ತೀರ್ಥಹಳ್ಳಿ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟ!?
– ನಾಲ್ಕೈದು ಯುವ ನಾಯಕರು ಪಕ್ಷ ಬಿಡುವ ಸಾಧ್ಯತೆ
– ಪಕ್ಷದೊಳಗಿನ ಆಂತರಿಕ ಭಿನ್ನಮತದಿಂದ ಅಸಮಾಧಾನ?
– ಮತ್ತೆ ಬಿಜೆಪಿಗೆ ಪ್ಲಸ್ ಆಗುತ್ತಾ ಈ ಬೆಳವಣಿಗೆ!
NAMMUR EXPRESS EXCLUSIVE
ತೀರ್ಥಹಳ್ಳಿ : ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಶುರುವಾಗಿದೆ. ಹಳಬರು, ಹೊಸಬರು ಹಾಗೂ ಇನ್ನೊಂದು ಗುಂಪು ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಈ ನಡುವೆ ಅನೇಕ ಯುವ ಮುಖಂಡರು ಕೆಲವೊಂದು ಸಮಸ್ಯೆಗಳಿಂದ ಪಕ್ಷ ಬಿಡಲು ಈಗಾಗಲೆ ಸಿದ್ಧತೆಯನ್ನು ನಡೆಸಿದ್ದಾರೆ. ಈಗಾಗಲೇ ಮತ್ತೊಂದು ಪಕ್ಷದ ಕದ ಕೂಡ ತಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣನೆ ಮಾಡುತ್ತಿರುವುದರಿಂದ ಇಂತಹ ಘಟನೆಗಳು ಕಳೆದ ಕೆಲವು ತಿಂಗಳಗಳಿಂದ ಘಟಿಸುತ್ತಿವೆ. ಹೀಗಾಗಿ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಾದ ಕೆಲವರು ಈ ಬಗ್ಗೆ ಬೇಸರವನ್ನ ಅನೇಕ ಸಂದರ್ಭಗಳಲ್ಲಿ ಹೊರ ಹಾಕಿದ್ದಾರೆ.
ಆದರೆ ಪಕ್ಷದ ಮುಖಂಡರುಗಳಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡ ಈ ಬಗ್ಗೆ ಕಾರ್ಯಕರ್ತರ ಸಮಸ್ಯೆ ಬಗ್ಗೆ ಗಮನ ವಹಿಸದೆ ಇರುವುದು, ಜೊತೆಗೆ ಪಕ್ಷದ ದುಡಿದ ಪ್ರಮುಖರ ಬಗ್ಗೆ ಆಸಕ್ತಿ ವಹಿಸದೆ ಇರುವುದು ಇದೀಗ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕೆಲವು ಮುಖಂಡರು ಈಗಾಗಲೇ ಪಕ್ಷ ಬಿಡುವ ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಮತ್ತೊಂದು ಪಕ್ಷದಿಂದ ಈ ಬಗ್ಗೆ ಅವರಿಗೆ ಕರೆ ಕೂಡ ಬಂದಿದೆ ಎಂದ ಮಾಹಿತಿ ಲಭ್ಯವಾಗಿದೆ.
ಪ್ರತಿ ಹೋಬಳಿಯಲ್ಲೂ ಅಸಮಾಧಾನ!
ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಪ್ರತಿ ಹೋಬಳಿ ಮಟ್ಟದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಸರ್ಕಾರ ಇದ್ದರೂ ಇಲ್ಲಿ ಇಬ್ಬರು ನಾಯಕರಿದ್ದರೂ ಸಣ್ಣ ಪುಟ್ಟ ಕೆಲಸ ಕೂಡ ಆಗುತ್ತಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಕೆಲವೇ ದಿನಗಳಲ್ಲಿ ಭಿನ್ನಮತ ಸ್ಪೋಟಗೊಳ್ಳಲಿದ್ದು ಅನೇಕರು ಪಕ್ಷ ಬಿಡುವತ್ತ ಗಮನ ವಹಿಸಿದ್ದಾರೆ ಎಂದು ಅನೇಕ ಮೂಲಗಳು ತಿಳಿದು ಬಂದಿದೆ.
