ಡಿಜೆ ಆಫ್: ರಸ್ತೆಯಲ್ಲಿ ಕುಳಿತು ದೇವಂಗಿ ಗ್ರಾಮಸ್ತರ ಹೋರಾಟ!
– ಶಾಸಕರು ಸ್ಥಳಕ್ಕೆ ಬರುವಂತೆ ಪಟ್ಟು: ಕೊನೆಗೆ ಪೊಲೀಸರ ಮನವೊಲಿಕೆ
NAMMUR EXPRESS NEWS
ತೀರ್ಥಹಳ್ಳಿ: ಗಣೇಶ ವಿಸರ್ಜನೆ ವೇಳೆ ಡಿಜೆ ಬಂದ್ ಮಾಡಿಸಿದ್ದಕ್ಕೆ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ ದೇವಂಗಿ ಗ್ರಾಮಸ್ತರು ಕೆಲ ಹೊತ್ತು ರಸ್ತೆ ಮೇಲೆ ಕುಳಿತು ಪ್ರತಿಭಟನೆ ಮಾಡಿದ ಘಟನೆ ಶುಕ್ರವಾರ ನಡೆದಿದೆ. 97ನೇ ವರ್ಷದ ವಿಜೃಂಭಣೆಯ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು ಸುಮಾರು 11ಗಂಟೆ ವೇಳೆಗೆ ಡಿಜೆ ಬಂದ್ ಮಾಡಿಸಿದ್ದಕ್ಕೆ ನೂರಾರು ಯುವಕರು ಪೊಲೀಸರ ವಿರುದ್ಧ ಘೋಷಣೆ ಕೂಗಿ ನ್ಯಾಯಕ್ಕಾಗಿ ಅಗ್ರಹಿಸಿದರು.
ದೇವಂಗಿ ಸರ್ಕಲ್ ನಲ್ಲಿ ದೇವಂಗಿ ಹಾಗೂ ಹಿಲಿಕೆರೆ ಗಣಪತಿಗಳ ಸಮಾಗಮದ ವೇಳೆ ಸಾವಿರಾರು ಜನರು ಸೇರಿದ್ದರು. ಈ ವೇಳೆ ಪಟಾಕಿ ಹಾಗೂ ಡಿಜೆ ಶಬ್ದಗಳು ದುಪ್ಪಟ್ಟಾಗಿವೆ. ಜೊತೆಗೆ 3000ಕ್ಕೂ ಹೆಚ್ಚು ಜನರು ಸೇರಿದ್ದರಿಂದ ಮುಂಜಾಗೃತಾ ಕ್ರಮವಾಗಿ ಪೊಲೀಸರು ಡಿಜೆ ಬಂದ್ ಮಾಡಿಸಿದ್ದರು.
ತೀರ್ಥಹಳ್ಳಿ ಶಾಸಕರಿಗೂ ಕರೆ ಮಾಡಿದ್ದು, ಶಾಸಕ ಆರಗ ಜ್ಞಾನೇಂದ್ರ ಅನಾರೋಗ್ಯ ಕಾರಣ ಬರಲಿಲ್ಲ. ಇದರಿಂದ ಸಿಟ್ಟಾದ ಗ್ರಾಮಸ್ತರು ಆರಗ ಅವರಿಗೂ ದಿಕ್ಕಾರ ಕೂಗಿದ್ದಾರೆ. ಬಳಿಕ ಪೊಲೀಸರು ಪರಿಸ್ಥಿತಿಯನ್ನು ಶಾಂತಿಗೊಳಿಸಿ ನಂತರ ಗಣಪತಿ ವಿಸರ್ಜನೆ ಮಾಡಲಾಗಿದೆ.
ಅತೀ ಹೆಚ್ಚು ಯುವಕರ ಸಮಾಗಮ!
ದೇವಂಗಿ ಸರ್ಕಲ್ ಅಲ್ಲಿ ಇದೆ ಮೊದಲ ಬಾರಿಗೆ ಅತೀ ಹೆಚ್ಚು ಯುವಕರು ಸೇರಿದ್ದರು. ಸುತ್ತಮುತ್ತಲಿನ ಭಾಗದ ಯುವಕರು ಡಾನ್ಸ್ ಮಾಡಿದರು. ಡಿವೈಎಸ್ಪಿ ಗಜಾನನ ವಾಮನ ಸುತಾರಾ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.