Categories
ತೀರ್ಥಹಳ್ಳಿ

ಒಕ್ಕಲಿಗರ ಕುರಿತ ಭಗವಾನ್ ಹೇಳಿಕೆಗೆ ಆಕ್ರೋಶದ ಕಿಚ್ಚು!

ಒಕ್ಕಲಿಗರ ಕುರಿತ ಭಗವಾನ್ ಹೇಳಿಕೆಗೆ ಆಕ್ರೋಶದ ಕಿಚ್ಚು!
– ತೀರ್ಥಹಳ್ಳಿ ತಾಲೂಕು ಒಕ್ಕಲಿಗರ ಸಂಘದಿಂದ ಇಂದು ಪ್ರತಿಭಟನೆ
– ಶಾಸಕ ಆರಗ ಜ್ಞಾನೇಂದ್ರ ಅವರಿಂದಲೂ ಖಂಡನೆ

NAMMUR EXPRESS NEWS
ತೀರ್ಥಹಳ್ಳಿ: ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಒಕ್ಕಲಿಗ ಸಮಾಜ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಭಗವಾನ್ ಹೇಳಿಕೆ ಖಂಡಿಸಿ ಮತ್ತು ಭಗವಾನ್ ಅವರ ಮೇಲೆ ಈ ಕೂಡಲೇ ರಾಜ್ಯ ಸರ್ಕಾರ ಜನಾಂಗೀಯ ನಿಂದನೆ ಪ್ರಕರಣ ದಾಖಲಿಸಲು ಆಗ್ರಹಿಸಿ ತೀರ್ಥಹಳ್ಳಿ ತಾಲೂಕು ಒಕ್ಕಲಿಗರ ಸಂಘದಿಂದ ಅಕ್ಟೋಬರ್ 16ರ ಸೋಮವಾರ ಮಧ್ಯಾಹ್ನ 2 ಘಂಟೆಗೆ ತೀರ್ಥಹಳ್ಳಿ ತಾಲೂಕು ಕಛೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಮಾಜ ಬಾಂಧವರು ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಬಳಸಿಕೊಂಡು ಒಕ್ಕಲಿಗ ಸಮಾಜವನ್ನು ನಿಂದಿಸಿರುವ ಭಗವಾನ್ ವಿರುದ್ಧದ ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಅಧ್ಯಕ್ಷರು, ನಿರ್ದೇಶಕರು, ತಾಲೂಕು ಒಕ್ಕಲಿಗರ ಸಂಘ ತೀರ್ಥಹಳ್ಳಿ ಇವರು ಮನವಿ ಮಾಡಿದ್ದಾರೆ.

ಭಗವಾನ್ ತಲೆಕೆಟ್ಟಿದೆ ಎಂದ ಆರಗ ಜ್ಞಾನೇಂದ್ರ

ಕಾಂಗ್ರೆಸ್‌ ಸರ್ಕಾರ ಜನಾಂಗಗಳನ್ನು ಒಡೆದು ಆಳುವ ಕೆಲಸ ಮಾಡುತ್ತಿದೆ. ಭಗವಾನ್‌ರಂತಹ ಅತಿರೇಖಿಗಳನ್ನು ಕಾಂಗ್ರೆಸ್‌ ಪಕ್ಷವೇ ಪೋಷಣೆ ಮಾಡುತ್ತಿದೆ. ಒಕ್ಕಲಿಗ ಸಮಾಜದ ಇತಿಹಾಸ, ಹಿರಿಮೆಯ ಅರಿವಿಲ್ಲದ ಭಗವಾನ್ ತನ್ನನ್ನು ಸಮರ್ಥಿಸಿಕೊಳ್ಳಲು ಕುವೆಂಪು ಅವರ ಹೆಸರನ್ನು ಬಳಸಿದ್ದು ಅಕ್ಷಮ್ಯ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಸ್ವಯಂ ಘೋಷಿತ ಬುದ್ದಿಜೀವಿ ಭಗವಾನ್ ಎಂಬ ತಲೆಹರಟೆ, ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಒಂದು ಜನಾಂಗೀಯವನ್ನು ಜರಿಯುವ ಮಾತುಗಳನ್ನಾಡಿದ್ದಾನೆ. ಹಾಗೂ ಒಕ್ಕಲಿಗರನ್ನು ನಿಂದಿಸಿ ಮಾತನಾಡುವಾಗ ಕುವೆಂಪುರವರ ಹೆಸರು ಬಳಸಿದ್ದಾನೆ.

ಆತನ ನಾಲಿಗೆಯನ್ನು ಹಿಡಿತದಲ್ಲಿಡಲು ಸಾಧ್ಯವೇ ಇಲ್ಲ. ಆತನ ವರ್ತನೆಗೆ ಅನೇಕ ಬಾರಿ ಬಂಧಿಸಿ ಕಾನೂನು ಕ್ರಮ ಕೈಗೊಂಡರೂ ಬೆಂಬಲಕ್ಕೆ ಕಾಂಗ್ರೆಸ್ ಸರ್ಕಾರ ನಿಂತಿದೆ. ಜನಾಂಗ ಜನಾಂಗವನ್ನು ಒಡೆದಾಳುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ.ರಾಜ್ಯ ಸರ್ಕಾರಕ್ಕೆ ಬದ್ದತೆ ಇದ್ದರೆ ಭಗವಾನನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಮಾಜಿ ಗೃಹ ಸಚಿವರು, ತೀರ್ಥಹಳ್ಳಿ ಕ್ಷೇತ್ರದ ಶಾಸಕರೂ ಆದ ಆರಗ ಜ್ಞಾನೇಂದ್ರ ಒಕ್ಕಲಿಗ ಸಮಾಜದ ಕುರಿತಾಗಿ ಪ್ರೊ.ಭಗವಾನ್ ಆಡಿದ್ದ ಮಾತುಗಳಿಗೆ ತಮ್ಮ ಆಕ್ಷೇಪ ಹಾಗೂ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.