ಹಲವು ವರ್ಷಗಳ ಕನಸು ಸಾಕಾರಕ್ಕೆ ಕ್ಷಣಗಣನೆ
– ಕೋಣಂದೂರು ಸಮುದಾಯ ಆರೋಗ್ಯ ಕೇಂದ್ರ ಲೋಕಾರ್ಪಣೆಗೆ ಸಜ್ಜು
– ಮೇ 28ರ ಮಧ್ಯಾಹ್ನ 12ಕ್ಕೆ ಆರೋಗ್ಯ ಕೇಂದ್ರ ಉದ್ಘಾಟನೆ
NAMMUR EXPRESS NEWS
ಕೋಣಂದೂರು: ಈ ಭಾಗದ ಬಹುದಿನಗಳ ನಿರೀಕ್ಷೆಯಾಗಿದ್ದ ನೂತನ ಸಮುದಾಯ ಆರೋಗ್ಯ ಕೇಂದ್ರ -ಲೋಕಾರ್ಪಣೆ ಕನಸು ಈಡೇರುತ್ತಿದೆ.
ತೀರ್ಥಹಳ್ಳಿಯನ್ನು ಹೊರತುಪಡಿಸಿದರೆ ಹೆಚ್ಚು ಜನಸಾಂದ್ರತೆ ಹೊಂದಿರುವ ಗ್ರಾಮ ಇದಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಹೋಬಳಿ ಕೇಂದ್ರ ಕೋಣಂದೂರಿಗೆ ಸಮುದಾಯ ಆರೋಗ್ಯ ಕೇಂದ್ರದ ಅಗತ್ಯವಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗದಲ್ಲಿ ₹9.8 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಿದೆ.
ಸೌಲಭ್ಯಗಳು: ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಗಳ ವ್ಯವಸ್ಥೆ ಇದೆ. 6 ವೈದ್ಯರು ಸೇರಿದಂತೆ 33 ಆರೋಗ್ಯ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ವೈದ್ಯರು, ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್ ಕರ್ತವ್ಯ ನಿರ್ವಹಿಸಲಿದ್ದಾರೆ. ಒ.ಟಿ.ವ್ಯವಸ್ಥೆ ಇರಲಿದೆ. ಬಿ.ಪಿ., ಮಧುಮೇಹ ಪರೀಕ್ಷೆಗೆ ಪ್ರತ್ಯೇಕ ವ್ಯವಸ್ಥೆ ಸಹ ಇರಲಿದೆ.
ಹೆಚ್ಚು ಕೂಲಿ ಕಾರ್ಮಿಕರು, ಬಡವರು ವಾಸವಿರುವ ಸುತ್ತ ಮುತ್ತಲಿನ ಗ್ರಾಮಗಳಿಂದ ದೂರದ ತೀರ್ಥಹಳ್ಳಿಗೆ ಹೋಗುವುದು ಕಷ್ಟ. ಆದ್ದರಿಂದ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ತಕ್ಷಣವೇ ನಿಯೋಜನೆ ಮಾಡಿ, ತಕ್ಷಣದಿಂದಲೇ ಕಾರ್ಯಾರಂಭ ಮಾಡಬೇಕು. ಈ ಬಗ್ಗೆ ಜನಪ್ರತಿನಿಧಿಗಳು. ಅಧಿಕಾರಿಗಳು ಗಮನ ಹರಿಸಬೇಕು. ಅಗತ್ಯ ಇರುವ ಪೀಠೋಪಕರಣ, ಸಲಕರಣೆಗಳನ್ನು ಶೀರ್ಘವಾಗಿ ಒದಗಿಸಬೇಕು. ಮುಂಗಾರು ಪ್ರಾರಂಭವಾಗುತ್ತಿದ್ದು, ಆರೋಗ್ಯ ಸೇವೆ ಮೊದಲ ಆದ್ಯತೆಯಾಗಬೇಕು’ ಎಂಬುದು ಈ ಭಾಗದ ಗ್ರಾಮಸ್ಥರ ಆಶಯವಾಗಿದೆ.
ಉದ್ಘಾಟನೆ ಮೇ 28 ಕ್ಕೆ:-
ಮೇ 28ರ ಮಧ್ಯಾಹ್ನ 12ಕ್ಕೆ ಸಮುದಾಯ ಆರೋಗ್ಯ ಕೇಂದ್ರ ಲೋಕಾ ರ್ಪಣೆಗೊಳ್ಳಲಿದೆ. ಶಾಸಕ ಆರಗ ಜ್ಞಾನೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಡಿ.ಎಚ್.ಒ. ನಟರಾಜ್, ಟಿ.ಎಚ್.ಒ. ಅನಿಕೇತ್, ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ವಾಸುದೇವ, ಉಪಾಧ್ಯಕ್ಷೆ ಸುಜಾತ ಚೂಡಾಮಣಿ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿರುವರು.
