಿಚಾರವನ್ನು ಪ್ರಸ್ತಾಪಿಸಿ ತೀರ್ಥಹಳ್ಳಿ ಆಯುಷ್ ಆಸ್ಪತ್ರೆ ಕಥೆ ಎಲ್ಲಿಗೆ ಬಂತು, ಯಾಕಿನ್ನೂ ಸರ್ಕಾರ ಟೆಂಡರ್ ಕರೆದಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಈ ಆಸ್ಪತ್ರೆ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, ಶೀಘ್ರವಾಗಿ ಕಟ್ಟಣ ನಿರ್ಮಾಣ ಕಾಮಗಾರಿ ಆರಂಭಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಆರಗ ಬಳಿ ಕ್ಯಾನ್ಸರ್ ಆಸ್ಪತ್ರೆ
ತೀರ್ಥಹಳ್ಳಿ ಸಾಗರ ರಸ್ತೆಯ ಆರಗ ಬಳಿ ಬೃಹತ್ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಈ ಕಾಮಗಾರಿ ಈಗಾಗಲೇ ಶುರುವಾಗಿದೆ. ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗುವುದರಿಂದ ಮಲೆನಾಡಿನ ಕ್ಯಾನ್ಸರ್ ರೋಗಿಗಳು ಹಾಗೂ ರೋಗ ತಪಾಸಣೆಗೆ ಅನುಕೂಲ ಆಗಲಿದೆ.
