ಕಾಂಗ್ರೆಸ್ ನಾಯಕರ ನಡೆಗೆ ಬೇಸತ್ತು ರಾಜೀನಾಮೆ!
– ಯುವ ಮುಖಂಡ ವಿನಾಯಕ ಪತ್ರಿಕಾ ಪ್ರಕಟಣೆ
– ಏನಿದು ಹೊಸ ಸುದ್ದಿ: ಇನ್ನಷ್ಟು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದ ನಾಯಕರುಗಳ ನಡೆಗೆ ಬೇಸತ್ತು ತೀರ್ಥಹಳ್ಳಿ ಯುವ ಮುಖಂಡರಾದ ವಿನಾಯಕ ಎಂ ರಾಜೀನಾಮೆಗೆ ಮುಂದಾಗಿದ್ದಾರೆ ಹೊದಲ-ಅರಳಾಪುರ ಗ್ರಾಮ ಪಂಚಾಯ್ತಿ ಸದಸ್ಯರಾಗಿ ತಾಲ್ಲೂಕು ಕಾಂಗ್ರೆಸ್ ಪಕ್ಷ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷಕ್ಕೆ ಗಣನೀಯ ಸೇವೆ ನೀಡಿರುವ ವಿನಾಯಕ ರಾಜೀನಾಮೆ ನೀಡುವ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಹೇಳಿಕೆಯಲ್ಲಿ ಏನಿದೆ?
ನಾನು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಮತ್ತು ಪ್ರಾಮಾಣಿಕ ಕಾರ್ಯಕರ್ತನಾಗಿ ವಿರೋಧ ಪಕ್ಷಗಳಿಗೆ ಮತ್ತು ವಿರೋಧ ಪಕ್ಷದ ನಾಯಕರುಗಳಿಗೆ ಅವರ ನ್ಯೂನ್ಯತೆಗಳನ್ನು ಟೀಕಿಸುತ್ತಾ ಬಂದವನು. ಕಳೆದ ಒಂದು ವರ್ಷದಿಂದ ಮಾಳೂರು ಭಾಗದ ಮೇಲಿನಕೊಪ್ಪದಲ್ಲಿ ಮರಳು ಕಳ್ಳರ ದಬ್ಬಾಳಿಕೆಯಿಂದ ಅನಾದಿ ಕಾಲದಿಂದಲೂ ಜಮೀನಿಗೆ ಹೋಗುತ್ತಿದ್ದ ರಸ್ತೆ ಸಂಪರ್ಕವನ್ನು ಬಂದ್ ಮಾಡಿರುವ ಬಗ್ಗೆ ನ್ಯಾಯಕ್ಕಾಗಿ ಸಂತ್ರಸ್ಥರ ಪರ ಹೋರಾಟ ಮಾಡುತ್ತಾ ಬಂದಿರುತ್ತೇನೆ. ಹಾಗೆಯೇ ನಾನು ಈ ಹಿಂದೆಯೂ ಕೂಡ ಮಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಹಿಷಿಯಲ್ಲಿ ಒಂದು ಕುಟುಂಬದ ಪರ ನ್ಯಾಯ ಪಂಚಾಯ್ತಿಯಲ್ಲಿ ನ್ಯಾಯದ ಪರವಾಗಿ ನಿಂತು ಹಿರಿಯರೊಂದಿಗೆ ಸಂತ್ರಸ್ಥರಿಗೆ ನ್ಯಾಯ ನೀಡಿದ ಉದಾಹರಣೆಯೂ ಕೂಡ ಜೀವಂತವಾಗಿದೆ.
