ದೋಣಿ ಪಲ್ಟಿ: ರಿಷಬ್ ಶೆಟ್ಟಿ ಪಾರು..!
– ‘ಕಾಂತಾರ-1’ ಶೂಟಿಂಗ್ ವೇಳೆ ಮಗುಚಿದ ದೋಣಿ!
– ರಿಷಬ್ ಸೇರಿ 30 ಜನರಿದ್ದ ದೋಣಿ: ಮಾಣಿ ಜಲಾಶಯದಲ್ಲಿ ಘಟನೆ
– ಈಜಿ ದಡ ಸೇರಿದ ಕಲಾವಿದರು, ತಂತ್ರಜ್ಞರು: ಶೂಟಿಂಗ್ ನಿಲುಗಡೆ
NAMMUR EXPRESS NEWS
ತೀರ್ಥಹಳ್ಳಿ/ ಹೊಸನಗರ: ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ-1’ ಚಿತ್ರತಂಡ ಮತ್ತೊಂದು ದುರಂತದಿಂದ ಪಾರಾಗಿದೆ.
ಇತ್ತೀಚಿಗೆ ಕಲಾವಿದ ವಿಜು ವಿಕೆ ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಇದೀಗ ಚಿತ್ರೀಕರಣದ ವೇಳೆ ದೋಣಿ ಮಗುಚಿ ಬಿದ್ದ ಘಟನೆ ನಡೆದಿದೆ.ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ‘ಕಾಂತಾರ’-1 ಚಿತ್ರದ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿದೆ. ಶನಿವಾರ ಚಿತ್ರೀಕರಣ ನಡೆಯುತ್ತಿದ್ದ ವೇಳೆ ರಿಷಬ್ ಶೆಟ್ಟಿ ಸೇರಿ 30 ಜನ ಕಲಾವಿದರಿದ್ದ ದೋಣಿ ಇದ್ದಕ್ಕಿದ್ದಂತೆ ಮಗುಚಿ ಬಿದ್ದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಕಲಾವಿದರು, ತಂತ್ರಜ್ಞರು ಎಲ್ಲರೂ ಈಜಿ ದಡ ಸೇರಿದ್ದಾರೆ. ಬೋಟ್‌ನಲ್ಲಿದ್ದವರು ಬಚಾವಾದರೂ ಕ್ಯಾಮೆರಾ ಇನ್ನಿತರೆ ಸೆಟ್ ಪ್ರಾಪರ್ಟಿಗಳು ನೀರು ಪಾಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಬೆನ್ನಲ್ಲೇ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಸಲಾಗಿದ್ದು, ಒಂದರ ಹಿಂದೆ ಒಂದರಂತೆ ಘಟನೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇದೀಗ ಭಯಭೀತಗೊಂಡಿದೆ ಎನ್ನಲಾಗಿದೆ. ಈ ಹಿಂದೆ ರಿಷಬ್ ಶೆಟ್ಟಿಗೆ ಮಂಗಳೂರಿನ ಕದ್ರಿ ಬಾರೆಬೈಲ್ ಪಂಜುರ್ಲಿ ದೈವ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಮತ್ತಷ್ಟು ಅವಘಡಗಳ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.