ಪಕ್ಷದ ಅನೇಕ ಯುವ ಮುಖಂಡರುಗಳಿಗೆ ತೊಂದರೆಯಾದಲ್ಲಿ ಬೆನ್ನಿಗೆ ನಿಲ್ಲಬೇಕಾದ ನಾಯಕರಾದ ಕಿಮ್ಮನೆ ರತ್ನಾಕರ್ ಹಾಗೂ ಡಾ. ಆರ್ ಎಂ ಮಂಜುನಾಥ್ ಗೌಡ ಮತ್ತು ಪ್ರಮುಖ ಕಾಂಗ್ರೆಸ್ ಮುಖಂಡರು ಗಮನ ವಹಿಸುತ್ತಿಲ್ಲ. ಅದೇ ಆರಗ ಜ್ಞಾನೇಂದ್ರ ಈ ಸ್ಥಾನದಲ್ಲಿ ಇದ್ದಿದ್ದರೆ ಖಂಡಿತಾ ನಮಗೆ ಅನ್ಯಾಯ ಆಗುತ್ತಿರಲಿಲ್ಲ. ಅವರು ಪಕ್ಷದ ಕಾರ್ಯಕರ್ತರ ಬಗ್ಗೆ ಗಮನಿಸುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲ. ಬರೀ ಹಿಂಬಾಲಕರಿಗೆ ನ್ಯಾಯ, ಸವಲತ್ತು ಸಿಗುತ್ತದೆ ಎಂಬ ಬೇಸರ ನೊಂದ ಕಾರ್ಯಕರ್ತರಿಂದ ವ್ಯಕ್ತವಾಗಿದೆ.

ಯುವಕರಿಗೆ ಸಿಗದ ಗೌರವ?
ಕಾಂಗ್ರೆಸ್ ಪಕ್ಷದಲ್ಲಿ ಯುವಕರಿಗೆ ಗೌರವ ಸಿಗುತ್ತಿಲ್ಲ, ಮಂಜುನಾಥ ಗೌಡ ಪಕ್ಷಕ್ಕೆ ಬಂದ ಮೇಲೆ ಒಂದಷ್ಟು ಯುವಕರ ದಂಡು ಪಕ್ಷಕ್ಕೆ ಬಂದು ಕಳೆದ ಚುನಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಈಗ ಗೌರವ ಇಲ್ಲ, ಜತೆಗೆ ಸಣ್ಣ ಪುಟ್ಟ ಕೆಲಸ ಆಗುತ್ತಿಲ್ಲ. ಹೀಗಾಗಿ ಪಕ್ಷದಲ್ಲಿನ ಕೆಲವರಿಗೆ ಅಭದ್ರತೆ ಕಾಡುತ್ತಿದೆ ಎಂದು ಯುವ ಮುಖಂಡರೊಬ್ಬರು ತಿಳಿಸಿದ್ದಾರೆ.
ತಾಪಂ, ಜಿಪಂ, ಲೋಕಸಭಾ ಚುನಾವಣೆಗೆ ತೊಂದರೆ?
ಕಾಂಗ್ರೆಸ್ ಪಕ್ಷದಲ್ಲಿ ನ್ಯಾಯದ ಪರ ದನಿ ಇಲ್ಲದಾಗಿದೆ. ಹೀಗೆ ಕಾರ್ಯಕರ್ತರ ಕಡೆಗಣನೆ ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಲೋಕ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.
ಸರ್ಕಾರ ಬಂದರೂ ಯಾವುದಕ್ಕೂ ನೇಮಕ ಆಗಿಲ್ಲ
ಕಾಂಗ್ರೆಸ್ ಸರ್ಕಾರ ಬಂದು ವರ್ಷ ಆಗುತ್ತಾ ಬಂದರೂ ಇನ್ನು ತಾಲೂಕಿನ ಆಡಳಿತ ಹುದ್ದೆಗೆ ನಾಮ ನಿರ್ದೇಶನ ಆಗಿಲ್ಲ. ಈ ಬಗ್ಗೆ ನಾಯಕರಿಗೂ ಒಲವು ಇದ್ದಂತಿಲ್ಲ ಎಂಬ ಆರೋಪ ಕೇಳಿ ಬಂದಿದೆ.