ಮರಳು ಕಳ್ಳರ ಪರವಾಗಿ ನಿಂತಂತಹ ಕೆಲವರು ನನ್ನನ್ನು ಹಿಂದಿನಿಂದ ಪ್ರಶ್ನೆ ಮಾಡುವುದೂ ಉಂಟು. ಹೊದಲ ಗ್ರಾಮ ಪಂಚಾಯ್ತಿಯೂ ಮತ್ತು ಮಾಳೂರು ಗ್ರಾಮ ಪಂಚಾಯ್ತಿಗೆ ಸಂಬಂಧವೇನು. ಅವರು ಅವರ ಗ್ರಾಮ ಪಂಚಾಯ್ತಿಯಲ್ಲಿ ನೋಡಿಕೊಳ್ಳಲಿ ಎಂದು. ನಾನು ಕೇಳುತ್ತಿರುವ ಮಾಳೂರು ಸೀಮೆಯ ನಾಯದವಳ್ಳಿ ಹೊಳೆಯಲ್ಲಿ ಮರಳು ಹೊಡೆಯಲು ಜಾಗವನ್ನು ಅಥವಾ ಮರಳಿನ ಹಣವನ್ನು ಸಹ ಅಲ್ಲ. ಅನ್ಯಾಯಕ್ಕೊಳಗಾದವರ ಪರ ಮಾತ್ರ ನ್ಯಾಯವನ್ನು ಕೇಳಿದ್ದೇನೆ. ಅಷ್ಟಕ್ಕೂ ನಾನೂ ಒಬ್ಬ ಕಾಂಗ್ರೆಸ್ ಪಕ್ಷದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಮತ್ತು ತಾಲ್ಲೂಕು ಕಾರ್ಮಿಕ ವಿಭಾಗದ ಅಧ್ಯಕ್ಷನಾಗಿ ನೊಂದವರ ಪರವಾಗಿ ಪ್ರಾಮಾಣಿಕವಾಗಿ ನ್ಯಾಯ ಸಿಗುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇನೆ ಎನ್ನುವುದು ಇವರುಗಳ ಅರಿವಿಗಿರಲಿ.
ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡ ಎಲ್ಲಿ ಬೇಕಾದರೂ ಹೋಗುವ, ನ್ಯಾಯದ ಪರವಾಗಿ ನಿಲ್ಲುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಇದೇ ತಿಂಗಳ 15ನೆ ತಾರೀಖಿನಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಕರೆದು ಪಕ್ಷದ ಎಲ್ಲಾ ಸ್ಥಾನಮಾನಗಳಿಗೂ ರಾಜೀನಾಮೆ ನೀಡಲು ನಾನು ಮತ್ತು ನನ್ನ ಧರ್ಮಪತ್ನಿ ತೀರ್ಮಾನಿಸಿರುತ್ತೇವೆ. ಇವತ್ತು ನ್ಯಾಯಕ್ಕಾಗಿ ಕೋರ್ಟು ಕಛೇರಿ ಅಲೆಯುತ್ತಿರುವ ಕುಟುಂಬವನ್ನು ಹೊರತುಪಡಿಸಿ ಜಮೀನಿಗೆ ರಸ್ತೆ ತಡೆ ಮಾಡಿರುವ ಯಾರೊಬ್ಬರಿಗೂ ಕೂಡ ಸುತ್ತಮುತ್ತಲೂ ಆ ಸರ್ವೆ ನಂಬರಿನಲ್ಲಿ ಒಂದು ಗುಂಟೆಯೂ ಕೂಡ ಖಾತೆ ಜಮೀನಾಗಲೀ, ಅಥವಾ ಯಾವುದೇ ರೀತಿಯ ಕೃಷಿ ಜಮೀನು ಇಲ್ಲ ಎನ್ನುವುದು ತೀರ್ಥಹಳ್ಳಿ ತಾಲ್ಲೂಕಿನ ಜನರು ಅರಿಯಬೇಕು.
ಪಕ್ಷದಲ್ಲಿ ಇದ್ದು, ಪಕ್ಷದ ಕೆಲವು ನಾಯಕರುಗಳು ನ್ಯಾಯದ ಪರವಾಗಿ ನಿಲ್ಲಲ್ಲು ಹಿಂದೇಟು ಹಾಕುವ ಉದ್ದೇಶದಿಂದ ಮತ್ತು ಕೆಲವು ಕಾಣದ ಕೈಗಳು ಅನ್ಯಾಯಕ್ಕೆ ಬೆಂಬಲವಾಗಿ ನಿಂತಿರುವುದರಿಂದ ಮನನೊಂದು ಈ ತೀರ್ಮಾನ ಅನಿವಾರ್ಯವಾಗಿದೆ. ನೂರಾರು ವರ್ಷಗಳ ಜಮೀನಿಗೆ ಪ್ರಭಾವಕ್ಕೆ ಒಳಗಾಗಿ ರಸ್ತೆ ಸಂಪರ್ಕ ಕಲ್ಪಿಸಲು ಆಗದ ತಾಲ್ಲೂಕು ಆಡಳಿತಕ್ಕೆ ಧಿಕ್ಕಾರವಿರಲಿ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾರು ಯಾರು ಯಾವ ಹಂತದಲ್ಲಿ ಒಂದು ರೈತ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ ಎಲ್ಲವನ್ನು ಜಿಲ್ಲಾ ಪತ್ರಕರ್ತರ ಎದುರು ತಿಳಿಸುತ್ತೇನೆ.
– ವಿನಾಯಕ ತುಪ್ಪದಮನೆ